Home ಜಿಲ್ಲೆ ಎಲ್.ಇ.ಡಿ ದೀಪ ಅಳವಡಿಕೆ ಯೋಜನೆಯಿಂದ ಪಾಲಿಕೆ ಆರ್ಥಿಕ ಹೊರೆ ಇಳಿಕೆ: ಯತ್ನಾಳ

ಎಲ್.ಇ.ಡಿ ದೀಪ ಅಳವಡಿಕೆ ಯೋಜನೆಯಿಂದ ಪಾಲಿಕೆ ಆರ್ಥಿಕ ಹೊರೆ ಇಳಿಕೆ: ಯತ್ನಾಳ

ವಿಜಯಪುರ, ಮೇ. 8: ನಗರದಲ್ಲಿ ಹಾಲಿ ಇರುವ ಸಾಂಪ್ರದಾಯಿಕ ಬೀದಿ ದೀಪಗಳನ್ನು ಬದಲಾಯಿಸಿ ಕೇಂದ್ರಿಕೃತ ಚಾಲನೆ ಮತ್ತು ನಿರ್ವಹಣೆಯುಳ್ಳ ಇಂಧನ ಕ್ಷಮೆತೆಯ ಎಲ್.ಇ.ಡಿ ದೀಪಗಳನ್ನು ಅಳವಡಿಸುವ ಯೋಜನೆ ಶೀಘ್ರದಲ್ಲೇ ಅನುಷ್ಠಾನಗೊಳಿಸಲಾಗುವುದು ಎಂದು ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ವಿಜಯಪುರ ನಗರದ ಸುಮಾರು 36.36 ಕೋಟಿ ಮೊತ್ತದ ಎಲ್.ಇ.ಡಿ ದೀಪಗಳ ಅಳವಡಿಕೆ ಯೋಜನೆ ಅನುಷ್ಠಾನಗೊಳಿಸಲು ಅನುಮೋದಿಸಿರುವುದಾಗಿ ಗುರುವಾರ ವಿಧಾನಸೌಧದಲ್ಲಿ ಜರುಗಿದ ಅರ್ಜಿಗಳ ಸಮಿತಿ ಸಭೆಗೆ ಹಾಜರಿದ್ದ ನಗರಾಭಿವೃದ್ಧಿ ಇಲಾಖೆಯ ಕಾರ್ಯದರ್ಶಿ ದೀಪಾ ಚೋಳನ್ ಅವರು ಈ ಬಗ್ಗೆ ಮಾಹಿತಿ ನೀಡಿದ್ದಾರೆ ಎಂದಿದ್ದಾರೆ.
ಬಹಳ ದಿನಗಳಿಂದ ನೆನೆಗುದಿಗೆ ಬಿದ್ದಿದ್ದ ಅತೀ ಅವಶ್ಯಕ ಈ ಯೋಜನೆ ಅನುಷ್ಠಾನಗೊಳ್ಳುವುದರಿಂದ ವಿಜಯಪುರ ನಗರದ ಎಲ್ಲ ವಾರ್ಡ್ ಗಳ ಪ್ರತಿಯೊಂದು ಬಡಾವಣೆ/ಕಾಲೊನಿಗಳಲ್ಲಿಯೂ ದೀಪ ಜಗಮಗಿಸಲಿದೆ. ಜೊತೆಗೆ ಅಟೋಮೆಟಿಕ್ ದೀಪ ಬೆಳಗುವುದು ಮತ್ತು ಆರುವುದರಿಂದ ಹಗಲು ವೇಳೆಯಲ್ಲಿ ಅನಗತ್ಯವಾಗಿ ವಿದ್ಯುತ್ ವ್ಯರ್ಥವಾಗುವುದು ತಪ್ಪಲಿದೆ.
ಮಹಾನಗರ ಪಾಲಿಕೆಗೆ ಪ್ರತಿ ವರ್ಷ ಆಗುತ್ತಿರುವ ಸುಮಾರು ರೂ.12 ಕೋಟಿ ವಿದ್ಯುತ್ ಹೊರೆಯಲ್ಲಿಯೂ ಶೇ. 61 ರಷ್ಟು ಇಳಿಕೆ ಆಗಲಿದೆ. ಜೊತೆಗೆ ಪ್ರಸ್ತುತ ಪಾಲಿಕೆಯಲ್ಲಿ ಸಾಂಪ್ರದಾಯಿಕ ಬೀದಿ ದೀಪ ನಿರ್ವಹಣೆಗಾಗಿ ಪ್ರತಿ ತಿಂಗಳು ಆಗುತ್ತಿರುವ ರೂ.12 ಲಕ್ಷಕ್ಕಿಂತ ಹೆಚ್ಚು ವೆಚ್ಚದಲ್ಲಿಯೂ ಪಾಲಿಕೆಗೆ ಉಳಿತಾಯವಾಗಲಿದೆ ಎಂದು ಯತ್ನಾಳ ತಿಳಿಸಿದ್ದಾರೆ.
ಈ ಯೋಜನೆಗೆ ಸಂಬಂಧಿಸಿದಂತೆ ಎರಡು ಬಾರಿ ಟೆಂಡರ್ ಕರೆದಾಗ ಸಿಂಗಲ್ ಟೆಂಡರ್ ಆಗಿತ್ತು. ಮೂರನೇ ಬಾರಿ ಟೆಂಡರ್ ಪ್ರಕ್ರಿಯೆ ಹಂತದಲ್ಲಿ ಕೆಲವೊಂದು ಮಾರ್ಪಾಡು ಮಾಡಿಯೂ ಯೋಜನೆ ಅನುಷ್ಠಾನ ವಿಳಂಬ ಆಗುತ್ತಿರುವ ಬಗ್ಗೆ ಅಧಿವೇಶನದಲ್ಲಿಯೂ ಸರ್ಕಾರದ ಗಮನಸೆಳೆದು ಒತ್ತಾಯಿಸಿದ್ದೆ. ಅಲ್ಲದೆ, ನಗರಾಭಿವೃದ್ಧಿ ಇಲಾಖೆ ಸಚಿವರು, ಅಧಿಕಾರಿಗಳಿಯೂ ಅನೇಕ ಬಾರಿ ಪತ್ರ ಬರೆದು ಒತ್ತಾಯಿಸಿದ್ದರಿಂದ ಯೋಜನೆ ಅನುಷ್ಠಾನಕ್ಕೆ ಅನುಮೋದನೆ ದೊರೆತಿದೆ ಎಂದು ಶಾಸಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.