
ಕಲಬುರಗಿ, ಸೆ. 10: ಸೆಪ್ಟೆಂಬರ್ 17ರಂದು ನಡೆಯಲಿರುವ ಕಲ್ಯಾಣ ಕರ್ನಾಟಕ ಉತ್ಸವದಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸೇರಿದಂತೆ ಸಚಿವರು, ಶಾಸಕರು, ಸಂಸದರು ಹಾಗೂ ಇತರ ಚುನಾಯಿತ ಜನಪ್ರತಿನಿಧಿಗಳು ಭಾಗವಹಿಸಲಿರುವ ಹಿನ್ನೆಲೆಯಲ್ಲಿ ಕಾರ್ಯಕ್ರಮದ ಯಶಸ್ಸಿಗೆ ಎಲ್ಲ ಇಲಾಖೆಗಳ ಅಧಿಕಾರಿಗಳು ಪರಸ್ಪರ ಸಮನ್ವಯತೆಯಿಂದ ಕಾರ್ಯನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ಇಕ್ರಂ ಶರೀಫ್ ಸೂಚಿಸಿದರು.
ಬುಧವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಅಧಿಕಾರಿಗಳೊಂದಿಗೆ ಕಲ್ಯಾಣ ಕರ್ನಾಟಕ ಉತ್ಸವದ ಪೂರ್ವಭಾವಿ ಸಭೆ ನಡೆಸಿ ಮಾತನಾಡಿದ ಅವರು, ಸೆ. 17 ರಂದು ಬೆಳಿಗ್ಗೆ 8.30 ಗಂಟೆಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಸರ್ದಾರ್ ವಲ್ಲಭಭಾಯಿ ಪಟೇಲ್ ಪ್ರತಿಮೆಗೆ ಮಾಲಾರ್ಪಣೆ ಮಾಡಲಿದ್ದಾರೆ. ಬಳಿಕ ಡಿ.ಎ.ಆರ್. ಪೆÇಲೀಸ್ ಪರೇಡ್ ಮೈದಾನದಲ್ಲಿ ನಡೆಯುವ ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆಯಲ್ಲಿ ಧ್ವಜಾರೋಹಣ ನೆರವೇರಿಸಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ
ಎಂದು ಮುಖ್ಯಮಂತ್ರಿಗಳ ಪ್ರವಾಸದ ವಿವರಗಳನ್ನು ಹಂಚಿಕೊಂಡರು.
ಸೆ. 16ರ ಸಂಜೆ ನಗರದ ಪ್ರಮುಖ ವೃತ್ತಗಳು ಹಾಗೂ ವಿಧಾನಸೌಧದ ಸುತ್ತಮುತ್ತಲಿನ ಸರ್ಕಾರಿ ಕಚೇರಿಗಳಲ್ಲಿ ದೀಪಾಲಂಕಾರ ಮಾಡುವಂತೆ ಸೂಚಿಸಿದರು. ಮುಖ್ಯಮಂತ್ರಿಗಳಿಂದ ಸೌಲಭ್ಯ ವಿತರಣೆ ಮಾಡಲು ಉದ್ದೇಶಿಸಿರುವ ಫಲಾನುಭವಿಗಳ ಪಟ್ಟಿಯನ್ನು ಸಂಬಂಧಿಸಿದ ಇಲಾಖೆಗಳು ಮುಂಚಿತವಾಗಿಯೇ ಸಲ್ಲಿಸಬೇಕು. ಕೊನೆಯ ಕ್ಷಣದಲ್ಲಿ ಸಲ್ಲಿಸುವ ಪಟ್ಟಿಗಳನ್ನು ಪರಿಗಣಿಸಲಾಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಡಿ.ಎ.ಆರ್. ಪೆÇಲೀಸ್ ಪರೇಡ್ ಮೈದಾನದಲ್ಲಿ ವೇದಿಕೆ ಸಿದ್ಧತೆ, ಸೂಕ್ತ ಪೆÇಲೀಸ್ ಬಂದೋಬಸ್ತ್, ನಿರಂತರ ವಿದ್ಯುತ್ ಪೂರೈಕೆ ಹಾಗೂ ತುರ್ತು ವೈದ್ಯಕೀಯ ಸೇವೆಗಳನ್ನು ಖಾತರಿಪಡಿಸಬೇಕು. ನಗರದ ಸ್ವಚ್ಛತೆ ಮತ್ತು ನೈರ್ಮಲ್ಯ ಕಾರ್ಯಗಳನ್ನು ಸೆ. 15ರ ಸಂಜೆಯೊಳಗೆ ಪೂರ್ಣಗೊಳಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಸೆ. 17 ರಂದು ಬೆಳಿಗ್ಗೆ 7.30 ಗಂಟೆಯೊಳಗೆ ಎಲ್ಲ ಅಧಿಕಾರಿಗಳು ತಮ್ಮ ಕಚೇರಿಗಳಲ್ಲಿ ಧ್ವಜಾರೋಹಣ ನೆರವೇರಿಸಿ, ಬೆಳಿಗ್ಗೆ 8 ಗಂಟೆಗೆ ಕಡ್ಡಾಯವಾಗಿ ಡಿ.ಎ.ಆರ್. ಮೈದಾನದಲ್ಲಿ ಹಾಜರಿರಬೇಕು. ಮುಖ್ಯಮಂತ್ರಿಗಳ ಪ್ರವಾಸದ ಹಿನ್ನೆಲೆಯಲ್ಲಿ ಯಾವುದೇ ಅಧಿಕಾರಿಗಳು ಪೂರ್ವಾನುಮತಿಯಿಲ್ಲದೆ ಕೇಂದ್ರ ಸ್ಥಾನ ತೊರೆಯಬಾರದು ಎಂದು ಜಿಲ್ಲಾಧಿಕಾರಿಗಳು ಸೂಚಿಸಿದರು.
