
ಯಾದಗಿರಿ: ತಾಲೂಕಿನ ಯಾದಗಿರಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಕೊನೆಯ ಗ್ರಾಮವಾದ ಅರಕೇರಾ (ಕೆ) ಗ್ರಾಮದಲ್ಲಿ ನಿಜಶರಣ ಅಂಬಿಗರ ಚೌಡಯ್ಯನವರ ನೂತನ ಮೂರ್ತಿ ಪ್ರತಿಷ್ಠಾಪನೆ ಹಾಗೂ ದೇವಸ್ಥಾನ ಲೋಕಾರ್ಪಣೆ ಕಾರ್ಯಕ್ರಮ ಭಕ್ತಿಭಾವದಿಂದ ಜರುಗಿತು. ಸ್ಥಳೀಯ ಶಾಸಕ ಚನ್ನಾರೆಡ್ಡಿ ಪಾಟೀಲ ತುನ್ನೂರು ಅವರು ದೇವಸ್ಥಾನವನ್ನು ಲೋಕಾರ್ಪಣೆಗೊಳಿಸಿ, ಅಂಬಿಗರ ಚೌಡಯ್ಯನವರ ತತ್ವ-ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವಂತೆ ಕರೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಚನ್ನಾರೆಡ್ಡಿ ಪಾಟೀಲ ತುನ್ನೂರು, ೧೨ನೇ ಶತಮಾನದಲ್ಲಿ ಬಸವಾದಿ ಶರಣರ ಸಾಲಿನಲ್ಲಿ ನಿಜಶರಣರೆಂದು ಖ್ಯಾತಿ ಪಡೆದ ಅಂಬಿಗರ ಚೌಡಯ್ಯನವರು ಶ್ರೇಷ್ಠ ವಚನಕಾರರಾಗಿದ್ದರು. ಅವರ ವಚನಗಳು ಸಮಾಜದಲ್ಲಿನ ಅಸಮಾನತೆ, ಮೂಢನಂಬಿಕೆ ಹಾಗೂ ಅನಿಷ್ಟ ಪದ್ಧತಿಗಳ ವಿರುದ್ಧ ಜಾಗೃತಿ ಮೂಡಿಸುವ ಸಂದೇಶವನ್ನು ನೀಡುತ್ತವೆ. ಅವರ ತತ್ವ-ಆದರ್ಶಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಂಡು ಮುನ್ನಡೆಯಬೇಕು ಎಂದು ಹೇಳಿದರು.
ಗ್ರಾಮಸ್ಥರು ವಿವಿಧ ಮಹಾನಗರಗಳಿಗೆ ತೆರಳಿ ಕೂಲಿ ಕೆಲಸ ಮಾಡಿ ಹಣ ಸಂಗ್ರಹಿಸುವ ಮೂಲಕ ಹಾಗೂ ಗುಜರಾತ್ ನಿವಾಸಿ ಹಣಮಂತ ಗುಜರಾತ್ ಅವರ ಸಹಕಾರದೊಂದಿಗೆ ಸುಂದರ ದೇವಸ್ಥಾನ ನಿರ್ಮಿಸಿರುವುದು ಮತ್ತು ಬೃಹತ್ ಅಂಬಿಗರ ಚೌಡಯ್ಯನವರ ಮೂರ್ತಿ ಪ್ರತಿಷ್ಠಾಪಿಸಿರುವುದು ಶ್ಲಾಘನೀಯ ಕಾರ್ಯವಾಗಿದೆ. ಇಂತಹ ಧಾರ್ಮಿಕ ಹಾಗೂ ಸಾಮಾಜಿಕ ಚಟುವಟಿಕೆಗಳು ಗ್ರಾಮದಲ್ಲಿ ಒಗ್ಗಟ್ಟು ಬೆಳೆಸಲು ಸಹಕಾರಿಯಾಗುತ್ತವೆ ಎಂದು ಶಾಸಕ ಹೇಳಿದರು.
ದೇವಸ್ಥಾನದಲ್ಲಿ ಪೂಜೆಯ ಜೊತೆಗೆ ಶರಣರ ತತ್ವ-ಆದರ್ಶಗಳ ಆರಾಧನೆಯೂ ನಿರಂತರವಾಗಿ ನಡೆಯಬೇಕು. ದೇವಸ್ಥಾನದ ಸ್ವಚ್ಛತೆ ಹಾಗೂ ಭದ್ರತೆ ಕಾಪಾಡಲು ಕಂಪೌAಡ್ ನಿರ್ಮಾಣಕ್ಕೆ ತುರ್ತು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಭರವಸೆ ನೀಡಿದರು.
