
ವಾಷಿಂಗ್ಟನ್/ಅಮ್ಮಾನ್, ಜು. ೧೯-ಮಧ್ಯಪ್ರಾಚ್ಯದಲ್ಲಿ ಯುದ್ಧದ ಕಾರ್ಮೋಡ ಮತ್ತಷ್ಟು ದಟ್ಟವಾಗಿದ್ದು, ಜೋರ್ಡಾನ್‌ನಲ್ಲಿ ಇರಾನ್ ನಡೆಸಿದ ಭೀಕರ ಬ್ಯಾಲಿಸ್ಟಿಕ್ ಕ್ಷಿಪಣಿ ಮತ್ತು ಡ್ರೋನ್ ದಾಳಿಗೆ ಅಮೆರಿಕದ ಇಬ್ಬರು ಸೈನಿಕರು ಹುತಾತ್ಮರಾಗಿದ್ದಾರೆ. ದಾಳಿಯ ಬಳಿಕ ಮತ್ತೊಬ್ಬ ಸೈನಿಕ ನಾಪತ್ತೆಯಾಗಿದ್ದಾನೆ ಎಂದು ಅಮೆರಿಕ ಸೇನಾ ಮೂಲಗಳು ಇಂದು ಸ್ಪಷ್ಟಪಡಿಸಿವೆ.
ಈ ಭೀಕರ ದಾಳಿಯಲ್ಲಿ ಗಾಯಗೊಂಡಿದ್ದ ನಾಲ್ಕು ಸೈನಿಕರನ್ನು ತಕ್ಷಣವೇ ಜೋರ್ಡಾನ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸದ್ಯ ಅವರು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಮೃತಪಟ್ಟ ಸೈನಿಕರ ಗುರುತನ್ನು ಗೌಪ್ಯವಾಗಿಡಲಾಗಿದೆ. ಈ ತಾಜಾ ಘಟನೆಯೊಂದಿಗೆ ಪ್ರಸ್ತುತ ಸಂಘರ್ಷದಲ್ಲಿ ಮಡಿದ ಅಮೆರಿಕದ ಒಟ್ಟು ಸೈನಿಕರ ಸಂಖ್ಯೆ ೧೬ಕ್ಕೆ ಏರಿಕೆಯಾಗಿದೆ.
ತನ್ನ ಸೈನಿಕರ ಸಾವಿಗೆ ತಕ್ಷಣವೇ ಪ್ರತಿಕ್ರಿಯಿಸಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಇರಾನ್ ವಿರುದ್ಧ ತೀವ್ರ ವೈಮಾನಿಕ ದಾಳಿ ನಡೆಸಲು ಆದೇಶಿಸಿದ್ದಾರೆ. ಇದರ ಬೆನ್ನಲ್ಲೇ ಅಮೆರಿಕ ಸೆಂಟ್ರಲ್ ಕಮಾಂಡ್ (ಸೆಂಟ್‌ಕಾಮ್), ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (Iಖಉಅ) ನೆಲೆಗಳನ್ನು ಗುರಿಯಾಗಿಸಿ ಸತತ ಎಂಟನೇ ರಾತ್ರಿಯೂ ಭೀಕರ ಬಾಂಬ್ ದಾಳಿ ನಡೆಸಿದೆ. ಹಾರ್ಮುಜ್ ಜಲಸಂಧಿಯಲ್ಲಿ ವಾಣಿಜ್ಯ ಹಡಗುಗಳಿಗೆ ಇರಾನ್ ಒಡ್ಡುತ್ತಿರುವ ಭೀತಿಯನ್ನು ಮಟ್ಟಹಾಕಲು ಮತ್ತು ಸೈನಿಕರ ಸಾವಿಗೆ ತಕ್ಕ ಪಾಠ ಕಲಿಸಲು ಈ ದಾಳಿ ನಡೆಸಲಾಗಿದೆ ಎಂದು ಸೆಂಟ್‌ಕಾಮ್ ತಿಳಿಸಿದೆ.
“ವೀರ ಯೋಧರ ತ್ಯಾಗ ವ್ಯರ್ಥವಾಗುವುದಿಲ್ಲ. ಈ ಘಟನೆ ಇರಾನ್ ವಿರುದ್ಧ ಹೋರಾಡುವ ನಮ್ಮ ಸಂಕಲ್ಪವನ್ನು ಮತ್ತಷ್ಟು ಬಲಪಡಿಸಿದೆ ಎಂದು ಅಮೆರಿಕ ರಕ್ಷಣಾ ಕಾರ್ಯದರ್ಶಿ ಪೀಟ್ ಹೆಗ್ಸೆತ್ ಹೇಳಿದ್ದಾರೆ.
