Home ಜಿಲ್ಲೆ ಒಳಮೀಸಲಾತಿ ಹಂಚಿಕೆಯಲ್ಲಿ ಬಂಜಾರ ಸೇರಿ ೫೯ ಅಲೆಮಾರಿ ಸಮುದಾಯಗಳಿಗೆ ಅನ್ಯಾಯ: ಡಾ. ಉಮೇಶ್ ಜಾಧವ್ ಆರೋಪ

ಒಳಮೀಸಲಾತಿ ಹಂಚಿಕೆಯಲ್ಲಿ ಬಂಜಾರ ಸೇರಿ ೫೯ ಅಲೆಮಾರಿ ಸಮುದಾಯಗಳಿಗೆ ಅನ್ಯಾಯ: ಡಾ. ಉಮೇಶ್ ಜಾಧವ್ ಆರೋಪ

ಯಾದಗಿರಿ: ಜು.೧:ಸುಪ್ರೀಂಕೋರ್ಟ್ ನಿರ್ದೇಶನದ ಆಶಯಕ್ಕೆ ವಿರುದ್ಧವಾಗಿ ಕಾಂಗ್ರೆಸ್ ಸರ್ಕಾರ ಒಳಮೀಸಲಾತಿ ಹಂಚಿಕೆ ಮಾಡಿದ್ದು, ಬಂಜಾರ, ಭೋವಿ, ಕೊರಮ, ಕೊರಚ ಸೇರಿದಂತೆ ೫೯ ಅಲೆಮಾರಿ ಸಮುದಾಯಗಳಿಗೆ ಗಂಭೀರ ಅನ್ಯಾಯ ಎಸಗಿದೆ ಎಂದು ಮಾಜಿ ಸಂಸದ ಡಾ. ಉಮೇಶ್ ಜಾಧವ್ ಆರೋಪಿಸಿದರು.
ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಸರ್ಕಾರದ ಅವಧಿಯಲ್ಲಿ ಅಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪರಿಶಿಷ್ಟ ಜಾತಿಗಳ ಮೀಸಲಾತಿಯನ್ನು ಶೇ.೧೫ರಿಂದ ಶೇ.೧೭ಕ್ಕೆ ಹೆಚ್ಚಿಸಿದ್ದರು. ಆದರೆ ಪ್ರಸ್ತುತ ಕಾಂಗ್ರೆಸ್ ಸರ್ಕಾರ ಒಳವಿಂಗಡಣೆಯ ಹೆಸರಿನಲ್ಲಿ ಕೆಲ ಸಮುದಾಯಗಳ ಹಕ್ಕುಗಳಿಗೆ ಧಕ್ಕೆ ಉಂಟುಮಾಡಿದ್ದು, ಇದು ಸಾಮಾಜಿಕ ನ್ಯಾಯದ ಆಶಯಕ್ಕೆ ವಿರುದ್ಧವಾಗಿದೆ ಎಂದು ಕಿಡಿಕಾರಿದರು.
ಸದಾಶಿವ ಆಯೋಗದ ವರದಿಗಿಂತ ನಾಗಮೋಹನದಾಸ್ ವರದಿ ಹೆಚ್ಚು ಅಪಾಯಕಾರಿಯಾಗಿದೆ ಎಂದು ಆರೋಪಿಸಿದ ಅವರು, ವರದಿಯನ್ನು ಸಮಗ್ರವಾಗಿ ಪರಿಶೀಲಿಸದೇ ಸರ್ಕಾರ ರಾಜಕೀಯ ಹೊಂದಾಣಿಕೆಯ ಆಧಾರದಲ್ಲಿ ಮೀಸಲಾತಿ ಹಂಚಿಕೆ ಮಾಡಿದೆ. ಇದರಿಂದ ಬಂಜಾರ, ಭೋವಿ, ಕೊರಮ, ಕೊರಚ ಸೇರಿದಂತೆ ಹಲವು ಸಮುದಾಯಗಳು ತೀವ್ರ ಅನ್ಯಾಯಕ್ಕೆ ಒಳಗಾಗಿವೆ ಎಂದು ಹೇಳಿದರು.