ಎಲ್ಲ ಇಲಾಖೆಗಳ ಮುಖ್ಯಸ್ಥರು ತಮ್ಮ ಇಲಾಖೆಯಲ್ಲಿ ಬಾಕಿ ಇರುವ, ಅದರಲ್ಲೂ ಬಹಳ ದಿನಗಳಿಂದ ವಿಲೇವಾರಿಯಾಗದೆ ಉಳಿದಿರುವ ಪ್ರಕರಣಗಳನ್ನು ನಿಯಮಾನುಸಾರ ತ್ವರಿತವಾಗಿ ವಿಲೇವಾರಿ ಮಾಡಬೇಕು. ಮುಖ್ಯಮಂತ್ರಿಗಳ ಪ್ರವಾಸದ ಸಂದರ್ಭದಲ್ಲಿ ಸಾರ್ವಜನಿಕರು ಮನವಿ ಸಲ್ಲಿಸಿದಲ್ಲಿ, ಅವುಗಳಿಗೆ ಸ್ಪಷ್ಟವಾಗಿ ಉತ್ತರಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಅನುದಾನಿತ ಹಾಗೂ ಅನುದಾನರಹಿತ ಶಾಲೆಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳನ್ನು ಕಾರ್ಯಕ್ರಮಕ್ಕೆ ಕರೆತರಲು ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರಿಗೆ ಸೂಚಿಸಿದರು.
ಕೆ.ಆರ್.ಟಿ.ಆರ್.ಸಿ., ಜೆಸ್ಕಾಂ, ಶಿಕ್ಷಣ, ಕೃಷಿ, ತೋಟಗಾರಿಕೆ ಹಾಗೂ ಪ್ರವಾಸೋದ್ಯಮ ಇಲಾಖೆಗಳಿಂದ ಕಲ್ಯಾಣ ಪಥ ಮತ್ತು ನೈಪುಣ್ಯ ವಿಕಾಸವನ್ನು ಬಿಂಬಿಸುವ ಏಳು ಆಕರ್ಷಕ ಸ್ತಬ್ಧಚಿತ್ರಗಳನ್ನು (ಟ್ಯಾಬ್ಲೋ) ಸಿದ್ಧಪಡಿಸಬೇಕು. ಪ್ರತಿಯೊಂದು ಸ್ತಬ್ಧಚಿತ್ರದ ವಿಷಯ ಹಾಗೂ ವಿವರಣೆಯನ್ನು ಒಳಗೊಂಡ ಒಂದು ಪುಟದ ಟಿಪ್ಪಣಿಯನ್ನು ಮುಂಚಿತವಾಗಿಯೇ ಸಲ್ಲಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.
ಸಭೆಯಲ್ಲಿ ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಅಡ್ಡೂರು ಶ್ರೀನಿವಾಸಲು, ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಡಿಸಿಪಿ ಶಾಲು, ಮಹಾನಗರ ಪಾಲಿಕೆ ಆಯುಕ್ತ ಅವಿನಾಶ್ ಶಿಂಧೆ, ಅಪರ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ, ಸಹಾಯಕ ಆಯುಕ್ತೆ ರಿತಿಕಾ ವರ್ಮಾ ಸೇರಿದಂತೆ ಜಿಲ್ಲಾಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.































