
ಕಲಬುರಗಿ,ಜು.15-ಈಚೆಗೆ ಆಗಮಿಸಿದ್ದ ನಗರಾಭಿವೃದ್ಧಿ ಸಚಿವ ಯತೀಂದ್ರ ಸಿದ್ದರಾಮಯ್ಯ ಅವರನ್ನು ಕಲ್ಯಾಣ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ (ಕೆಕೆಸಿಸಿಐ) ಅಧ್ಯಕ್ಷ ಶರಣಬಸಪ್ಪ ಎಂ.ಪಪ್ಪಾ, ಗೌರವ ಕಾರ್ಯದರ್ಶಿ ಶಿವರಾಜ್ ವಿ.ಇಂಗಿನಶೆಟ್ಟಿ ಹಾಗೂ ವ್ಯವಸ್ಥಾಪನಾ ಸಮಿತಿ ಸದಸ್ಯ ಸಂತೋಷ್ ಸುರೇಶ್ ನಂದ್ಯಾಳ ಅವರು ಭೇಟಿ ಮಾಡಿ, ನಗರದ ಅಭಿವೃದ್ಧಿ ಹಾಗೂ ವ್ಯಾಪಾರ ವಹಿವಾಟಿಗೆ ಸಂಬಂಧಿಸಿದ ವಿವಿಧ ಪ್ರಮುಖ ಸಮಸ್ಯೆಗಳ ಕುರಿತು ಸಮಗ್ರ ಮನವಿ ಪತ್ರ ಸಲ್ಲಿಸಿದರು.
ಮನವಿಯಲ್ಲಿ ನಗರದ ಪ್ರಮುಖ ವ್ಯಾಪಾರ ಕೇಂದ್ರವಾದ ಸೂಪರ್ ಮಾರ್ಕೆಟ್ ಪ್ರದೇಶದಲ್ಲಿ ಬಹು ಮಹಡಿ ವಾಹನ ನಿಲುಗಡೆ ಕೇಂದ್ರ ನಿರ್ಮಿಸುವಂತೆ ಒತ್ತಾಯಿಸಲಾಯಿತು. ಸೂಪರ್ ಮಾರ್ಕೆಟ್ ಪ್ರದೇಶದಲ್ಲಿ ವಾಹನ ನಿಲುಗಡೆಗೆ ಸಮರ್ಪಕ ವ್ಯವಸ್ಥೆ ಇಲ್ಲದ ಕಾರಣ ಸಂಚಾರ ದಟ್ಟಣೆ, ರಸ್ತೆ ಬದಿಯಲ್ಲಿ ವಾಹನಗಳ ಅಸ್ತವ್ಯಸ್ತ ನಿಲುಗಡೆಯಿಂದ ವ್ಯಾಪಾರ ಚಟುವಟಿಕೆಗೆ ತೊಂದರೆಯಾಗುತ್ತಿದೆ. ನಗರದ ಭವಿಷ್ಯದ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ಈ ಯೋಜನೆಯನ್ನು ಆದ್ಯತೆಯ ಮೇರೆಗೆ ಕೈಗೊಳ್ಳುವಂತೆ ಮನವಿ ಮಾಡಲಾಯಿತು.
ಅದೇ ರೀತಿ, ಆಸ್ತಿ ತೆರಿಗೆ ವ್ಯವಸ್ಥೆಯನ್ನು ಮರುಪರಿಶೀಲಿಸಿ ನ್ಯಾಯಸಮ್ಮತ ಹಾಗೂ ವೈಜ್ಞಾನಿಕ ತೆರಿಗೆ ಪದ್ಧತಿಯನ್ನು ಜಾರಿಗೆ ತರಬೇಕು ಎಂದು ಕೋರಲಾಯಿತು. ಜಮೀನಿನ ಮಾರುಕಟ್ಟೆ ಮೌಲ್ಯವನ್ನು ಮಾತ್ರ ಆಧಾರವಾಗಿರಿಸದೇ, ಕಟ್ಟಡದ ಬಳಕೆ, ವಿಸ್ತೀರ್ಣ ಹಾಗೂ ಲಭ್ಯವಿರುವ ನಾಗರಿಕ ಸೌಲಭ್ಯಗಳ ಆಧಾರದ ಮೇಲೆ ತೆರಿಗೆ ನಿಗದಿಪಡಿಸಬೇಕೆಂದು ಮನವಿ ಸಲ್ಲಿಸಲಾಯಿತು.
ಇ-ಖಾತಾ ವ್ಯವಸ್ಥೆಯನ್ನು ಇನ್ನಷ್ಟು ಸರಳಗೊಳಿಸಿ, ಒಮ್ಮೆ ಇ-ಖಾತಾ ನೀಡಿದ ಬಳಿಕ ಅದು ಶಾಶ್ವತವಾಗಿ ಡಿಜಿಟಲ್ ದಾಖಲೆಗಳಲ್ಲಿ ಲಭ್ಯವಿರುವಂತೆ ವ್ಯವಸ್ಥೆ ರೂಪಿಸಬೇಕು. ಸಾರ್ವಜನಿಕರು ಅನಗತ್ಯವಾಗಿ ಮತ್ತೆ ಮತ್ತೆ ಅರ್ಜಿ ಸಲ್ಲಿಸುವ ಪರಿಸ್ಥಿತಿ ತಪ್ಪಿಸಬೇಕು ಎಂದು ಕೆಕೆಸಿಸಿಐ ಒತ್ತಾಯಿಸಿತು.
