
ಯಾದಗಿರಿ: ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಕಾರ್ಯಕಾರಿಣಿಗೆ ನೂತನವಾಗಿ ನಾಮನಿರ್ದೇಶನಗೊಂಡ ಸದಸ್ಯರನ್ನು ಸನ್ಮಾನಿಸಲಾಯಿತು.
ಜಿಲ್ಲಾ ಪತ್ರಿಕಾ ಭವನದಲ್ಲಿ ಬುಧವಾರ ನಡೆದ ಜಿಲ್ಲಾ ಕಾರ್ಯಕಾರಿಣಿ ಸಭೆಯಲ್ಲಿ ನೂತನ ಸದಸ್ಯರನ್ನು ಸಂಘದ ವತಿಯಿಂದ ಆತ್ಮೀಯವಾಗಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಸಂಘದ ಜಿಲ್ಲಾಧ್ಯಕ್ಷ ಮಲ್ಲಪ್ಪ ಸಂಕೀನ್, ಸಂಘದ ಪ್ರತಿಯೊಬ್ಬ ಸದಸ್ಯರು ಸಕ್ರಿಯವಾಗಿ ತೊಡಗಿಸಿಕೊಂಡು ಸಂಘದ ಪ್ರಗತಿಗೆ ಸಹಕರಿಸಬೇಕು ಎಂದು ಕರೆ ನೀಡಿದರು.
ಪತ್ರಕರ್ತರ ಹಿತಾಸಕ್ತಿ ಹಾಗೂ ಸಂಘದ ಬಲವರ್ಧನೆಗಾಗಿ ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡಬೇಕು. ಸರ್ಕಾರದಿಂದ ಪತ್ರಕರ್ತರಿಗೆ ದೊರೆಯಬೇಕಾದ ವಿವಿಧ ಸೌಲಭ್ಯಗಳನ್ನು ಕಲ್ಪಿಸಲು ಸಂಘವು ಪ್ರಾಮಾಣಿಕವಾಗಿ ಪ್ರಯತ್ನಿಸಬೇಕು ಎಂದರು.
ಜಿಲ್ಲೆಯಲ್ಲಿ ಸಂಘಟನೆಯು ಇನ್ನಷ್ಟು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುವ ಅಗತ್ಯವಿದೆ. ನೂತನವಾಗಿ ಜವಾಬ್ದಾರಿ ಪಡೆದಿರುವ ಸದಸ್ಯರು ತಮಗೆ ದೊರೆತಿರುವ ಅವಕಾಶವನ್ನು ಸಮರ್ಥವಾಗಿ ಬಳಸಿಕೊಂಡು ಸಂಘದ ಅಭಿವೃದ್ಧಿಗೆ ಶ್ರಮಿಸಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಜಿಲ್ಲಾ ಕಾರ್ಯಕಾರಿಣಿಗೆ ನಾಮನಿರ್ದೇಶನಗೊಂಡ ಹನುಮಂತ ಪಿ., ಗಣೇಶ್ ಪಾಟೀಲ್, ಭೀಮಣ್ಣ ವಡವಟ್, ನಾಗರಾಜ ಕೋಟೆ ಹಾಗೂ ಪದನಿಮಿತ್ತ ಸದಸ್ಯ ಮಹೇಶ್ ಕಲಾಲ್ ಅವರನ್ನು ಜಿಲ್ಲಾಧ್ಯಕ್ಷ ಮಲ್ಲಪ್ಪ ಸಂಕೀನ್ ಸನ್ಮಾನಿಸಿದರು.
ಸಂಘದ ಉಪಾಧ್ಯಕ್ಷ ವಿಶಾಲ್ ದೋರನಹಳ್ಳಿ, ಖಜಾಂಚಿ ರಾಜು ನಲ್ಲಿಕರ್, ಪರಶುರಾಮ ಐಕೂರು, ನಾಗಪ್ಪ ನಾಯ್ಕಲ್, ದೇವರಾಜ ನಾಯಕ ವರ್ಕನಹಳ್ಳಿ, ರಾಘವೇಂದ್ರ ಕೆ.ಬಿ., ಆನಂದ ಗೋರ್ಕಲ್, ಸಾಜೀದ್ ಹಯಾತ್ ಹಾಗೂ ರಾಜೇಂದ್ರ ಕಲಾಲ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.





