ಜನಸಂಖ್ಯೆ ಹಾಗೂ ಸಾಮಾಜಿಕ-ಶೈಕ್ಷಣಿಕ ಹಿಂದುಳಿದ ಸ್ಥಿತಿಯನ್ನು ವೈಜ್ಞಾನಿಕವಾಗಿ ಪರಿಗಣಿಸಿ ಮೀಸಲಾತಿ ಹಂಚಿಕೆ ಮಾಡಬೇಕಾಗಿತ್ತು. ಬದಲಾಗಿ ಅವೈಜ್ಞಾನಿಕ ಕ್ರಮ ಅನುಸರಿಸಿರುವುದರಿಂದ ಸಮುದಾಯಗಳಲ್ಲಿ ಅಸಮಾಧಾನ ಉಂಟಾಗಿದೆ. ಸರ್ಕಾರ ಕೂಡಲೇ ಈ ವ್ಯವಸ್ಥೆಯನ್ನು ಮರುಪರಿಶೀಲಿಸಿ ನ್ಯಾಯಯುತ ಹಂಚಿಕೆ ಮಾಡದಿದ್ದರೆ ರಾಜ್ಯಾದ್ಯಂತ ತೀವ್ರ ಹೋರಾಟ ನಡೆಸುವುದಾಗಿ ಅವರು ಎಚ್ಚರಿಕೆ ನೀಡಿದರು.
ಶಾಸಕ ಡಾ. ಚಂದ್ರು ಲಮಾಣಿ ಮಾತನಾಡಿ, ಬಂಜಾರ, ಭೋವಿ, ಕೊರಚ, ಕೊರಮ ಸೇರಿದಂತೆ ೫೯ ಅಲೆಮಾರಿ ಜಾತಿಗಳಿಗೆ ಸರ್ಕಾರ ಅನ್ಯಾಯ ಮಾಡಿದೆ. ಒಳಮೀಸಲಾತಿಯೊಳಗೆ ಮತ್ತೊಂದು ಒಳಮೀಸಲಾತಿ ಜಾರಿಗೆ ತರುವ ಮೂಲಕ ಅವಕಾಶಗಳನ್ನು ಮತ್ತಷ್ಟು ಸೀಮಿತಗೊಳಿಸಲಾಗಿದೆ ಎಂದು ಆರೋಪಿಸಿದರು.
ರೋಸ್ಟರ್ ವ್ಯವಸ್ಥೆಯಲ್ಲಿ ಸಿಂಗಲ್ ವಿಂಡೋ ಪದ್ಧತಿ ಜಾರಿಗೊಳಿಸಬೇಕೆಂಬ ಬೇಡಿಕೆಗೆ ಸರ್ಕಾರ ಸ್ಪಂದಿಸಿಲ್ಲ. ಪ್ರಸ್ತುತ ನಿಗದಿಪಡಿಸಿರುವ ಶೇ.೪.೫ ಮೀಸಲಾತಿಯಲ್ಲಿ ೫೯ ಅಲೆಮಾರಿ ಸಮುದಾಯಗಳಿಗೆ ಶೇ.೧ ಮೀಸಲಾದರೆ, ಬಂಜಾರ, ಭೋವಿ, ಕೊರಚ ಹಾಗೂ ಕೊರಮ ಸಮುದಾಯಗಳಿಗೆ ಕೇವಲ ಶೇ.೩.೫ ಮಾತ್ರ ಉಳಿಯಲಿದೆ. ಇದು ನ್ಯಾಯಸಮ್ಮತವಲ್ಲ ಎಂದು ಅವರು ಹೇಳಿದರು.
ಶಾಸಕ ಪ್ರಭು ಚವ್ಹಾಣ ಮಾತನಾಡಿ, ಒಳಮೀಸಲಾತಿ ಹಂಚಿಕೆ ವಿಚಾರದಲ್ಲಿ ರಾಜ್ಯ ಸರ್ಕಾರ ತಕ್ಷಣವೇ ತನ್ನ ನಿರ್ಧಾರವನ್ನು ಮರುಪರಿಶೀಲಿಸಿ ಸಮುದಾಯಗಳಿಗೆ ಆಗಿರುವ ಅನ್ಯಾಯವನ್ನು ಸರಿಪಡಿಸಬೇಕು. ಸರ್ಕಾರ ನಿರ್ಲಕ್ಷ್ಯ ಮುಂದುವರಿಸಿದರೆ ವಿವಿಧ ರೀತಿಯ ಪ್ರಜಾಪ್ರಭುತ್ವ ಹೋರಾಟಗಳನ್ನು ರಾಜ್ಯದಾದ್ಯಂತ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಸಮಾಜದ ಮುಖಂಡರಾದ ದೇವರಾಜ ನಾಯಕ, ಜನಾರ್ಧನ ರಾಠೋಡ್, ಕಿಶನ್, ರವಿ ರಾಠೋಡ್ ಮುದ್ನಾಳ್, ಲಿಂಬಾ ನಾಯಕ, ಸುರೇಶ್ ಚವ್ಹಾಣ, ಸುರೇಶ್ ರಾಠೋಡ್, ಬಂಗಾರು ರಾಠೋಡ್, ಸುನೀತಾ ಚವ್ಹಾಣ ಸೇರಿದಂತೆ ಹಲವರು ಉಪಸ್ಥಿತರಿದ್ದರು.