Home ಜಿಲ್ಲೆ ಬರ ೨ನೇ ಪಟ್ಟಿಯಲ್ಲಿ ಜಿಲ್ಲೆ ಸೇರ್ಪಡೆ ಭರವಸೆ ಈಡೇರದಿದ್ದರೆ ಉಗ್ರ ಹೋರಾಟ: ಕರವೇ

ಬರ ೨ನೇ ಪಟ್ಟಿಯಲ್ಲಿ ಜಿಲ್ಲೆ ಸೇರ್ಪಡೆ ಭರವಸೆ ಈಡೇರದಿದ್ದರೆ ಉಗ್ರ ಹೋರಾಟ: ಕರವೇ

ಯಾದಗಿರಿ: ಜಿಲ್ಲೆಯ ಬರ ಪರಿಸ್ಥಿತಿಯನ್ನು ಪರಿಗಣಿಸಿ ಎರಡನೇ ಹಂತದ ಬರಪೀಡಿತ ಜಿಲ್ಲೆಗಳ ಪಟ್ಟಿಯಲ್ಲಿ ಯಾದಗಿರಿ ಜಿಲ್ಲೆಯನ್ನು ಸೇರ್ಪಡೆಗೊಳಿಸುವುದಾಗಿ ಜಿಲ್ಲಾ ಉಸ್ತುವಾರಿ ಸಚಿವರು ನೀಡಿರುವ ಭರವಸೆ ಈಡೇರದಿದ್ದರೆ ಹೋರಾಟವನ್ನು ತೀವ್ರಗೊಳಿಸಿ ರಾಜ್ಯಮಟ್ಟಕ್ಕೆ ಕೊಂಡೊಯ್ಯಲಾಗುವುದು ಎಂದು ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಿದ್ದು ನಾಯಕ ಹತ್ತಿಕುಣಿ ಎಚ್ಚರಿಕೆ ನೀಡಿದ್ದಾರೆ.
ಈ ಕುರಿತು ಹೇಳಿಕೆ ನೀಡಿರುವ ಅವರು, ಜಿಲ್ಲೆಯ ಬರ ಪರಿಸ್ಥಿತಿಯನ್ನು ಸರ್ಕಾರ ನಿರ್ಲಕ್ಷಿಸುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಿಗೆ ಘೇರಾವ್ ನಡೆಸಿ ಸರ್ಕಾರದ ಗಮನ ಸೆಳೆಯಲಾಗಿದೆ. ಈ ಸಂದರ್ಭದಲ್ಲಿ ಸಚಿವರು ಎರಡನೇ ಪಟ್ಟಿಯಲ್ಲಿ ಯಾದಗಿರಿ ಜಿಲ್ಲೆಯನ್ನು ಸೇರ್ಪಡೆಗೊಳಿಸುವುದಾಗಿ ಕರವೇ ಮುಖಂಡರಿಗೆ ಸ್ಪಷ್ಟ ಭರವಸೆ ನೀಡಿದ್ದಾರೆ. ಹೀಗಾಗಿ ಸರ್ಕಾರದ ಭರವಸೆಯನ್ನು ಈಡೇರಿಸುವವರೆಗೆ ಕಾದು ನೋಡಲಾಗುವುದು ಎಂದು ತಿಳಿಸಿದ್ದಾರೆ.
ಯಾವುದೇ ಸಮಸ್ಯೆಗೆ ತಕ್ಷಣ ಬಂದ್‌ಗೆ ಕರೆ ನೀಡುವುದು ಸೂಕ್ತವಲ್ಲ. ಬಂದ್ ಹೋರಾಟದ ಕೊನೆಯ ಅಸ್ತ್ರವಾಗಬೇಕು. ಪದೇಪದೇ ಬಂದ್ ನಡೆಸುವುದರಿಂದ ಸಾರ್ವಜನಿಕರು, ಸಣ್ಣಪುಟ್ಟ ವ್ಯಾಪಾರಸ್ಥರು, ಬೀದಿಬದಿ ವ್ಯಾಪಾರಿಗಳು ಹಾಗೂ ದಿನಗೂಲಿ ಕಾರ್ಮಿಕರು ತೊಂದರೆ ಅನುಭವಿಸುವಂತಾಗುತ್ತದೆ. ಆದ್ದರಿಂದ ಜನರ ಸಮಸ್ಯೆಗಳ ವಿರುದ್ಧ ಹಂತ ಹಂತವಾಗಿ ಹಾಗೂ ಸಂಘಟಿತವಾಗಿ ಹೋರಾಟ ನಡೆಸುವುದು ಕರವೇಯ ನಿಲುವಾಗಿದೆ ಎಂದು ಸಿದ್ದು ನಾಯಕ ಹೇಳಿದ್ದಾರೆ.
