Home ಜಿಲ್ಲೆ ಉಳಿದ ಐದು ತಾಲ್ಲೂಕುಗಳನ್ನು ಬರಪೀಡಿತವೆಂದು ಘೋಷಿಸಲು ಕರವೇ ಒತ್ತಾಯ

ಉಳಿದ ಐದು ತಾಲ್ಲೂಕುಗಳನ್ನು ಬರಪೀಡಿತವೆಂದು ಘೋಷಿಸಲು ಕರವೇ ಒತ್ತಾಯ

ಯಾದಗಿರಿ: ಜಿಲ್ಲೆಯ ಶಹಾಪುರ ತಾಲ್ಲೂಕನ್ನು ಮಾತ್ರ ಬರಪೀಡಿತ ಪ್ರದೇಶವೆಂದು ಘೋಷಿಸಿ, ಉಳಿದ ಯಾದಗಿರಿ, ಗುರುಮಠಕಲ್, ವಡಗೇರಾ, ಸುರಪುರ ಹಾಗೂ ಹುಣಸಗಿ ತಾಲ್ಲೂಕುಗಳನ್ನು ಬರಪೀಡಿತ ಪ್ರದೇಶಗಳೆಂದು ಘೋಷಿಸದೆ ಸರ್ಕಾರ ರೈತರಿಗೆ ಅನ್ಯಾಯ ಮಾಡಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ಆರೋಪಿಸಿದೆ.
ಈ ಸಂಬAಧ ಕರವೇ ಯಾದಗಿರಿ ತಾಲ್ಲೂಕು ಘಟಕದ ವತಿಯಿಂದ ಗುರುವಾರ ತಹಶೀಲ್ದಾರ್ ಕಚೇರಿ ಎದುರು ಪ್ರತಿಭಟನೆ ನಡೆಸಿ, ತಹಶೀಲ್ದಾರ್ ಮುಖಾಂತರ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಕರವೇ ಮುಖಂಡ ಮಲ್ಲು ಮಾಳಿಕೇರಿ, ‘ಜಿಲ್ಲೆಯ ಒಂದು ತಾಲ್ಲೂಕನ್ನು ಮಾತ್ರ ಬರಪೀಡಿತವೆಂದು ಘೋಷಿಸಿರುವುದು ಉಳಿದ ತಾಲ್ಲೂಕುಗಳ ರೈತರ ಗಾಯದ ಮೇಲೆ ಬರೆ ಎಳೆದಂತಾಗಿದೆ. ಕೂಡಲೇ ಸರ್ಕಾರ ತನ್ನ ನಿರ್ಧಾರವನ್ನು ಮರುಪರಿಶೀಲಿಸಿ ಉಳಿದ ಐದು ತಾಲ್ಲೂಕುಗಳನ್ನೂ ಬರಪೀಡಿತವೆಂದು ಘೋಷಿಸಬೇಕು’ ಎಂದು ಒತ್ತಾಯಿಸಿದರು.
ಜಿಲ್ಲೆಯಲ್ಲಿ ಜೂನ್ ಮೊದಲ ವಾರದಲ್ಲಿ ಉತ್ತಮ ಮಳೆಯಾಗಿದ್ದರಿಂದ ರೈತರು ಬಿತ್ತನೆ ಆರಂಭಿಸಿದ್ದರು. ಶೇ.೯೦ರಷ್ಟು ಬಿತ್ತನೆ ಪೂರ್ಣಗೊಂಡ ಬಳಿಕ ಜೂನ್ ಅಂತ್ಯದಿAದ ಜುಲೈ ಮೊದಲ ವಾರದವರೆಗೆ ಮಳೆ ಕೈಕೊಟ್ಟ ಪರಿಣಾಮ ಹೆಸರು, ತೊಗರಿ, ಹತ್ತಿ ಸೇರಿದಂತೆ ವಿವಿಧ ಬೆಳೆಗಳಿಗೆ ತೇವಾಂಶದ ಕೊರತೆ ಉಂಟಾಗಿದೆ. ಪರಿಣಾಮ ಬಿತ್ತಿದ ಬೆಳೆಯ ಬಹುಪಾಲು ಮೊಳಕೆಯೊಡೆಯದೆ ಹಾನಿಯಾಗಿದೆ ಎಂದು ಅವರು ತಿಳಿಸಿದರು.
ಮಳೆ ಕೊರತೆಯಿಂದ ರೈತರು ಎರಡನೇ ಬಾರಿಗೆ ಬಿತ್ತನೆ ಮಾಡಿದ್ದರೂ ನಿರೀಕ್ಷಿತ ಮಳೆಯಾಗದೆ ಮತ್ತೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಒಣ ಬೇಸಾಯಕ್ಕೆ ಎಕರೆಗೆ ೩೦ ಸಾವಿರದಿಂದ ?೪೦ ಸಾವಿರ ಹಾಗೂ ನೀರಾವರಿ ಪ್ರದೇಶದಲ್ಲಿ ?೪೫ ಸಾವಿರದಿಂದ ೫೦ ಸಾವಿರದವರೆಗೆ ಖರ್ಚು ಮಾಡಲಾಗಿದೆ. ಸಾಲ ಮಾಡಿ ಕೃಷಿ ಮಾಡಿರುವ ರೈತರು ಇದೀಗ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ ಎಂದು ಹೇಳಿದರು.
