Home ಜಿಲ್ಲೆ ಬ್ರಿಟಿಷರಿಗೆ ತಕ್ಕ ಪ್ರತ್ಯುತ್ತರ ನೀಡಿದ ಕಿತ್ತೂರು ರಾಣಿ ಚೆನ್ನಮ್ಮ:ಹಿಪ್ಪರಗಿ

ಬ್ರಿಟಿಷರಿಗೆ ತಕ್ಕ ಪ್ರತ್ಯುತ್ತರ ನೀಡಿದ ಕಿತ್ತೂರು ರಾಣಿ ಚೆನ್ನಮ್ಮ:ಹಿಪ್ಪರಗಿ

ತಾಳಿಕೋಟೆ: ಬ್ರಿಟಿಷರ ವಿರುದ್ಧ ಧೈರ್ಯದಿಂದ ಹೋರಾಡಿ, ನಾಡಿನ ಸ್ವಾತಂತ್ರ÷್ಯ ಮತ್ತು ಸ್ವಾಭಿಮಾನಕ್ಕಾಗಿ ಶ್ರಮಿಸಿದ ವೀರ ಮಹಿಳೆ ಕಿತ್ತೂರು ರಾಣಿ ಚೆನ್ನಮ್ಮನವರಾಗಿದ್ದಾರೆಂದು ಬಾಲಭಾರತಿ ವಿದ್ಯಾಮಂದಿರದ ನಿವೃತ್ತ ಪ್ರಾಚಾರ್ಯ ಮಲ್ಲಿಕಾರ್ಜುನ ಹಿಪ್ಪರಗಿ ಹೇಳಿದರು.
ಶುಕ್ರವಾರ ಸ್ಥಳೀಯ ತಾಲೂಕು ಆಡಳಿತದ ವತಿಯಿಂದ ಆಯೋಜಿಸಲಾಗಿದ್ದ ಕಿತ್ತೂರು ರಾಣಿ ಚೆನ್ನಮ್ಮ ಜಯಂತಿ ಕಾರ್ಯಕ್ರಮದಲ್ಲಿ ರಾಣಿ ಚೆನ್ನಮ್ಮ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಅವರು ಮಾತನಾಡಿದರು. ೧೭೭೮ರ ಅಕ್ಟೋಬರ್ ೨೩ರಂದು ಕಾಕತಿ ಗ್ರಾಮದಲ್ಲಿ ಪದ್ಮಾವತಿ ಮತ್ತು ಧೂಳಪ್ಪಗೌಡ ದಂಪತಿಯ ಪುತ್ರಿಯಾಗಿ ಜನಿಸಿದ ಚೆನ್ನಮ್ಮ ಅವರು ಬಾಲ್ಯದಿಂದಲೇ ಧೈರ್ಯ, ಸಾಹಸ ಮತ್ತು ಶೌರ್ಯ ಗುಣಗಳನ್ನು ಹೊಂದಿದ್ದರು. ತಮ್ಮ ಹದಿನಾಲ್ಕನೇ ವಯಸ್ಸಿನಲ್ಲಿ ವಿವಾಹವಾದ ಅವರು, ಪತಿ ಹಾಗೂ ಪುತ್ರನ ಅಕಾಲಿಕ ಮರಣದ ನಂತರವೂ ಎದೆಗುಂದಲಿಲ್ಲ. ತಮ್ಮ ದತ್ತುಪುತ್ರನನ್ನು ಉತ್ತರಾಧಿಕಾರಿಯಾಗಿ ಸ್ವೀಕರಿಸಿದ ನಿರ್ಧಾರವನ್ನು ಬ್ರಿಟಿಷರು ವಿರೋಧಿಸಿದಾಗ, ಅವರ ವಿರುದ್ಧ ದಿಟ್ಟತನದಿಂದ ಹೋರಾಡಿದರು ಎಂದು ತಿಳಿಸಿದರು.