ಬರ ಪರಿಸ್ಥಿತಿಯಂತಹ ಜನಪರ ಸಮಸ್ಯೆಗಳ ಕುರಿತು ನಡೆಯುವ ಹೋರಾಟ ಜಾತ್ಯತೀತ ಹಾಗೂ ಪಕ್ಷಾತೀತವಾಗಿರಬೇಕು. ಆದರೆ ತರಾತುರಿಯಲ್ಲಿ ಕೆಲ ಜಾತಿ ಸಂಘಟನೆಗಳು ಹೋರಾಟ ಸಮಿತಿ ಹೆಸರಿನಲ್ಲಿ ಬಂದ್‌ಗೆ ಕರೆ ನೀಡುತ್ತಿರುವುದು ಸಮಸ್ಯೆ ಪರಿಹಾರಕ್ಕೆ ಸಹಕಾರಿಯಾಗುವುದಿಲ್ಲ. ಇಂತಹ ಕ್ರಮಗಳಿಂದ ಜನಜೀವನ ಅಸ್ತವ್ಯಸ್ತವಾಗುವುದರ ಜೊತೆಗೆ ಸಣ್ಣ ವ್ಯಾಪಾರಸ್ಥರು ಮತ್ತು ದಿನಗೂಲಿ ಕಾರ್ಮಿಕರು ಆರ್ಥಿಕ ನಷ್ಟ ಅನುಭವಿಸುವಂತಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಸರ್ಕಾರ ನೀಡಿರುವ ಭರವಸೆಯಂತೆ ಎರಡನೇ ಪಟ್ಟಿಯಲ್ಲಿ ಯಾದಗಿರಿ ಜಿಲ್ಲೆಯನ್ನು ಸೇರ್ಪಡೆಗೊಳಿಸುವವರೆಗೆ ಕರವೇ ಕಾದು ನೋಡಲಿದೆ. ಒಂದು ವೇಳೆ ಜಿಲ್ಲೆಯನ್ನು ಬರಪೀಡಿತ ಪಟ್ಟಿಗೆ ಸೇರಿಸದೆ ರೈತರಿಗೆ ಅನ್ಯಾಯ ಮಾಡಿದರೆ, ಜಿಲ್ಲಾಧ್ಯಕ್ಷ ಟಿ.ಎನ್. ಭೀಮುನಾಯಕ ಅವರ ನೇತೃತ್ವದಲ್ಲಿ ಹಂತ ಹಂತವಾಗಿ ಹೋರಾಟ ತೀವ್ರಗೊಳಿಸಲಾಗುವುದು. ಅಗತ್ಯವಿದ್ದರೆ ಹೋರಾಟವನ್ನು ರಾಜ್ಯಮಟ್ಟಕ್ಕೆ ಕೊಂಡೊಯ್ದು ರೈತರ ಹಿತಕ್ಕಾಗಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಸಿದ್ದು ನಾಯಕ ಹತ್ತಿಕುಣಿ ಎಚ್ಚರಿಕೆ ನೀಡಿದ್ದಾರೆ.
ಈ ಸಂದರ್ಭದಲ್ಲಿ ಮಲ್ಲು ಮಾಳಿಕೇರಿ, ಅಂಬ್ರೇಷ್ ಹತ್ತಿಮನಿ, ಚೌಡಯ್ಯ ಬಾವೂರ, ನಿಂಗಪ್ಪ ಗುಡಗುಡಿ, ಭೀಮಾಶಂಕರ ಹತ್ತಿಕುಣಿ, ಅಬ್ದುಲ್ ಚಿಗಾನೂರ, ವೆಂಕಟೇಶ ನಾಯಕ ಬೈರಿಮಡ್ಡಿ, ಶರಣಬಸಪ್ಪ ಯಲ್ಹೇರಿ, ಅಂಬ್ರೇಷ್ ಕಟ್ಟಿಮನಿ, ಬಸವರಾಜ ಚೆನ್ನೂರು, ಪ್ರಕಾಶ ಪಾಟೀಲ್ ಜೈಗ್ರಾಮ್, ಭೀಮರಾಯ ರಾಮಸಮುದ್ರ, ಸಿದ್ದಪ್ಪ ಕೊಯಿಲೂರ, ಸಿದ್ದಪ್ಪ ಕ್ಯಾಸಪನಳ್ಳಿ, ಸುರೇಶ ಬೆಳಗುಂದಿ, ಅಶೋಕ ನಾಯಕ, ರವಿ ಜಮ್ಮಾರ ಹಾಗೂ ಕಾಶಿನಾಥ ನಾನೇಕ ಸೇರಿದಂತೆ ಹಲವರು ಉಪಸ್ಥಿತರಿದ್ದರು.