ಕರವೇ ಜಿಲ್ಲಾಧ್ಯಕ್ಷ ಟಿ.ಎನ್. ಭೀಮುನಾಯಕ ಮಾತನಾಡಿ, ಶಹಾಪುರ ತಾಲ್ಲೂಕನ್ನು ಮಾತ್ರ ಬರಪೀಡಿತವೆಂದು ಘೋಷಿಸಿ ಉಳಿದ ಐದು ತಾಲ್ಲೂಕುಗಳನ್ನು ಕಡೆಗಣಿಸಿರುವುದು ಖಂಡನೀಯ. ಮಳೆ ಕೊರತೆ ಹಾಗೂ ಬೆಳೆ ನಷ್ಟದಿಂದ ರೈತರು ಮತ್ತು ಕೃಷಿ ಕೂಲಿಕಾರ್ಮಿಕರು ತೀವ್ರ ಸಂಕಷ್ಟದಲ್ಲಿದ್ದಾರೆ. ಉದ್ಯೋಗದ ಕೊರತೆಯಿಂದ ಸಾವಿರಾರು ಜನರು ಬೆಂಗಳೂರು, ಮುಂಬೈ ಸೇರಿದಂತೆ ವಿವಿಧ ನಗರಗಳಿಗೆ ವಲಸೆ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಹೇಳಿದರು.
ಜಿಲ್ಲೆಯ ಬರ ಪರಿಸ್ಥಿತಿಯ ವಾಸ್ತವಾಂಶವನ್ನು ವೈಜ್ಞಾನಿಕವಾಗಿ ಅಧ್ಯಯನ ಮಾಡಿ ಸರ್ಕಾರಕ್ಕೆ ಮನವರಿಕೆ ಮಾಡುವಲ್ಲಿ ಜನಪ್ರತಿನಿಧಿಗಳು ಹಾಗೂ ಜಿಲ್ಲಾಡಳಿತ ವಿಫಲವಾಗಿವೆ ಎಂದು ಅವರು ಆರೋಪಿಸಿದರು.
ಉಳಿದ ಐದು ತಾಲ್ಲೂಕುಗಳನ್ನು ಕೂಡಲೇ ಬರಪೀಡಿತ ಪ್ರದೇಶಗಳೆಂದು ಘೋಷಿಸಿ, ರಾಜ್ಯ ಸರ್ಕಾರದ ಎಸ್‌ಡಿಆರ್‌ಎಫ್ ಹಾಗೂ ಕೇಂದ್ರ ಸರ್ಕಾರದ ಎನ್‌ಡಿಆರ್‌ಎಫ್ ಮಾರ್ಗಸೂಚಿಗಳಡಿ ರೈತರಿಗೆ ಸೂಕ್ತ ಪರಿಹಾರ ಒದಗಿಸಬೇಕು. ಒಣ ಬೇಸಾಯದ ರೈತರಿಗೆ ಎಕರೆಗೆ ೨೫ ಸಾವಿರದಿಂದ ೩೦ ಸಾವಿರ ಹಾಗೂ ನೀರಾವರಿ ಪ್ರದೇಶದ ರೈತರಿಗೆ ಎಕರೆಗೆ ೪೫ ಸಾವಿರದಿಂದ ೫೦ ಸಾವಿರ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.
ಸೆಪ್ಟೆಂಬರ್ ೧೫ರೊಳಗೆ ಬೇಡಿಕೆ ಈಡೇರಿಸದಿದ್ದರೆ ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಿ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ಸಿದ್ದುನಾಯಕ ಹತ್ತಿಕುಣಿ, ನಿಂಗಪ್ಪ ಗುಡಗುಡಿ, ವಿಶ್ವರಾಜ ಪಾಟೀಲ್, ಸಿದ್ದಪ್ಪ ಕೂಯಿಲೂರು, ಭೀಮರಾಯ ರಾಮಸಮುದ್ರ, ಸಿದ್ದಪ್ಪ ಕ್ಯಾಸಪನಳ್ಳಿ, ಅಶೋಕ ನಾಯಕ, ಸುಭಾಷ ಯರಗೋಳ, ವೆಂಕಟರಾಮುಲು ಸೈದಾಪುರ, ಸುರೇಶ ಬೆಳಗುಂದಿ, ಜರ್ನಾಧನ ಬಡಿಗೇರಾ, ಮಹೇಶ ಠಾಣಗುಂದಿ ಸೇರಿದಂತೆ ಕರವೇ ಕಾರ್ಯಕರ್ತರು ಹಾಗೂ ರೈತರು ಭಾಗವಹಿಸಿದ್ದರು.