Home ಜಿಲ್ಲೆ ಬೆಂಗಳೂರು ಭಾರತದ ವೈದ್ಯಕೀಯ ಶಿಕ್ಷಣ ಕ್ಷೇತ್ರ: ದೊಡ್ಡ ಸವಾಲು!

ಭಾರತದ ವೈದ್ಯಕೀಯ ಶಿಕ್ಷಣ ಕ್ಷೇತ್ರ: ದೊಡ್ಡ ಸವಾಲು!

ಬೆಂಗಳೂರು.ಜೂ೬: ಭಾರತದ ಆರೋಗ್ಯ ರಕ್ಷಣಾ ವಲಯದಲ್ಲಿ ವೈದ್ಯರ ಕೊರತೆಯನ್ನು ನೀಗಿಸಲು ಹೆಚ್ಚಿನ ವೈದ್ಯಕೀಯ ಕಾಲೇಜುಗಳನ್ನು ಸ್ಥಾಪಿಸುವುದು ಮತ್ತು ಎಂಬಿಬಿಎಸ್ ಸೀಟುಗಳ ಸಂಖ್ಯೆಯನ್ನು ಹೆಚ್ಚಿಸುವುದರ ಮೇಲೆಯೇ ಇಲಾಖೆಗಳು ಹೆಚ್ಚು ಗಮನ ಹರಿಸುತ್ತಿವೆ. ಆದರೆ, ಆರ್ಥಿಕವಾಗಿ ಹಿಂದುಳಿದ ಮತ್ತು ದುರ್ಬಲ ವರ್ಗದ ವಿದ್ಯಾರ್ಥಿಗಳಿಗೆ ಕೇವಲ ನೀಟ್ (ಓಇಇಖಿ) ಮೂಲಕ ಮೆಡಿಕಲ್ ಸೀಟು ಪಡೆಯುವುದಷ್ಟೇ ಸವಾಲಲ್ಲ, ಬದಲಿಗೆ ಆ ಕೋರ್ಸ್ ಅನ್ನು ಯಶಸ್ವಿಯಾಗಿ ಮುಗಿಸುವುದು ದೊಡ್ಡ ಸವಾಲಾಗಿ ಪರಿಣಮಿಸಿದೆ.


ವೈದ್ಯಕೀಯ ಶಿಕ್ಷಣದ ಪ್ರವೇಶಾತಿ ಪಡೆದ ನಂತರವೂ ಬಡ ಕುಟುಂಬಗಳ ಹಾಗೂ ಮೊದಲ ತಲೆಮಾರಿನ ವಿದ್ಯಾರ್ಥಿಗಳು ಕೋರ್ಸ್ ಅವಧಿಯುದ್ದಕ್ಕೂ ತೀವ್ರ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ. ಕೇವಲ ಬೋಧನಾ ಶುಲ್ಕ ಮಾತ್ರವಲ್ಲದೆ, ಹಾಸ್ಟೆಲ್ ವಸತಿ, ಪಠ್ಯಪುಸ್ತಕಗಳು, ಕ್ಲಿನಿಕಲ್ ಉಪಕರಣಗಳು, ಪ್ರಯಾಣದ ವೆಚ್ಚ, ಆಹಾರ, ಪರೀಕ್ಷಾ ಶುಲ್ಕ ಮತ್ತು ಇಂಟರ್ನೆಟ್/ಡಿಜಿಟಲ್ ಸಂಪರ್ಕದ ವೆಚ್ಚಗಳನ್ನು ವರ್ಷಗಳ ಕಾಲ ಭರಿಸುವುದು ಇಂತಹ ಕುಟುಂಬಗಳಿಗೆ ಅತ್ಯಂತ ಕಷ್ಟದಾಯಕವಾಗಿದೆ.ಆರೋಗ್ಯ ವಲಯದ ಕೊರತೆ ಹಾಗೂ ಪ್ರಾದೇಶಿಕ ಅಸಮತೋಲನ:ವೈದ್ಯಕೀಯ ಸಿಬ್ಬಂದಿಯ ತೀವ್ರ ಕೊರತೆ ಇರುವ ರಾಜ್ಯಗಳಲ್ಲಿ ಈ ಸಮಸ್ಯೆ ಇನ್ನು ಗಂಭೀರ ಸ್ವರೂಪ ಪಡೆದಿದೆ. ಈಶಾನ್ಯ ರಾಜ್ಯಗಳಾದ ನಾಗಾಲ್ಯಾಂಡ್‌ನಲ್ಲಿ ವೈದ್ಯರು ಮತ್ತು ರೋಗಿಗಳ ಅನುಪಾತ ಸರಿಸುಮಾರು ೧:೧೩,೫೦೦ ಇದ್ದರೆ, ಮಿಜೋರಾಂನಲ್ಲಿ ೧:೮,೦೦೦ ರಷ್ಟಿದೆ. ಇದು ರಾಷ್ಟ್ರೀಯ ಸರಾಸರಿಗಿಂತ ತೀರಾ ಕಡಿಮೆ ಇರುವುದು ಆತಂಕಕಾರಿ ಸಂಗತಿಯಾಗಿದೆ.


