
ಸಂಜೆವಾಣಿ ವಾರ್ತೆ,
ವಿಜಯಪುರ, ಜೂ. ೧೮: ಜಿಲ್ಲೆಯ ತಿಕೋಟಾ ತಾಲೂಕಿನ ತಾಜಪುರ ಹೆಚ್ ಗ್ರಾಮ ಪಂಚಾಯತಿಯಲ್ಲಿ ಮನರೇಗಾ ಕಾಮಗಾರಿ ಸ್ಥಳದಲ್ಲಿ ಮಾಹಿತಿ ಶಿಕ್ಷಣ ಮತ್ತು ಸಂವಹನ ಕಾರ್ಯಕ್ರಮದಡಿ ಗ್ರಾಮ ಪಂಚಾಯತಿ ವತಿಯಿಂದ ಉಚಿತ ಆರೋಗ್ಯ ಶಿಬಿರವನ್ನು ಏರ್ಪಡಿಸಲಾಯಿತು.
ಎಡಿ ಬಸವರಾಜ ಸಂಕಗೊAಡ ಕಾರ್ಯಕ್ರಮವನ್ನು
ಉದ್ಘಾಟಿಸಿ ಅವರು ಮಾತನಾಡಿ,”ಗ್ರಾಮದಲ್ಲಿ ಮನರೇಗಾ ಯೋಜನೆಯಡಿ ಪ್ರಗತಿಯಲ್ಲಿರುವ ಕಾಮಗಾರಿಯಲ್ಲಿ ಕೆಲಸ ನಿರ್ವಹಿಸುತ್ತಿರುವ ಎಲ್ಲಾ ಕೂಲಿಕಾರರು ತಮ್ಮ ಕೆಲಸದ ಜೊತೆಗೆ ಆರೋಗ್ಯದ ಕಡೆ ಗಮನಹರಿಸುವುದು ಅತೀ ಮುಖ್ಯವಾಗಿದೆ. ಒಬ್ಬ ವ್ಯಕ್ತಿಗೆ ಆರೋಗ್ಯಕ್ಕಿಂತ ದೊಡ್ಡದಾದ ಭಾಗ್ಯ ಯಾವುದೂ ಇಲ್ಲ. ಇದನ್ನು ಅರಿತು ಗ್ರಾಮ ಪಂಚಾಯತಿ ಪಿಡಿಓ ಉಮೇಶ ಕನಮಡಿ ಅವರ ಮುಂದಾಳತ್ವದಲ್ಲಿ ಆರೋಗ್ಯ ಶಿಬಿರ ಆಯೋಜಿಸಿರುವುದು ನಿಜಕ್ಕೂ ಶ್ಲಾಘನೀಯ. ಕೂಲಿಕಾರರು ವೈದ್ಯರು ನೀಡುವ ಮಾತ್ರೆಗಳನ್ನು ಸರಿಯಾಗಿ ಪಡೆದುಕೊಳ್ಳಿ ಮತ್ತು ಅವರು ನೀಡುವ ಸಲಹೆಗಳನ್ನು ತಪ್ಪದೇ ಪಾಲಿಸಿ ಎಂದರು.
ನರೇಗಾದಡಿ ಕೆಲಸ ಮಾಡುವ ಕೂಲಿಕಾರರು ದಿನವಿಡೀ ಬಿಸಿಲು, ಧೂಳು, ಮಳೆ ಎನ್ನದೇ ದುಡಿಯುತ್ತಾರೆ. ಇದನ್ನು ಗಮನಿಸಿ ಗ್ರಾಮ ಪಂಚಾಯತಿಯವರು “ನರೇಗಾ ಕೂಲಿಕಾರರ ಆರೋಗ್ಯ ಶಿಬಿರ” ಆಯೋಜಿಸಿದೆ. ಇಂತಹ ಆರೋಗ್ಯ ಶಿಬಿರದಿಂದ ಜನರಲ್ಲಿ ಚೈತನ್ಯ ಹೆಚ್ಚಳವಾಗಿ ಕೆಲಸವು ಬಹಳ ಅಚ್ಚುಕಟ್ಟಾಗಿ ಆಗುತ್ತದೆ. ಕೂಲಿಕಾರರ ಸಾಮರ್ಥ್ಯ ಹೆಚ್ಚುತ್ತದೆ. ಅವರಲ್ಲಿ ಸಕಾರಾತ್ಮಕತೆ ಹೆಚ್ಚಳವಾಗುತ್ತದೆ. ಆರೋಗ್ಯದ ಕುರಿತು ಮಾಹಿತಿ ದೊರೆಯುತ್ತದೆ. ಸ್ವಚ್ಛತೆಯ ಅರಿವು ಮೂಡುತ್ತದೆ. ಹೀಗೆ ಈ ಶಿಬಿರದಿಂದ ಜನರಿಗೆ ಬಹಳಷ್ಟು ಅನುಕೂಲವಿದೆ ಎಂದರು.
ಈ ಆರೋಗ್ಯ ಶಿಬಿರದಲ್ಲಿ ಆರೋಗ್ಯ ಉಪಕೇಂದ್ರ, ತಾಜಪುರ ಹೆಚ್ ಮತ್ತು ವಿಜಯಪುರದ ಫ್ಯಾಮಿಲಿ ಪ್ಲ್ಯಾನಿಂಗ್ ಅಸೋಸಿಯೇಶನ್ ವೈದ್ಯರು ಹಾಜರಾಗಿ ಕೂಲಿಕಾರರ ಆರೋಗ್ಯ ತಪಾಸಣೆ ನಡೆಸಿದರು.
ಈ ಸಂದರ್ಭದಲ್ಲಿ ತಾಲೂಕು ಮಾಹಿತಿ, ಶಿಕ್ಷಣ ಮತ್ತು ಸಂವಹನ ಸಂಯೋಜಕ ಕಲ್ಲಪ್ಪ ನಂದರಗಿ, ಗ್ರಾಮ ಪಂಚಾಯತಿ ಕಾರ್ಯದರ್ಶಿ ಚಂದ್ರಶೇಖರ ಬಿದರಿ, ಸಹಾಯಕ ಅಭಿಯಂತರರಾದ ಶ್ರೀಧರ ಸಾವಳಗಿ, ವಿಜಯಪುರದ ಫ್ಯಾಮಿಲಿ ಪ್ಲ್ಯಾನಿಂಗ್ ಅಸೋಸಿಯೇಶನ್ ನ ಸುಮಂಗಲಾ ಬೇನಾಳ, ರಾಘವೇಂದ್ರ ಪೂಜಾರಿ, ಆರೋಗ್ಯ ಉಪಕೇಂದ್ರದ ಕೆ.ವಾಯ್.ಕುಂಬಾರ, ಡಿಇಓ ಹಾಜಿಸಾಬ ಮುಲ್ಲಾ, ಕಾಯಕ ಬಂಧು ಹನಮಂತ ಕಬ್ಬೂರ, ಗ್ರಾಮ ಪಂಚಾಯತಿಯ ಇಬ್ರಾಹಿಂ ಮೊಕಾಶಿ, ರಾಜಕುಮಾರ ಮಸೂತಿ ಸೇರಿದಂತೆ ಇತರರು ಇದ್ದರು.


























