
ಬೆಂಗಳೂರು, ಸೆ. ೧೫- ಪ್ರಜಾಪ್ರಭುತ್ವ ಭಾರತದ ಆತ್ಮ. ಪ್ರಜಾಪ್ರಭುತ್ವದಲ್ಲಿ ಪ್ರಜೆಗಳೇ ಪ್ರಭುಗಳು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.
ವಿಧಾನಸೌಧದ ಬ್ಯಾಕ್ವೆಂಟ್ ಹಾಲ್ನಲ್ಲಿಂದು ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನವನ್ನು ಉದ್ಘಾಟಿಸಿ, ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಹಾಗೂ ದೇಶದ ಮಾಜಿ ಉಪಪ್ರಧಾನಿ ಬಾಬು ಜಗಜೀವನರಾಂ ರವರ ಭಾವಚಿತ್ರಗಳಿಗೆ ಪುಷ್ಪನಮನ ಸಲ್ಲಿಸಿ ಮಾತನಾಡಿದ ಅವರು, ಪ್ರಜಾಪ್ರಭುತ್ವ ಇರುವುದು ಬರೀ ಮತ ಹಾಕಲು ಅಲ್ಲ. ಅದೊಂದು ಬದುಕುವ ಹಕ್ಕು. ಪಂಚಾಯ್ತಿಯಿಂದ ಹಿಡಿದು ಸಂಸತ್ವರೆಗೂ ಆಯ್ಕೆ ಮಾಡುವ ಹಕ್ಕು ಇರುತ್ತದೆ ಎಂದರು.
ಸರ್ವರಿಗೂ ಸಮಬಾಳು, ಸಮಪಾಲು ಎಂದು ಹಿರಿಯರು ಮಾರ್ಗದರ್ಶನ ಕೊಟ್ಟಿದ್ದಾರೆ. ಪ್ರಜಾಪ್ರಭುತ್ವ ನಮ್ಮ ಭಾರತದ ಆತ್ಮ ಎಂಬುದನ್ನು ಯಾರೂ ಮರೆಯುವಂತಿಲ್ಲ. ವಿಶ್ವಕ್ಕೆ ಪ್ರಜಾಪ್ರಭುತ್ವ ಬಸವಣ್ಣನವರ ಅನುಭವ ಮಂಟಪದಿಂದ ಹೋಗಿದೆ. ನಾನು ಮುಖ್ಯಮಂತ್ರಿ ಆದ ಮೇಲೆ ಅನುಭವ ಮಂಟಪಕ್ಕೆ ಹೋಗಿದ್ದೆ ಎಂಬುದನ್ನು ನೆನಪಿಸಿಕೊಂಡರು.
ಪ್ರಜೆಗಳೇ ಪ್ರಜಾಪ್ರಭುತ್ವದ ಶಕ್ತಿ. ಮತದಾನ ನಮ್ಮ ಹಕ್ಕು ಎಂದು ಅವರು ತಿಳಿಸಿದರು.
ಜನ ಸರ್ಕಾರಕ್ಕೆ ಹೆದರಿದರೆ ಅದು ಸರ್ವಾಧಿಕಾರ. ಸರ್ಕಾರ ಜನರನ್ನು ಗೌರವಿಸಿದರೆ ಅದು ಪ್ರಜಾಪ್ರಭುತ್ವ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.
ಕಾಂಗ್ರೆಸ್ ಪಕ್ಷ ದೇಶಕ್ಕೆ ಪ್ರಜಾಪ್ರಭುತ್ವ, ಸ್ವಾತಂತ್ರ್ಯ ತಂದು ಕೊಟ್ಟ ಪಕ್ಷ. ಕಾಂಗ್ರೆಸ್ ಶಕ್ತಿ ದೇಶದ ಶಕ್ತಿ. ದೇಶಕ್ಕೆ ಸಂವಿಧಾನ, ರಾಷ್ಟ್ರಗೀತೆ, ಪ್ರಜಾಪ್ರಭುತ್ವ, ರಾಷ್ಟ್ರಧ್ವಜ ಕೊಟ್ಟಿದ್ದು ಕಾಂಗ್ರೆಸ್ ಎಂದರು.
ತ್ಯಾಗ ಎನ್ನುವ ಪದ ಎಲ್ಲರಲ್ಲೂ ಇರುವುದಕ್ಕೆ ಸಾಧ್ಯವಿಲ್ಲ. ನೆಹರು ರವರ ತ್ಯಾಗ, ಇಂದಿರಾಗಾಂಧಿಯವರು, ರಾಜೀವ್ಗಾಂಧಿಯವರು ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದರು. ಸೋನಿಯಾಗಾಂಧಿಯವರು ಮಾಡಿದ ಅಧಿಕಾರ ತ್ಯಾಗವನ್ನು ಯಾರಿಂದಲೂ ಮಾಡುವುದಕ್ಕೆ ಆಗಲ್ಲ ಎಂದರು.