ವೇದಿಕೆಯಲ್ಲಿ ಮಾತನಾಡಿದ ಉಮೇಶ ಕೆ. ಮುದ್ನಾಳ ಅವರು, ಅರಕೇರಾ (ಕೆ) ಗ್ರಾಮದಲ್ಲಿ ನಿಜಶರಣ ಅಂಬಿಗರ ಚೌಡಯ್ಯನವರ ಹೆಸರಿನಲ್ಲಿ ಸಮುದಾಯ ಭವನ ನಿರ್ಮಾಣಕ್ಕೆ ?೨೫ ಲಕ್ಷ ಅನುದಾನ ನೀಡುವಂತೆ ಶಾಸಕ ಚನ್ನಾರೆಡ್ಡಿ ಪಾಟೀಲ ತುನ್ನೂರು ಅವರಿಗೆ ಮನವಿ ಮಾಡಿದರು.
ಮನವಿಗೆ ಸ್ಪಂದಿಸಿದ ಶಾಸಕರು, ಮೊದಲು ದೇವಸ್ಥಾನಕ್ಕೆ ಕಂಪೌAಡ್ ನಿರ್ಮಾಣಕ್ಕೆ ಕ್ರಮ ಕೈಗೊಂಡು, ನಂತರ ಸಮುದಾಯ ಭವನ ನಿರ್ಮಾಣಕ್ಕೂ ಅಗತ್ಯ ಸಹಕಾರ ನೀಡುವುದಾಗಿ ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ದಾಸಬಾಳ ಮಠದ ಶ್ರೀ ವೀರೇಶ್ವರ ಮಹಾಸ್ವಾಮೀಜಿ, ಹನ್ನೆರಡು ಮಾಸಗಳಲ್ಲಿ ಶ್ರಾವಣ ಮಾಸ ಅತ್ಯಂತ ಪವಿತ್ರ ಹಾಗೂ ಶ್ರೇಷ್ಠವಾದದ್ದು. ಇಂತಹ ಪವಿತ್ರ ಸಂದರ್ಭದಲ್ಲಿ ನಿಜಶರಣ ಅಂಬಿಗರ ಚೌಡಯ್ಯನವರ ಮೂರ್ತಿ ಪ್ರತಿಷ್ಠಾಪನೆ ಹಾಗೂ ದೇವಸ್ಥಾನ ಲೋಕಾರ್ಪಣೆ ಮಾಡಿರುವುದು ಸಮಾಜಕ್ಕೆ ಸಂತಸದ ಹಾಗೂ ಹೆಮ್ಮೆಯ ವಿಷಯವಾಗಿದೆ ಎಂದರು.
ದೇವಸ್ಥಾನವನ್ನು ನಿರಂತರವಾಗಿ ಪೂಜಿಸುವುದರ ಜತೆಗೆ ಸ್ವಚ್ಛತೆ ಕಾಪಾಡಬೇಕು. ಯಾವುದೇ ದುಶ್ಚಟಗಳಿಗೆ ಒಳಗಾಗಿ ದೇವಸ್ಥಾನದ ಪಾವಿತ್ರ‍್ಯಕ್ಕೆ ಧಕ್ಕೆ ತರುವಂತಹ ಚಟುವಟಿಕೆಗಳಿಗೆ ಅವಕಾಶ ನೀಡಬಾರದು ಎಂದು ಅವರು ಸಮಾಜ ಬಾಂಧವರಿಗೆ ಸಲಹೆ ನೀಡಿದರು.
ದೇವಸ್ಥಾನ ಲೋಕಾರ್ಪಣೆಗೂ ಮುನ್ನ ಗ್ರಾಮದ ಪ್ರಮುಖ ರಸ್ತೆಗಳಲ್ಲಿ ನಿಜಶರಣ ಅಂಬಿಗರ ಚೌಡಯ್ಯನವರ ಮೂರ್ತಿಯನ್ನು ಬಾಜಾ-ಭಜಂತ್ರಿ ಹಾಗೂ ವಿವಿಧ ವಾದ್ಯಮೇಳಗಳೊಂದಿಗೆ ಅದ್ಧೂರಿಯಾಗಿ ಮೆರವಣಿಗೆ ನಡೆಸಲಾಯಿತು. ಮೆರವಣಿಗೆಯಲ್ಲಿ ಸಮಾಜದ ಮುಖಂಡರು, ಯುವಕರು, ಮಹಿಳೆಯರು ಹಾಗೂ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.
