Home ಜಿಲ್ಲೆ ಬೆಂಗಳೂರು ಶಾಸಕ ನಾರಾಯಣಸ್ವಾಮಿ ಟೀಕೆಗೆ ಜಯದೇವ್ ತಿರುಗೇಟು

ಶಾಸಕ ನಾರಾಯಣಸ್ವಾಮಿ ಟೀಕೆಗೆ ಜಯದೇವ್ ತಿರುಗೇಟು

ಕೋಲಾರ,ಆ,೧೩- ಕೋಲಾರ ಲೋಕಸಭಾ ಕ್ಷೇತ್ರದಲ್ಲಿ ೭ ಬಾರಿ ಸಂಸದರಾಗಿ ಆಯ್ಕೆಯಾಗಿರುವ ಸಚಿವ ಕೆ.ಎಚ್.ಮುನಿಯಪ್ಪರನ್ನು ಅವಿಭಜಿತ ಜಿಲ್ಲೆಗೆ ಬರಬೇಡಿ ಎನ್ನಲು ನೀವ್ಯಾರು? ಈ ಜಿಲ್ಲೆಯಲ್ಲಿ ಅವರ ಲಕ್ಷಾಂತರ ಅಭಿಮಾನಿಗಳಿದ್ದಾರೆ, ಅವರು ಒಂದು ಕ್ಷೇತ್ರಕ್ಕೆ ಸೀಮಿತರಲ್ಲ ರಾಷ್ಟ್ರ ನಾಯಕರು ಎಂದು ಕಾಂಗ್ರೆಸ್ ಎಸ್ಸಿ ಘಟಕದ ಅಧ್ಯಕ್ಷ ಕೆ.ಜಯದೇವ್ ವಿರೋಧಿಗಳಿಗೆ ತಿರುಗೇಟು ನೀಡಿದ್ದಾರೆ.


ಈ ಕುರಿತು ಪತ್ರಿಕಾ ಹೇಳಿಕೆ ನೀಡಿ, ಕೆ.ಎಚ್.ಮುನಿಯಪ್ಪರನ್ನು ಟೀಕಿಸುತ್ತಿರುವ ಶಾಸಕರೇ ಎರಡೂ ಜಿಲ್ಲೆಯ ಅವರ ಅಭಿಮಾನಿಗಳ ಆಕ್ರೋಶಕ್ಕೆ ನೀವು ಗುರಿಯಾಗಿದ್ದೀರಿ, ಅಭಿಮಾನಿಗಳು ಶಕ್ತಿ ಪ್ರದರ್ಶನಕ್ಕೆ ತಯಾರಿದ್ದೇವೆ ನೋಡಲು ಮತ್ತೆ ತಡೆದು ಕೊಳ್ಳುವ ಶಕ್ತಿ ನಿಮಗಿದಿಯೇ ? ಎಂದು ಸವಾಲ್ ಹಾಕಿದ್ದಾರೆ.


ಶಾಸಕ ನಾರಾಯಣಸ್ವಾಮಿ ಅವರೇ ಎಚ್ಚರದಿಂದ ಮಾತನಾಡಿ ಮಂತ್ರಿಗಿರಿ ಸಿಗಲಿಲ್ಲ ಎನ್ನುವ ಹತಾಷೆಯಲ್ಲಿ ನಮ್ಮ ನಾಯಕರು ಸೋಲಿಲ್ಲದ ಸರದಾರರಾದದ ಕೆ.ಎಚ್.ಮುನಿಯಪ್ಪರನ್ನು ಟೀಕಿಸಿದ್ದನ್ನು ಎರಡು ಜಿಲ್ಲೆಯ ಅವರ ಅಭಿಮಾನಿಗಳು ಸೂಕ್ಷ್ಮ ವಾಗಿ ಗಮನಿಸುತಿದ್ದೇವೆ. ಇದನ್ನು ಹೀಗೆ ಮುಂದುವರಿಸಿದಲ್ಲಿ ಲಕ್ಷಾಂತರ ಅಭಿಮಾನಿಗಳ ವಿರೋಧ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.


ಕೆ.ಎಚ್.ಮುನಿಯಪ್ಪ ಓರ್ವ ರಾಷ್ಟ್ರಿಯ ನಾಯಕರು, ದಲಿತ ಪರಮೋಚ್ಚ ನಾಯಕರನ್ನು ವಾಮಾಗೋಚರವಾಗಿ ಟೀಕಿಸುತ್ತಿದ್ದರೆ ಸುಮ್ಮನಿರಲು ಸಾಧ್ಯವಿಲ್ಲ, ನಮ್ಮ ಶಕ್ತಿಯನ್ನು ಪ್ರದರ್ಶಿಸಲು ನೀವೇ ಆಹ್ವಾನ ಕೊಟ್ಟಮೇಲೆ ನಾವ್ಯಾಕೆ ಕೈಕಟ್ಟಿ ಕುಳತೀರಬೇಕು ನಮಗೂ ಟೀಕಿಸಲು, ಪ್ರತಿಭಟಿಸಲು ಬರುತ್ತದೆ ಎಂದಿದ್ದಾರೆ.