ಜನರ ಬದುಕನ್ನು ಸುಧಾರಿಸಿ ಬದಲಾವಣೆ ತರಲು ನಾವು ೫ ಗ್ಯಾರಂಟಿಗಳನ್ನು ಬದ್ಧತೆಯಿಂದ ಜಾರಿ ಮಾಡಿದ್ದೇವೆ ಎಂದು ಹೇಳಿದರು.
ರಾಜ್ಯದಲ್ಲಿ ಎಸ್ಐಆರ್ನಿಂದ ೧ ಕೋಟಿ ಜನ ಮತ ಕಳೆದುಕೊಳ್ಳುವ ಪರಿಸ್ಥಿತಿ ಬಂದಿದೆ. ೪೭ ಲಕ್ಷ ಜನರಿಗೆ ನೋಟಿಸ್ ಕೊಟ್ಟಿದ್ದಾರೆ. ಈಗ ಅಗತ್ಯವಾದ ದಾಖಲೆಗಳನ್ನು ಕೊಡುತ್ತಿದ್ದಾರೆ. ರಾಜ್ಯದಲ್ಲಿ ಡಬಲ್ ಇಂಜಿನ್ ಸರ್ಕಾರ ಇದ್ದರೂ ಜನ ನಮಗೆ ೧೩೬ ಸ್ಥಾನ ಕೊಟ್ಟರು. ಮುಂದೆ ಏನಾಗುತ್ತದೋ ಎಂಬ ಬಗ್ಗೆ ನಾನು ಈಗ ಮಾತನಾಡಲ್ಲ ಎಂದು ಹೇಳಿದರು.
ಸಮಾಜ ಕಲ್ಯಾಣ ಇಲಾಖೆಯ ಎಸ್ಸಿಪಿ, ಟಿಎಸ್ಪಿ ಯೋಜನೆಯ ಹಣವನ್ನು ಬೇರೆ ಇಲಾಖೆಗೆ ಬಳಸಿಕೊಂಡಿರಬಹುದು. ಆದರೆ ಕೇಂದ್ರ ಸರ್ಕಾರ ರಾಜ್ಯದಂತೆ ಪರಿಶಿಷ್ಟ ಜಾತಿ, ವರ್ಗದ ಯೋಜನೆಗಳಿಗೆ ಹಣ ಕೊಡಲಿ ಎಂದು ಅವರು ಆಗ್ರಹಿಸಿದರು.
ನಾವು ಪ್ರಜಾಪ್ರಭುತ್ವ ಉಳಿಸುವುದಕ್ಕೆ ಬದ್ಧವಾಗಿದ್ದೇವೆ. ಎಲ್ಲಾ ವರ್ಗದವರನ್ನು ಒಟ್ಟಿಗೆ ತೆಗೆದುಕೊಂಡು ಹೋಗುವ ಕೆಲಸ ಮಾಡುತ್ತೇವೆ. ನಮ್ಮ ಪಕ್ಷದ ಸಿದ್ಧಾಂತದಂತೆ ಸರ್ವರಿಗೂ ಸಮಬಾಳು, ಸರ್ವರಿಗೂ ಸಮಪಾಲಿನಂತೆ ಆಡಳಿತ ನಡೆಸುತ್ತೇವೆ. ನಮಗೆ ಮಾನವೀಯತೆ ಮುಖ್ಯ ಎಂದರು.
ರಾಜ್ಯದಲ್ಲಿ ನಿವೇಶನ ಇಲ್ಲದವರಿಗೆ ನಿವೇಶನ ಕೊಡುತ್ತಿದ್ದೇವೆ. ಉಳುವವನಿಗೆ ಭೂಮಿ ಜಾರಿ ಮಾಡಿದ್ದು ಕಾಂಗ್ರೆಸ್, ಗ್ಯಾರಂಟಿ ಕೊಟ್ಟಿದ್ದು ಕಾಂಗ್ರೆಸ್. ಬಿಜೆಪಿಯವರು ಏನು ಮಾಡಿದ್ದಾರೆ ಎಂದು ಅವರು ಪ್ರಶ್ನಿಸಿದರು.
ಜನರ ನಂಬಿಕೆ ಉಳಿಸುವ ಕೆಲಸ ಮಾಡಬೇಕು. ದೇವರ ಅವಕಾಶ ಮಾತ್ರ ಕೊಡುತ್ತಾನೆ. ಕೊಟ್ಟ ಅವಕಾಶವನ್ನು ಜನರಿಗೆ ತಲುಪಿಸಬೇಕು. ಪ್ರಜಾಪ್ರಭುತ್ವ ಉಳಿಸುವುದಕ್ಕೆ ನಾವೆಲ್ಲರೂ ಬದ್ಧ ಎಂದು ಹೇಳಿದರು.
