
ಗದಗ,ಆ೧೫: ಸರ್ಕಾರಿ ಅಧಿಕಾರಿಗಳು ಹಾಗೂ ಸಿಬ್ಬಂದಿ “ಸರ್ಕಾರಿ ಕೆಲಸ ದೇವರ ಕೆಲಸ” ಎಂಬ ವಾಕ್ಯವನ್ನು ಅಕ್ಷರಶಃ ಪಾಲಿಸುವ ಮೂಲಕ ಸಾರ್ವಜನಿಕರೊಂದಿಗೆ ಸೌಜನ್ಯ, ಪ್ರಾಮಾಣಿಕತೆ ಹಾಗೂ ಮಾನವೀಯತೆಯಿಂದ ವರ್ತಿಸಬೇಕು ಎಂದು ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ಹೇಳಿದರು.
ನಗರದ ಜಿಲ್ಲಾಡಳಿತ ಭವನದ ಆವರಣದಲ್ಲಿ ಇಂದು ನಡೆದ ೮೦ನೇ ಸ್ವಾತಂತ್ರೊ÷್ಯÃತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಸಮಾಜಮುಖಿ ಆಡಳಿತ ಹಾಗೂ ಜನಸೇವೆಯ ಮಹತ್ವವನ್ನು ವಿವರಿಸಿದರು.
ಭಾರತಕ್ಕೆ ಸ್ವಾತಂತ್ರ÷್ಯ ದೊರೆತ ಐತಿಹಾಸಿಕ ಸಂದರ್ಭವನ್ನು ಸ್ಮರಿಸಿದ ಜಿಲ್ಲಾಧಿಕಾರಿಗಳು, ಸ್ವಾತಂತ್ರ÷್ಯ ಹೋರಾಟಗಾರರ ತ್ಯಾಗ, ಬಲಿದಾನ ಹಾಗೂ ದೇಶ ನಿರ್ಮಾಣಕ್ಕಾಗಿ ಅಂದಿನ ವಿದ್ವಾಂಸರು ಮತ್ತು ಪಂಡಿತರು ನೀಡಿದ ಸಲಹೆ-ಸೂಚನೆಗಳನ್ನು ನೆನಪಿಸಿಕೊಂಡರು. ದೇಶ ನಿರ್ಮಾಣದ ಕಾರ್ಯದಲ್ಲಿ ದೇಶಭಕ್ತಿ, ಕರ್ತವ್ಯನಿಷ್ಠೆ ಹಾಗೂ ದೈವಬಲದ ಮೇಲಿನ ನಂಬಿಕೆ ಇಂದಿಗೂ ಪ್ರತಿಯೊಬ್ಬರಲ್ಲಿರಬೇಕು ಎಂದರು.
ಸರ್ಕಾರಿ ನೌಕರಿ ದೊರೆಯುವುದು ದೊಡ್ಡ ಅವಕಾಶದ ಜೊತೆಗೆ ಮಹತ್ವದ ಜವಾಬ್ದಾರಿಯಾಗಿದೆ. ಕೋಟ್ಯಂತರ ಜನಸಂಖ್ಯೆಯಲ್ಲಿ ಕೆಲವೇ ಲಕ್ಷ ಮಂದಿಗೆ ಸರ್ಕಾರಿ ಸೇವೆ ಸಲ್ಲಿಸುವ ಅವಕಾಶ ದೊರೆತಿದೆ. ಹೀಗಾಗಿ, ಸಮಾಜ ನಮಗೆ ಏನು ಕೊಟ್ಟಿದೆ?'' ಎನ್ನುವುದಕ್ಕಿಂತಸಮಾಜಕ್ಕೆ ನಾವು ಏನು ಕೊಟ್ಟಿದ್ದೇವೆ?” ಎಂಬುದನ್ನು ಪ್ರತಿಯೊಬ್ಬ ಸರ್ಕಾರಿ ನೌಕರರೂ ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ಹೇಳಿದರು.