ಕಳೆದ ಜೂನ್ ತಿಂಗಳಿನಲ್ಲಿ ವಾಷಿಂಗ್ಟನ್ ಮತ್ತು ಟೆಹ್ರಾನ್ ನಡುವೆ ಏರ್ಪಟ್ಟಿದ್ದ ಪ್ರಾಥಮಿಕ ಕದನ ವಿರಾಮ ಒಪ್ಪಂದವು ಕೇವಲ ಒಂದು ತಿಂಗಳೊಳಗೆ ಸಂಪೂರ್ಣವಾಗಿ ಹಳಿತಪ್ಪಿದೆ. ಜುಲೈ ೮ ರಂದು ಟ್ರಂಪ್ ಈ ಒಪ್ಪಂದ ಮುಕ್ತಾಯಗೊಂಡಿದೆ ಎಂದು ಘೋಷಿಸಿದ್ದರು. ಇದೀಗ ಅಮೆರಿಕವು ಇರಾನ್ ಬಂದರುಗಳ ಮೇಲೆ ಮತ್ತೆ ದಿಗ್ಬಂಧನ ಹೇರಿದ್ದರೆ, ಪ್ರತಿಯಾಗಿ ಇರಾನ್ ಜಗತ್ತಿನ ಪ್ರಮುಖ ತೈಲ ಸಾರಿಗೆ ಮಾರ್ಗವಾದ ’ಹಾರ್ಮುಜ್ ಜಲಸಂಧಿ’ಯನ್ನು ಸಂಪೂರ್ಣವಾಗಿ ಬಂದ್ ಮಾಡಿದೆ. ಇದರಿಂದಾಗಿ ಜಾಗತಿಕ ಮಟ್ಟದಲ್ಲಿ ಇಂಧನ ಬೆಲೆ ಏರಿಕೆಯ ಭೀತಿ ಎದುರಾಗಿದೆ.
ಅಮೆರಿಕದ ದಾಳಿಗಳ ಬೆನ್ನಲ್ಲೇ ಇರಾನ್‌ನ ಸರ್ವೋಚ್ಚ ನಾಯಕ ಮೊಜ್ತಾಬಾ ಖಮೇನಿ ಲಿಖಿತ ಹೇಳಿಕೆ ಬಿಡುಗಡೆ ಮಾಡಿದ್ದು, “ಅಮೆರಿಕದ ಅಧ್ಯಕ್ಷರ ಸಹಿಗೆ ಯಾವುದೇ ಬೆಲೆಯಿಲ್ಲ ಮತ್ತು ಅವರ ವಿಶ್ವಾಸಾರ್ಹತೆ ಶೂನ್ಯ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಅಮೆರಿಕ ಸಂಘರ್ಷವನ್ನು ವಿಸ್ತರಿಸಲು ಬಯಸುತ್ತಿದ್ದು, ಇರಾನ್ ಅದಕ್ಕೆ ಮರೆಯಲಾಗದ ಪಾಠ ಕಲಿಸಲಿದೆ” ಎಂದು ಎಚ್ಚರಿಸಿದ್ದಾರೆ.
ಕ್ಷಿಪಣಿ ತಡೆದ ಜೋರ್ಡಾನ್: ಜೋರ್ಡಾನ್ ವಾಯುಪ್ರದೇಶಕ್ಕೆ ನುಗ್ಗಿದ್ದ ಇರಾನ್‌ನ ೧೦ ಕ್ಷಿಪಣಿಗಳನ್ನು ಯಶಸ್ವಿಯಾಗಿ ಹೊಡೆದುರುಳಿಸಿರುವುದಾಗಿ ಜೋರ್ಡಾನ್ ಸೇನೆ ತಿಳಿಸಿದೆ.
ಇರಾನ್ ಪಡೆಗಳು ಕುವೈತ್‌ನ ವಿದ್ಯುತ್ ಮತ್ತು ನೀರು ಶುದ್ಧೀಕರಣ ಘಟಕಗಳಂತಹ ನಾಗರಿಕ ಮೂಲಸೌಕರ್ಯಗಳ ಮೇಲೆ ದಾಳಿ ನಡೆಸುತ್ತಿದ್ದು, ಇದು ಯುದ್ಧಾಪರಾಧ ಎಂದು ಗಲ್ಫ್ ಸಹಕಾರ ಮಂಡಳಿ ಖಂಡಿಸಿದೆ. ಮಧ್ಯಪ್ರಾಚ್ಯದಲ್ಲಿ ಪರಿಸ್ಥಿತಿ ಕೈಮೀರುತ್ತಿರುವ ಹಿನ್ನೆಲೆಯಲ್ಲಿ, ಅಲ್ಲಿರುವ ಅಮೆರಿಕನ್ನರು ತೀವ್ರ ಜಾಗರೂಕರಾಗಿರಬೇಕು ಎಂದು ಅಮೆರಿಕ ವಿದೇಶಾಂಗ ಇಲಾಖೆ ಸೂಚನೆ ನೀಡಿದೆ.


