ಕೆ.ಎಚ್.ಮುನಿಯಪ್ಪ ಅವರಲ್ಲಿ ಎಡ-ಬಲ ಎಂಬ ಬೇಧಭಾವ ಇದ್ದಿದ್ದರೆ ಎಸ್.ಎನ್.ನಾರಾಯಣಸ್ವಾಮಿ ಅವರೇ ನೀವು ಶಾಸಕರಾಗಲು ಸಾಧ್ಯವೇ ಇರುತ್ತಿರಲಿಲ್ಲ. ವಿರೋಧ ಪಕ್ಷಗಳೊಂದಿಗೆ ಸೇರಿಕೊಂಡು ರಾಜಕೀಯವಾಗಿ ನಿಮ್ಮನ್ನು ಬೆಳೆಸಿದ ಅವರನ್ನು ೨೦೧೯ ರಲ್ಲಿ ಷಡ್ಯಂತ್ರದಿಂದ ಅವರನ್ನು ಸೋಲಿಸಿ ಪಕ್ಷವಿರೋಧಿಗಳಾಗಿ ಕೆಲಸ ಮಾಡಿದ್ದನ್ನು ಮರೆತಿದ್ದೀರಾ ಎಂದು ಪ್ರಶ್ನಿಸಿದ್ದಾರೆ.


ಲಕ್ಷಾಂತರ ಜನರ ಬೆಂಬಲದಿಂದ ೭ ಭಾರಿ ಲೋಕಸಭೆ ಚುನಾವಣೆಯಲ್ಲಿ ಗೆದ್ದು ೨ ಬಾರಿ ಕೇಂದ್ರ ಸಚಿವರಾಗಿ, ಇದೀಗ ಶಾಸರಾಗಿ ಸಚಿವರಾಗಿದ್ದಾರೆ ಅಂತಹ ರಾಷ್ಟೀಯ ನಾಯಕರ ವಿಷಯದಲ್ಲಿ ನಾಲಿಗೆ ಹರಿ ಬಿಡುವುದನ್ನು ನಿಲ್ಲಿಸಿ ಎಂದು ಸಲಹೆ ನೀಡಿರುವ ಅವರು, ನಮ್ಮ ಸಹನೆಗೂ ಒಂದು ಇತಿ ಮಿತಿ ಇದೆ ನಮ್ಮ ತಾಳ್ಮೆ ಕಟ್ಟೆ ಒಡೆದಿದೆ ಇನ್ನು ನಿಮ್ಮ ಸುಳ್ಳು ಆರೋಪಗಳನ್ನು ಕೇಳಿಕೊಂಡು ಇರುವ ಮಾತೇ ಇಲ್ಲ, ಶಾಸಕರೇ ನೀವು ಕೋಲಾರ ಜಿಲ್ಲೆಗೆ ನೀಡಿರುವ ಕೊಡುಗೆ ಏನು ಎಂದು ಪ್ರಶ್ನಿಸಿದ್ದಾರೆ.


ಜಿಲ್ಲೆಯಲ್ಲಿ ಕೆಎಚ್ ಮುನಿಯಪ್ಪನವರು ನೀಡಿರುವ ಕೊಡುಗೆಯೆಂದರೆ ಶಾಸಕರೇ ನಿಮ್ಮಂತವರನ್ನು ಗುರುತಿಸಿ ರಾಜಕಾರಣಕ್ಕೆ ತಂದು ಬೆಳೆಸಿ ಈ ದಿನ ನನ್ನನ್ನು ಮಂತ್ರಿ ಮಾಡಿ ಎಂದು ಕೇಳುವಷ್ಟು ಎತ್ತರಕ್ಕೆ ಬೆಳೆಸಿರುವುದು ಎಂಬುದನ್ನು ಮರೆಯದಿರಿ ಎಂದು ಪ್ರತಿಪಾದಿಸಿದ್ದಾರೆ.


ಕಳೆದ ಸಂಸತ್ ಚುನಾವಣೆಯಲ್ಲಿ ಜಿಲ್ಲೆಗೆ ಸಂಬಂಧವೇ ಇಲ್ಲದಂತ ಒಬ್ಬ ವ್ಯಕ್ತಿಯನ್ನು ಕರೆದುಕೊಂಡು ಬಂದು ಕಾಂಗ್ರೆಸ್ ಅಭ್ಯರ್ಥಿಯನ್ನಾಗಿ ಮಾಡಿ ಅವರ ಚುನಾವಣೆಯನ್ನು ಹಾಸ್ಯಸ್ಪದವಾಗಿ ನಡೆಸಿ ಪಕ್ಷ ಗೆಲ್ಲುವ ಕಾಂಗ್ರೇಸ್ ಭದ್ರಕೋಟೆಯಾಗಿದ್ದ ತಮ್ಮದೇ ಪಕ್ಷದ ಅಭ್ಯರ್ಥಿಯನ್ನು ಸೋಲಿಸಿದ್ದೇ ಒಂದು ಮಹಾ ಸಾಧನೆ ಎಂದು ಭಾವಿಸಬೇಕೇ ಎಂದು ಪ್ರಶ್ನಿಸಿದ್ದಾರೆ.


ನೀವು ಮಾಡಿರುವ ತಪ್ಪುಗಳನ್ನು ಮುಚ್ಚಿಕೊಳ್ಳಲು, ಸಚಿವ ಸ್ಥಾನದ ನಿಮ್ಮ ಆಸೆ ಈಡೇರದಿರಲು ಇದೀಗ ಕೆ.ಎಚ್.ಮುನಿಯಪ್ಪ ಕಾರಣರು ಎಂದು ಹೇಳುವ ನಿಮ್ಮ ಮಾತನ್ನು ನಂಬುವ ಸ್ಥಿತಿಯಲ್ಲಿ ಕೋಲಾರ ಜಿಲ್ಲೆಯ ನಿಷ್ಟಾವಂತ ಕಾಂಗ್ರೆಸ್ ಕಾರ್ಯಕರ್ತರಿಲ್ಲ ಎಂಬ ಅಂಶವನ್ನು ತಮ್ಮ ಗಮನಕ್ಕೆ ತರಬಯಸುತ್ತೇನೆ ಎಂದು ತಿಳಿಸಿದ್ದಾರೆ.