ಸಚಿವ ಮುನಿಯಪ್ಪ ಮಾತು
ಇದೇ ಕಾರ್ಯಕ್ರಮದಲ್ಲಿ ಮಾತನಾಡಿದ ಸಮಾಜ ಕಲ್ಯಾಣ ಸಚಿವ ಕೆ.ಹೆಚ್. ಮುನಿಯಪ್ಪ ಅವರು, ಸಂವಿಧಾನ ಕಾಪಾಡುವುದು ಹೇಗೆ, ಅಳವಡಿಸಿಕೊಳ್ಳುವುದರ ಬಗ್ಗೆ ಅರಿವು ಮೂಡಿಸಲಾಗುತ್ತದೆ. ಯೂತ್ ಪಾರ್ಲಿಮೆಂಟ್ ಕಾರ್ಯಕ್ರಮದಲ್ಲಿ ಯುವಕರಿಗೆ ಎಲ್ಲಾ ರೀತಿಯ ತರಬೇತಿ ನೀಡುತ್ತೇವೆ. ನವೆಂಬರ್ ತಿಂಗಳಲ್ಲಿ ಈ ಕಾರ್ಯಕ್ರಮ ನಡೆಯಲಿದೆ ಎಂದರು.
ಯೂತ್ ಪಾರ್ಲಿಮೆಂಟ್ ಕಾರ್ಯಕ್ರಮದ ಮೂಲಕ ಯುವಕರ ಭವಿಷ್ಯ ಉಜ್ವಲವಾಗಿಸೋಣ ಎಂದು ಅವರು ಹೇಳಿದರು.
ರಾಜ್ಯ ಸರ್ಕಾರ ಕ್ರೈಸ್ ವಸತಿ ಶಾಲೆಗಳ ಮೂಲಕ ಬಡ ಮಕ್ಕಳ ವಿದ್ಯಾಭ್ಯಾಸಕ್ಕೆ ಕ್ರಮ ವಹಿಸಿದೆ. ರಾಜ್ಯದಲ್ಲಿ ೮೭೭ ಶಾಲೆಗಳು ಕಾರ್ಯನಿರ್ವಹಿಸುತ್ತಿವೆ ಎಂದು ಅವರು ತಿಳಿಸಿದರು.
ಪ್ರತಿ ಹೋಬಳಿಯಲ್ಲೂ ಒಂದು ವಸತಿ ಶಾಲೆ ತೆರೆಯಲು ಕ್ರಮ ವಹಿಸಲಾಗುತ್ತಿದೆ. ಸಮಾಜ ಕಲ್ಯಾಣ ಇಲಾಖೆಯ ೨ ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿನಿಲಯಗಳು ವಿದ್ಯಾರ್ಥಿಗಳ ಓದಿಗೆ ಸಹಕಾರಿಯಾಗಿವೆ ಎಂದು ಅವರು ಹೇಳಿದರು.
ಈ ಕಾರ್ಯಕ್ರಮದಲ್ಲಿ ಯೂರ್ ಪಾರ್ಲಿಮೆಂಟ್ನ ಲೋಗೋವನ್ನು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಬಿಡುಗಡೆ ಮಾಡಿದರು.
ಸಮಾಜ ಕಲ್ಯಾಣ ಇಲಾಖೆ ಆಯೋಜಿಸಿ ಈ ಪ್ರಜಾಪ್ರಭುತ್ವ ಕಾರ್ಯಕ್ರಮದಲ್ಲಿ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್, ಸಚಿವರ ಕೆ.ಹೆಚ್. ಮುನಿಯಪ್ಪ, ಶಿವರಾಜ ತಂಗಡಗಿ ರಿಜ್ವಾನ್ ಹರ್ಷದ್, ಮಾಜಿ ಸಚಿವ ಡಾ. ಹೆಚ್.ಸಿ. ಮಹದೇವಪ್ಪ, ಪಿ.ಟಿ. ಪರಮೇಶ್ವರನಾಯಕ್, ವಿಧಾನ ಪರಿಷತ್ ಸದಸ್ಯ ಡಿ.ಟಿ. ಶ್ರೀನಿವಾಸ್, ಆದಿಜಾಂಬವ ಅಭಿವೃದ್ಧಿ ನಿಗಮದ ಅಧ್ಯಕ್ಷ ಜಿ.ಎಸ್. ಮಂಜುನಾಥ್, ಕರ್ನಾಟಕ ಪರಿಶಿಷ್ಟ ಅಲೆಮಾರಿ ಮತ್ತು ಅರೆಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಜಿ. ಪಲ್ಲವಿ, ಭೋವಿ ನಿಗಮದ ಅಧ್ಯಕ್ಷ ಎಂ. ರಾಮಪ್ಪ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
































