Home ಜಿಲ್ಲೆ ಗಡಿಭಾಗದಲ್ಲಿ ಕನ್ನಡತ್ವ ಬೆಳೆಸುವುದು ಪ್ರತಿಯೊಬ್ಬರ ಕರ್ತವ್ಯ : ಪ್ರಕಾಶ ದೇಶಮುಖ

ಗಡಿಭಾಗದಲ್ಲಿ ಕನ್ನಡತ್ವ ಬೆಳೆಸುವುದು ಪ್ರತಿಯೊಬ್ಬರ ಕರ್ತವ್ಯ : ಪ್ರಕಾಶ ದೇಶಮುಖ

ಬೀದರ: ಗಡಿಭಾಗದಲ್ಲಿ ಕನ್ನಡ ನಾಡು-ನುಡಿ, ಸಂಸ್ಕೃತಿಯನ್ನು ಉಳಿಸಿ ಬೆಳೆಸಿಕೊಂಡು ಹೋಗುವುದು ಪ್ರತಿಯೊಬ್ಬ ಕನ್ನಡಿಗನ ಆದ್ಯ ಕರ್ತವ್ಯವಾಗಿದೆ ಎಂದು ಸಂಪನ್ಮೂಲ ಶಿಕ್ಷಕ ಪ್ರಕಾಶ ದೇಶಮುಖ ಹೇಳಿದರು.

ಔರಾದ ತಾಲೂಕಿನ ಸಂತಪೂರ ಗ್ರಾಮದ ಆನಂದ ಪ್ರೌಢ ಶಾಲೆಯಲ್ಲಿ ಕರ್ನಾಟಕ ವಿದ್ಯಾವರ್ಧಕ ಸಂಘ ಧಾರವಾಡ ಹಾಗೂ ಬೀದರ ಜಿಲ್ಲಾ ಘಟಕದ ಸಹಯೋಗದಲ್ಲಿ ಮಂಗಳವಾರ ಆಯೋಜಿಸಿದ್ದ ‘ಗಡಿಭಾಗದಲ್ಲಿ ಕನ್ನಡ ಭಾಷೆಯ ಉಳಿವು’ ಕುರಿತ ಜಾಗೃತಿ ಕಾರ್ಯಕ್ರಮದಲ್ಲಿ ಅವರು ವಿಶೇಷ ಉಪನ್ಯಾಸ ನೀಡಿದರು.

ಗಡಿಭಾಗದಲ್ಲಿ ಕನ್ನಡ ಶಾಲೆಗಳ ಸಂಖ್ಯೆ ಕುಸಿಯುತ್ತಿದ್ದು, ಆಂಗ್ಲ ಮಾಧ್ಯಮದ ಪ್ರಭಾವ ಹೆಚ್ಚುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಕನ್ನಡ ಭಾಷೆಯ ಉಳಿವಿಗಾಗಿ ಸರ್ಕಾರ ಮತ್ತು ಸಮಾಜ ಜಂಟಿಯಾಗಿ ಕಾರ್ಯನಿರ್ವಹಿಸಬೇಕು. ಕನ್ನಡ ಶಾಲೆಗಳನ್ನು ಬಲಪಡಿಸಿ, ಶಿಕ್ಷಕರ ನೇಮಕಾತಿ, ಗ್ರಂಥಾಲಯಗಳ ಸ್ಥಾಪನೆ ಹಾಗೂ ಸಾಹಿತ್ಯ-ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಆದ್ಯತೆ ನೀಡಬೇಕು ಎಂದು ಅವರು ಅಭಿಪ್ರಾಯಪಟ್ಟರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಉಪನ್ಯಾಸಕ ದತ್ತಾತ್ರಿ ಮಡಿವಾಳ, ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘವು ನಾಡಿನ ಪ್ರಮುಖ ಸಾಂಸ್ಕೃತಿಕ ಹಾಗೂ ಶೈಕ್ಷಣಿಕ ಸಂಸ್ಥೆಯಾಗಿದ್ದು, ಕನ್ನಡ ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿಯ ಬೆಳವಣಿಗೆಗೆ ಮಹತ್ವದ ಕೊಡುಗೆ ನೀಡುತ್ತಿದೆ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಸಂಯೋಜಕ ಮಹೇಶ್ ಗೋರನಾಳಕರ್ ಮಾತನಾಡಿ, ಯುವಜನರು ಇತರ ಭಾಷೆಗಳಿಗೆ ಗೌರವ ನೀಡುವ ಜೊತೆಗೆ ಕನ್ನಡ ಬಳಕೆಗೆ ಹೆಚ್ಚಿನ ಒತ್ತು ನೀಡಬೇಕು. ಮನೆಗಳಲ್ಲಿ ಮಕ್ಕಳೊಂದಿಗೆ ಕನ್ನಡದಲ್ಲೇ ಮಾತನಾಡುವ ಅಭ್ಯಾಸ ಬೆಳೆಸಬೇಕೆಂದರು. ಗಡಿಭಾಗದಲ್ಲಿ ಕನ್ನಡದ ಬಹುತ್ವ ಸಂಸ್ಕೃತಿ ಉಳಿಸಿ ಬೆಳೆಸಲು ಸಂಘದಿAದ ವಿವಿಧ ಸಾಹಿತ್ಯ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು ಎಂದು ಭರವಸೆ ನೀಡಿದರು.