ಜನರ ಸೇವೆ ಮಾಡುವ ಮೂಲಕ ಪುಣ್ಯ ಸಂಪಾದಿಸುವ ಅಪೂರ್ವ ಅವಕಾಶ ಸರ್ಕಾರಿ ಸೇವೆಯಲ್ಲಿದೆ. ಆದ್ದರಿಂದ ಅಧಿಕಾರ ಮತ್ತು ಹುದ್ದೆಯನ್ನು ಜನಸೇವೆಗೆ ಬಳಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ತಮ್ಮ ಸಮಸ್ಯೆಗಳನ್ನು ಹೊತ್ತು ಸರ್ಕಾರಿ ಕಚೇರಿಗಳಿಗೆ ಬರುವ ಸಾರ್ವಜನಿಕರೊಂದಿಗೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಸೌಜನ್ಯದಿಂದ ವರ್ತಿಸಬೇಕು. ಸಾರ್ವಜನಿಕರೊಂದಿಗೆ ನಾಲ್ಕು ಹಿತನುಡಿಗಳನ್ನು ಆಡಿದರೂ ಅವರ ಅರ್ಧ ಸಮಸ್ಯೆ ಪರಿಹಾರವಾದಂತಾಗುತ್ತದೆ. ಜನರ ಸಮಸ್ಯೆಗಳನ್ನು ತಾಳ್ಮೆಯಿಂದ ಆಲಿಸಿ, ಸಾಧ್ಯವಾದಷ್ಟು ಶೀಘ್ರವಾಗಿ ಸ್ಪಂದಿಸುವ ಮನೋಭಾವವನ್ನು ಬೆಳೆಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಸಾರ್ವಜನಿಕರ ದೃಷ್ಟಿಯಲ್ಲಿ ಪ್ರತಿಯೊಬ್ಬ ಸರ್ಕಾರಿ ನೌಕರನೂ ಸರ್ಕಾರದ ಪ್ರತಿನಿಧಿಯಾಗಿರುತ್ತಾನೆ. ನೌಕರರು ಮಾಡುವ ಸಣ್ಣ ಸಹಾಯವೂ ಸರ್ಕಾರದ ಮೇಲಿನ ಜನರ ನಂಬಿಕೆಯನ್ನು ಹೆಚ್ಚಿಸುತ್ತದೆ. ಆದ್ದರಿಂದ ಸರ್ಕಾರಿ ಅಧಿಕಾರಿಗಳು ಹಾಗೂ ಸಿಬ್ಬಂದಿ ತಮ್ಮ ಅಧಿಕಾರವನ್ನು ಜನರ ಹಿತಕ್ಕಾಗಿ ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.
ಜನರ ಸಮಸ್ಯೆಗಳನ್ನು ಕೇವಲ ಕಡತ, ಅರ್ಜಿ ಅಥವಾ ದಾಖಲೆಗಳ ರೂಪದಲ್ಲಿ ನೋಡದೆ, ಅವುಗಳ ಹಿಂದೆ ಇರುವ ವ್ಯಕ್ತಿಯ ನೋವು, ಸಂಕಷ್ಟ ಹಾಗೂ ಅಗತ್ಯವನ್ನು ಅರ್ಥಮಾಡಿಕೊಂಡು ಮಾನವೀಯತೆಯಿಂದ ಸ್ಪಂದಿಸಬೇಕು. ಸಮಾಜದಿಂದ ಪಡೆಯುವುದಕ್ಕಿಂತ ಸಮಾಜಕ್ಕೆ ನೀಡುವುದರಲ್ಲಿ ಹೆಚ್ಚಿನ ಸಂತೃಪ್ತಿ ದೊರೆಯುತ್ತದೆ ಎಂದು ಹೇಳಿದರು.
“ನಮ್ಮಲ್ಲಿ ಮನುಷ್ಯತ್ವ ತುಂಬಿದ್ದರೆ, ನಾವು ಮಾಡುವ ಪ್ರತಿಯೊಂದು ಕೆಲಸದಲ್ಲೂ ಅದು ಪ್ರತಿಫಲಿಸುತ್ತದೆ. ಸರ್ಕಾರ ನಮಗೆ ನೀಡಿರುವ ಅಧಿಕಾರವನ್ನು ಸಮಾಜಕ್ಕೆ ಮರುಪಾವತಿ ಮಾಡುವ ಸೇವಾ ಮನೋಭಾವದಿಂದ ಬಳಸಿಕೊಳ್ಳೋಣ” ಎಂದು ಅವರು ಕರೆ ನೀಡಿದರು.
ದೇಶದ ಅಭಿವೃದ್ಧಿ ಹಾಗೂ ಜನಕಲ್ಯಾಣಕ್ಕಾಗಿ ಪ್ರತಿಯೊಬ್ಬ ಸರ್ಕಾರಿ ನೌಕರರೂ ಪ್ರಾಮಾಣಿಕತೆ, ಕರ್ತವ್ಯನಿಷ್ಠೆ, ಸೌಜನ್ಯ ಮತ್ತು ಮಾನವೀಯತೆಯಿಂದ ಕಾರ್ಯನಿರ್ವಹಿಸುವ ಸಂಕಲ್ಪ ಮಾಡಬೇಕು ಎಂದು ಅವರು ತಿಳಿಸಿದರು.
ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಡಾ. ದುರಗೇಶ್ ಕೆ.ಆರ್., ಜಿಲ್ಲಾ ಪಂಚಾಯಿತಿ ಕಾರ್ಯದರ್ಶಿ ಎಸ್.ಎಸ್. ಮುಂಡರಗಿ, ಸರ್ಕಾರಿ ನೌಕರರ ಜಿಲ್ಲಾಧ್ಯಕ್ಷ ಡಾ.ಬಸವರಾಜ ಬಳ್ಳಾರಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಸರ್ಕಾರಿ ನೌಕರರು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.



