ಬ್ರಿಟಿಷ್ ಅಧಿಕಾರಿ ಥ್ಯಾಕ್ರೆ ನೇತೃತ್ವದ ಪಡೆಗಳಿಗೆ ಕಿತ್ತೂರು ರಾಣಿ ಚೆನ್ನಮ್ಮ ಅವರು ಧೈರ್ಯದಿಂದ ಪ್ರತಿರೋಧ ಒಡ್ಡಿದರು. ೧೮೨೪ರಲ್ಲಿ ನಡೆದ ಕಿತ್ತೂರು ಹೋರಾಟದಲ್ಲಿ ಬ್ರಿಟಿಷರ ವಿರುದ್ಧ ಹೋರಾಡಿದ ಅವರು, ತಮ್ಮ ಶೌರ್ಯದಿಂದ ಇತಿಹಾಸದಲ್ಲಿ ಅಚ್ಚಳಿಯದ ಸ್ಥಾನ ಪಡೆದಿದ್ದಾರೆ ಎಂದರು. ರಾಣಿ ಚೆನ್ನಮ್ಮ ಅವರಿಗೆ ಬಲ್ಲಪ್ಪ, ಗುರುಸಿದ್ದಪ್ಪ ಹಾಗೂ ಸಂಗೊಳ್ಳಿ ರಾಯಣ್ಣ ಸೇರಿದಂತೆ ಅನೇಕ ವೀರರು ಬೆಂಬಲವಾಗಿ ನಿಂತು ಹೋರಾಟದಲ್ಲಿ ಪಾಲ್ಗೊಂಡಿದ್ದರು. ದೇಶದ ಸ್ವಾಭಿಮಾನಕ್ಕಾಗಿ ಹೋರಾಡಿದ ಇಂತಹ ಮಹನೀಯರ ಜೀವನ ಮತ್ತು ಆದರ್ಶಗಳನ್ನು ಇಂದಿನ ಯುವಜನತೆ ತಿಳಿದುಕೊಳ್ಳಬೇಕು ಎಂದು ಹೇಳಿದರು. ಬ್ರಿಟಿಷರ ವಿರುದ್ಧ ಹೋರಾಡಿದ ರಾಣಿ ಚೆನ್ನಮ್ಮ ಅವರನ್ನು ಬಂಧಿಸಿ ಜೈಲಿನಲ್ಲಿರಿಸಲಾಯಿತು. ಅಲ್ಲಿಯೇ ಅವರು ಕೊನೆಯುಸಿರೆಳೆದರು. ಅವರ ತ್ಯಾಗ, ಶೌರ್ಯ ಮತ್ತು ದೇಶಪ್ರೇಮವನ್ನು ಸ್ಮರಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಇಂತಹ ರಾಷ್ಟಮಾತೆ ಚನ್ನಮ್ಮಾಜಿಯವರ ಆದರ್ಶಗಳನ್ನು ಮಕ್ಕಳಿಗೆ ತಲುಪಿಸುವದರೊಂದಿಗೆ ಜೀವನದಲ್ಲಿ ಅಳವಡಿಸಿಕೊಳ್ಳುವಂತಹ ಕಾರ್ಯವಾಗಬೇಕೆಂದರು.
ಕ್ಷೇತ್ರ ಸಮನ್ವಯ ಅಧಿಕಾರಿ ಆರ್.ಬಿ.ದಮ್ಮೂರಮಠ ಅವರು ಚನ್ನಮ್ಮಳ ದೈರ್ಯ, ಶೌರ್ಯ ಮತ್ತು ಪರಾಕ್ರಮ ಅಲ್ಲದೇ ಅವರ ನಾಯಕತ್ವಗುಣವನ್ನು ವಿವರಿಸಿದರು.
ಈ ಸಮಯದಲ್ಲಿ ತಹಶಿಲ್ದಾರ ಮಲ್ಲಿಕಾರ್ಜುನ ಅರಕೇರಿ, ಪಂಚಮಸಾಲಿ ಸಮಾಜದ ಅಧ್ಯಕ್ಷ ಡಾ.ವ್ಹಿ.ಎಸ್.ಕಾರ್ಚಿ, ಸಮೂದಾಯ ಆರೋಗ್ಯ ಕೇಂದ್ರದ ಆಡಳಿತ ವೈಧ್ಯಾಧಿಕಾರಿ ಡಾ.ಎ.ಜಿ.ಬಿರಾದಾರ, ಒಳಗೊಂಡು ವಿವಿಧ ಇಲಾಖಾ ಅಧಿಕಾರಿಗಳು, ಸಮಾಜ ಬಾಂದವರು, ಅಭಿಮಾನಿಗಳು ಉಪಸ್ಥಿತರಿದ್ದರು.
ಸಿಆರ್‌ಪಿ ರಾಜು ವಿಜಾಪೂರ ಸ್ವಾಗತಿಸಿ ವಂದಿಸಿದರು.