ಇದರೊಂದಿಗೆ, ಹಳೆಯ ಕಟ್ಟಡಗಳಿಗೆ ಆಕ್ಯುಪೆನ್ಸಿ ಪ್ರಮಾಣಪತ್ರ ಕಡ್ಡಾಯ ನಿಯಮಕ್ಕೆ ವಿನಾಯಿತಿ ನೀಡಬೇಕು ಎಂದು ಮನವಿ ಮಾಡಲಾಯಿತು. ಪ್ರಸ್ತುತ ನಿಯಮ ಜಾರಿಗೆ ಬರುವುದಕ್ಕಿಂತ ಮುಂಚೆಯೇ ನಿರ್ಮಾಣಗೊಂಡಿರುವ ಸಾವಿರಾರು ಮನೆಗಳು ಹಾಗೂ ವಾಣಿಜ್ಯ ಕಟ್ಟಡಗಳ ಮಾಲೀಕರು ನೀರಿನ ಸಂಪರ್ಕ, ವಿದ್ಯುತ್ ಸಂಪರ್ಕ, ಇ-ಖಾತಾ, ವ್ಯಾಪಾರ ಪರವಾನಗಿ ಸೇರಿದಂತೆ ವಿವಿಧ ನಾಗರಿಕ ಸೇವೆಗಳನ್ನು ಪಡೆಯಲು ಅನಗತ್ಯ ತೊಂದರೆ ಅನುಭವಿಸುತ್ತಿದ್ದಾರೆ. ಇಂತಹ ಕಟ್ಟಡಗಳಿಗೆ ಒಂದು ಬಾರಿ ವಿನಾಯಿತಿ ನೀಡಿ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಬೇಕೆಂದು ಸರ್ಕಾರವನ್ನು ಕೋರಲಾಯಿತು.
ಇದಲ್ಲದೆ, ಸೂಪರ್ ಮಾರ್ಕೆಟ್ ಸೇರಿದಂತೆ ಪ್ರಮುಖ ವಾಣಿಜ್ಯ ಪ್ರದೇಶಗಳಲ್ಲಿನ ಪಾದಚಾರಿ ಮಾರ್ಗಗಳ ಅತಿಕ್ರಮಣ ತೆರವು, ಯೋಜಿತ ಹಾಕರ್ ವಲಯಗಳ ಅಭಿವೃದ್ಧಿ, ನಗರದ ಪ್ರಮುಖ ವಾಣಿಜ್ಯ ಪ್ರದೇಶಗಳಲ್ಲಿ ಆಧುನಿಕ ಸಾರ್ವಜನಿಕ ಶೌಚಾಲಯಗಳ ನಿರ್ಮಾಣ, ರಸ್ತೆಗಳು, ಪಾದಚಾರಿ ಮಾರ್ಗಗಳು, ಭೂಗತ ಚರಂಡಿ, ಮಳೆನೀರು ಕಾಲುವೆಗಳು ಹಾಗೂ ಬೀದಿ ದೀಪಗಳ ಅಭಿವೃದ್ಧಿ, ನಗರದ ಸೌಂದರ್ಯೀಕರಣ, ಘನ ತ್ಯಾಜ್ಯ ನಿರ್ವಹಣೆಯನ್ನು ಬಲಪಡಿಸುವುದು ಹಾಗೂ ಸ್ಮಾರ್ಟ್ ಟ್ರಾಫಿಕ್ ನಿರ್ವಹಣಾ ವ್ಯವಸ್ಥೆಯನ್ನು ಜಾರಿಗೆ ತರುವುದು ಸೇರಿದಂತೆ ಹಲವು ಪ್ರಮುಖ ಬೇಡಿಕೆಗಳನ್ನು ಸಚಿವರ ಗಮನಕ್ಕೆ ತರಲಾಯಿತು.
ಮನವಿ ಸ್ವೀಕರಿಸಿದ ನಗರಾಭಿವೃದ್ಧಿ ಸಚಿವ ಯತೀಂದ್ರ ಸಿದ್ದರಾಮಯ್ಯ ಅವರು, ಕೆಕೆಸಿಸಿಐ ಸಲ್ಲಿಸಿರುವ ಎಲ್ಲ ಬೇಡಿಕೆಗಳನ್ನು ಸರ್ಕಾರದ ಮಟ್ಟದಲ್ಲಿ ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳುವುದಾಗಿ
ಭರವಸೆ ನೀಡಿದರು.