ಕರ್ನಾಟಕ ರಾಜ್ಯ ವನ್ಯಜೀವಿ ಮಂಡಳಿ ಸದಸ್ಯ ವಿನಯಕುಮಾರ ಮಾಳಗೆ ಮಾತನಾಡಿ, ಕನ್ನಡ ಭಾಷೆಯ ಬೆಳವಣಿಗೆಯ ಜೊತೆಗೆ ಪರಿಸರ ಸಂರಕ್ಷಣೆಯೂ ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದರು.

ಸಾಹಿತಿ ಹಾಗೂ ಪತ್ರಕರ್ತ ಬಾಲಾಜಿ ಕುಂಬಾರ ಮಾತನಾಡಿ, ಬಹುಭಾಷಾ ಸಂಗಮ ಭೂಮಿಯಾಗಿರುವ ಔರಾದ್‌ನಲ್ಲಿ ಕನ್ನಡ ಭಾಷೆ, ಸಂಸ್ಕೃತಿ ಮತ್ತು ಸಾಹಿತ್ಯದ ಕುರಿತು ಸಮಗ್ರ ಚರ್ಚೆಗಳು ನಡೆಯಬೇಕಿದ್ದು, ಕನ್ನಡದ ಉಳಿವಿಗಾಗಿ ಸರ್ಕಾರದ ಗಮನ ಸೆಳೆಯುವ ಅಗತ್ಯವಿದೆ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳಿಂದ ನಡೆದ ನೃತ್ಯ, ನಾಟಕ ಹಾಗೂ ಗಾಯನ ಕಾರ್ಯಕ್ರಮಗಳು ಸಭಿಕರ ಗಮನ ಸೆಳೆದವು.

ಕಾರ್ಯಕ್ರಮದಲ್ಲಿ ಶಿಕ್ಷಣ ಪ್ರೇಮಿ ಅನೀಲ ಪಾಟೀಲ್ ಧುಪತಮಹಾಗಾಂವ್, ನ್ಯಾಯವಾದಿ ಪ್ಯಾರುಸಾಬ್ ಶೇಖ್, ಶಿಕ್ಷಕರಾದ ರಾಜರೆಡ್ಡಿ, ಮಾಲಸ್ವಾಮಿ, ಶೀಲಾವತಿ, ಕಲ್ಪನಾ, ಉಮಾಕಾಂತ, ಭೀಮಾಶಂಕರ ವೈರಾಗ್ಯ, ರವಿ ಚವ್ಹಾಣ, ಕರಣ ಸೇರಿದಂತೆ ಅನೇಕರು ಭಾಗವಹಿಸಿದ್ದರು.