ಮತ್ತೊಂದೆಡೆ, ಉತ್ತರ ಪ್ರದೇಶ (೨೫ ವಿದ್ಯಾರ್ಥಿಗಳು), ಬಿಹಾರ (೧೧), ಜಾರ್ಖಂಡ್ (೫), ಮಧ್ಯಪ್ರದೇಶ (೭), ಒಡಿಶಾ (೧೭), ಅಸ್ಸಾಂ (೮) ಮತ್ತು ಛತ್ತೀಸ್‌ಗಢ (೪) ನಂತಹ ಆರೋಗ್ಯ ಮೂಲಸೌಕರ್ಯಗಳ ಕೊರತೆಯಿರುವ ರಾಜ್ಯಗಳಲ್ಲಿ ಬಡ ವಿದ್ಯಾರ್ಥಿಗಳನ್ನು ಬೆಂಬಲಿಸುವುದು ಅತ್ಯಗತ್ಯವಾಗಿದೆ. ಇದರೊಂದಿಗೆ, ವಯಸ್ಸಾಗುತ್ತಿರುವ ಜನಸಂಖ್ಯೆಗೆ ತಕ್ಕಂತೆ ಆರೋಗ್ಯ ವ್ಯವಸ್ಥೆಯನ್ನು ಸಜ್ಜುಗೊಳಿಸುತ್ತಿರುವ ದಕ್ಷಿಣದ ರಾಜ್ಯಗಳಾದ ಆಂಧ್ರಪ್ರದೇಶ (೬೬), ಕೇರಳ (೨೩) ಹಾಗೂ ತಮಿಳುನಾಡಿನಲ್ಲೂ (೧೦) ವೈದ್ಯಕೀಯ ಕಲಿಯುವ ವಿದ್ಯಾರ್ಥಿಗಳಿಗೆ ಪ್ರೋತ್ಸಾಹದ ಅಗತ್ಯವಿದೆ.ಆಸರೆಗೆ ನಿಂತ ‘ಜಿಎಸ್‌ಕೆ ಕೇರ್ಸ್ ಸ್ಕಾಲರ್ಸ್’:ಈ ನಿರಂತರತೆಯ ಬಿಕ್ಕಟ್ಟನ್ನು ಮನಗಂಡು ಫೌಂಡೇಶನ್ ಫಾರ್ ಎಕ್ಸಲೆನ್ಸ್ ಸಹಭಾಗಿತ್ವದಲ್ಲಿ ಅನುಷ್ಠಾನಗೊಳಿಸಲಾದ ‘ಜಿಎಸ್‌ಕೆ ಕೇರ್ಸ್ ಸ್ಕಾಲರ್ಸ್ ಪ್ರೋಗ್ರಾಂ’ ದೇಶದ ೨೩ ರಾಜ್ಯಗಳ ೫೬೪ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು, ಸೂಕ್ತ ಮಾರ್ಗದರ್ಶನ ಹಾಗೂ ಶೈಕ್ಷಣಿಕ ನೆರವು ನೀಡುವ ಮೂಲಕ ಭರವಸೆಯಾಗಿ ಮೂಡಿಬಂದಿದೆ. ತಜ್ಞರ ಅಭಿಮತ:”ವೈದ್ಯಕೀಯ ಶಿಕ್ಷಣದ ಚರ್ಚೆಗಳು ಕೇವಲ ಕಾಲೇಜು ಪ್ರವೇಶಾತಿಗಷ್ಟೇ ಸೀಮಿತವಾಗಬಾರದು. ಹಿಂದುಳಿದ ಮತ್ತು ಗ್ರಾಮೀಣ ಸಮುದಾಯಗಳಿಂದ ಬರುವ ವಿದ್ಯಾರ್ಥಿಗಳಿಗೆ ಸ್ಥಳೀಯ ಆರೋಗ್ಯ ಸಮಸ್ಯೆಗಳು, ಭಾಷಾ ಅಡಚಣೆಗಳು ಹಾಗೂ ಗ್ರಾಮೀಣ ಭಾಗದ ಸವಾಲುಗಳ ಬಗ್ಗೆ ನೇರ ಅರಿವಿರುತ್ತದೆ. ಇಂತಹ ವಿದ್ಯಾರ್ಥಿಗಳು ವೈದ್ಯರಾಗಿ ಹೊರಹೊಮ್ಮಿದಾಗ ಗ್ರಾಮೀಣ ಭಾಗದ ಆರೋಗ್ಯ ಸೇವೆ ತಾನಾಗಿಯೇ ಸುಧಾರಿಸುತ್ತದೆ.” ಎಂದು ಸಾರ್ವಜನಿಕ ಆರೋಗ್ಯ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.


ಭಾರತವು ತನ್ನ ಆರೋಗ್ಯ ರಕ್ಷಣಾ ವ್ಯವಸ್ಥೆಯನ್ನು ಬಲಪಡಿಸಲು ಮುಂದಡಿ ಇಡುತ್ತಿರುವ ಈ ಸಂದರ್ಭದಲ್ಲಿ, ಕೇವಲ ಸೀಟುಗಳ ಸಂಖ್ಯೆಯನ್ನು ಹೆಚ್ಚಿಸುವುದರ ಜೊತೆಗೆ, ಬಡ ವಿದ್ಯಾರ್ಥಿಗಳು ತಮ್ಮ ಇಡೀ ಶೈಕ್ಷಣಿಕ ಪ್ರಯಾಣವನ್ನು ಯಾವುದೇ ಅಡೆತಡೆಯಿಲ್ಲದೆ ಪೂರ್ಣಗೊಳಿಸುವಂತೆ ಬೆಂಬಲಿಸುವುದು ಅಷ್ಟೇ ಮುಖ್ಯ ಎಂಬುದನ್ನು ಈ ವಿದ್ಯಮಾನವು ಸ್ಪಷ್ಟಪಡಿಸುತ್ತದೆ.