
ರಾಮನಗರ,ಸೆ.೧: ನಗರದ ಮಹಾತ್ಮ ಗಾಂಧಿ ರಸ್ತೆಯ ಮೊದಲನೇ ಕ್ರಾಸ್‌ನ ಜೀವಣ್ಣರಾಯರ ಗಲ್ಲಿಯ ರಸ್ತೆ ಅಭಿವೃದ್ಧಿ ಕಾಮಗಾರಿಗೆ ನಗರಸಭೆ ಅಧ್ಯಕ್ಷ ಕೆ.ಶೇಷಾದ್ರಿ ಸೋಮವಾರ ಗುದ್ದಲಿಪೂಜೆ ನೆರವೇರಿಸಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಗರದ ಬಹುತೇಕ ರಸ್ತೆಗಳನ್ನು ಈಗಾಗಲೇ ಅಭಿವೃದ್ಧಿ ಮಾಡಲಾಗಿದ್ದು, ಇದೊಂದು ರಸ್ತೆ ಬಾಕಿ ಉಳಿದಿತ್ತು. ಈ ಭಾಗದ ನಿವಾಸಿಗಳು ಹಾಗೂ ವರ್ತಕರು ರಸ್ತೆ ಅಭಿವೃದ್ಧಿ ಪಡಿಸುವಂತೆ ಮನವಿ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಲಾಗಿದೆ. ನಗರದ ನಾಗರಿಕರಿಗೆ ಅಗತ್ಯ ಮೂಲಭೂತ ಸೌಕರ್ಯ ಒದಗಿಸಲು ನಗರಸಭೆ ಕಟಿಬದ್ಧವಾಗಿದೆ ಎಂದರು.
ನಗರದಲ್ಲಿ ಖಾಲಿ ನಿವೇಶನಗಳಲ್ಲಿ ಬೆಳೆದಿರುವ ಗಿಡ-ಗಂಟಿಗಳನ್ನು ತೆರವುಗೊಳಿಸುವ ಕಾರ್ಯವನ್ನು ಕೈಗೆತ್ತಿಕೊಳ್ಳಲಾಗಿದೆ. ಕೆಲವರು ನಿವೇಶನಗಳನ್ನು ಖರೀದಿಸಿ ಮನೆ ನಿರ್ಮಿಸದೆ ಖಾಲಿ ಉಳಿಸಿರುವುದರಿಂದ ಗಿಡಗಂಟಿಗಳು ಬೆಳೆದು, ಹಾವು, ಚೇಳು ಸೇರಿದಂತೆ ಇನ್ನಿತರೆ ವಿಷಪೂರಿತ ಕ್ರಿಮಿ-ಕೀಟಗಳಿಗೆ ಆವಾಸಸ್ಥಾನವಾಗಿ ಪರಿಣಮಿಸಿದ್ದು, ನಿವಾಸಿಗಳಿಗೆ ಕಂಟಕಪ್ರಾಯವಾಗಿದೆ ಎಂದು ಹೇಳಿದರು.
ನಿವೇಶನಗಳಲ್ಲಿ ಬೆಳೆದಿರುವ ಗಿಡಗಂಟಿಗಳನ್ನು ತೆರವುಗೊಳಿಸುವಂತೆ ಈ ಹಿಂದೆಯೇ ಮಾಲೀಕರಿಗೆ ಸೂಚನೆ ನೀಡಲಾಗಿತ್ತು. ಈ ಹೊರತಾಗಿಯೂ ಗಿಡಗಂಟಿ ತೆರವುಗೊಳಿಸದೆ ಇರುವುದರಿಂದ ನಗರಸಭೆಯಿಂದಲೇ ತೆರವುಗೊಳಿಸಲು ಕ್ರಮ ಕೈಗೊಳ್ಳಲಾಗಿದೆ. ಹಾಗೆಯೇ ತೆರವು ಕಾರ್ಯಕ್ಕೆ ಖರ್ಚಾಗುವ ಹಣವನ್ನು ಮಾಲೀಕರಿಂದಲೇ ವಸೂಲಿ ಮಾಡಲಾಗುವುದು ಎಂದು ತಿಳಿಸಿದರು.
ನಗರದ ನಾಗರಿಕರ ಹಿತ ಕಾಯಲು ನಗರಸಭೆ ಬದ್ಧವಾಗಿದೆ. ಅಂತೆಯೇ ನಾಗರಿಕರು ಕೂಡ ಸ್ವಚ್ಛ ಹಾಗೂ ಸುಂದರ ನಗರ ನಿರ್ಮಾಣಕ್ಕೆ ನಗರಸಭೆ ಜತೆಗೆ ಕೈಜೋಡಿಸಬೇಕು ಎಂದು ಕೆ.ಶೇಷಾದ್ರಿ ಅವರು ಮನವಿ ಮಾಡಿದರು. ನಗರಸಭೆ ಸದಸ್ಯರಾದ ಮಹಾಲಕ್ಷ್ಮೀ ಗೂಳಿಗೌಡ, ಅಜ್ಮತ್ ಉಲ್ಲಾ ಖಾನ್, ನಗರಸಭೆ ಮಾಜಿ ಸದಸ್ಯ ಮುಕುಂದ್ ರಾಜ್, ಮುಖಂಡರಾದ ಬಾಬು, ಕುಮಾರ್ ಗೂಳಿಗೌಡ, ನಗರಸಭೆ ಅಧಿಕಾರಿಗಳಾದ ಪವಿತ್ರ, ನಾಗರಾಜು ಮತ್ತಿತರರು ಇದ್ದರು.