ಕಾರ್ಯಕ್ರಮದಲ್ಲಿ ಉಮೇಶ ಕೆ. ಮುದ್ನಾಳ, ಬಸವರಾಜಪ್ಪ ಬಾಗಲಿ, ಹಣಮಂತ ಗುಜರಾತ್, ಭೀಮರಾಯ ಗಣಪೂರ, ನಾರಾಯಣ, ನರಸಪ್ಪ, ಸಿದ್ದಲಿಂಗಯ್ಯ ಸ್ವಾಮಿ, ರುದ್ರಗೌಡ, ಸಂಜೀವಕುಮಾರ, ಡಾ. ಟಿ.ಡಿ. ರಾಜ್, ದೌಲತ್ ಕುರಿ, ಶ್ರೀಶೈಲ್, ನಾಗಪ್ಪ ಪೋತಲ್, ಶಿವಪ್ಪ ಅನಪೂರ, ಜಗನ್ನಾಥ, ಲಕ್ಷ್ಮೀಕಾಂತ, ಸೂರ್ಯಕಾಂತ ಸಿದ್ರಾಮ, ಶಿವಶಂಕರಯ್ಯ ಸ್ವಾಮಿ, ವೆಂಕಟೇಶ ಕೋಟಿಮನಿ, ಬಸವರಾಜ, ಮಲ್ಲಪ್ಪ, ಸಕ್ರೇಪ್ಪ, ನರಸಪ್ಪ, ನಾಗರೆಡ್ಡಿ, ಹಣಮಂತ, ಬಸಪ್ಪ, ಮಲ್ಲಪ್ಪ, ಕಾಶಪ್ಪ, ಭೀಮರಾಯ, ದೇವಪ್ಪ, ದೇವಿಂದ್ರಪ್ಪ ಸೇರಿದಂತೆ ಸಮಾಜದ ಪ್ರಮುಖರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
ಕೃನಾಲ್ ಯಾದಗಿರಿ ಅರಕೇರಾ ಅವರು ಸ್ವಾಗತಿಸಿದರು. ದೇವಪ್ಪ ಬಾಡದೋರ್ ಕಾರ್ಯಕ್ರಮ ನಿರೂಪಿಸಿದರು. ಸಾಹೇಬರೆಡ್ಡಿ ಭಂಡಾರಿ ವಂದನಾರ್ಪಣೆ ಮಾಡಿದರು.
“ಶ್ರಾವಣ ಮಾಸ ಅತ್ಯಂತ ಶ್ರೇಷ್ಠವಾದ ಮಾಸ. ಇಂತಹ ಪವಿತ್ರ ಸಂದರ್ಭದಲ್ಲಿ ನಿಜಶರಣ ಅಂಬಿಗರ ಚೌಡಯ್ಯನವರ ಮೂರ್ತಿ ಪ್ರತಿಷ್ಠಾಪನೆ ಹಾಗೂ ದೇವಸ್ಥಾನ ಲೋಕಾರ್ಪಣೆ ಮಾಡಿರುವುದು ಸಮಾಜದಲ್ಲಿ ಉತ್ತಮ ಬೆಳವಣಿಗೆ. ದೇವಸ್ಥಾನದ ಪಾವಿತ್ರ‍್ಯ ಮತ್ತು ಸ್ವಚ್ಛತೆಯನ್ನು ಪ್ರತಿಯೊಬ್ಬರೂ ಕಾಪಾಡಬೇಕು. ಯಾವುದೇ ದುಶ್ಚಟಗಳಿಗೆ ಒಳಗಾಗಿ ದೇವಸ್ಥಾನದೊಳಗೆ ಅಪವಿತ್ರ ವಾತಾವರಣ ನಿರ್ಮಾಣವಾಗದಂತೆ ಎಚ್ಚರ ವಹಿಸಬೇಕು.”
- ಶ್ರೀ ವೀರೇಶ್ವರ ಮಹಾಸ್ವಾಮೀಜಿ, ದಾಸಬಾಳ ಮಠ, ಯಾದಗಿರಿಹಿ





























