
ಸೈದಾಪುರ:ವಿದ್ಯಾರ್ಥಿಗಳು ಬ್ರಹ್ಮಶ್ರೀ ನಾರಾಯಣ ಗುರುಗಳ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಜ್ಞಾನ, ಶಿಸ್ತು, ಸಮಾನತೆ ಮತ್ತು ಮಾನವೀಯತೆಯ ಮೌಲ್ಯಗಳನ್ನು ಬೆಳೆಸಿಕೊಳ್ಳಬೇಕು ಎಂದು ಮುಖ್ಯಗುರು ಲಿಂಗಾರಡ್ಡಿ ನಾಯಕ ಕರೆ ನೀಡಿದರು.
ಪಟ್ಟಣದ ವಿದ್ಯಾ ವರ್ಧಕ ಸಂಘದ ವಿವಿಧ ವಿಭಾಗಗಳಿಂದ ಹಮ್ಮಿಕೊಂಡ ಬ್ರಹ್ಮಶ್ರೀ ನಾರಾಯಣ ಗುರುಗಳ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಸಮಾಜದಲ್ಲಿ ಸಮಾನತೆ, ಶಿಕ್ಷಣ, ಸಹೋದರತ್ವ ಹಾಗೂ ಮಾನವೀಯ ಮೌಲ್ಯಗಳನ್ನು ಬೆಳೆಸಲು ಶ್ರಮಿಸಿದ ಮಹಾನ್ ಸಮಾಜ ಸುಧಾರಕರಾಗಿದ್ದಾರೆ. “ಒಂದೇ ಜಾತಿ, ಒಂದೇ ಮತ, ಒಂದೇ ದೇವರು ಮನುಷ್ಯನಿಗೆ” ಎಂಬ ಅವರ ಸಂದೇಶವು ಇಂದಿಗೂ ಸಮಾಜಕ್ಕೆ ಮಾರ್ಗದರ್ಶಕವಾಗಿದೆ. ಶಿಕ್ಷಣದ ಮೂಲಕ ಸಾಮಾಜಿಕ ಪರಿವರ್ತನೆ ಸಾಧ್ಯವೆಂದು ಸಾರಿದ್ದು, ಮೂಢನಂಬಿಕೆ, ಅಸಮಾನತೆ ಮತ್ತು ಸಾಮಾಜಿಕ ತಾರತಮ್ಯಗಳ ವಿರುದ್ಧ ಜಾಗೃತಿ ಮೂಡಿಸಿದರು. ನಾರಾಯಣ ಗುರುಗಳ ಜೀವನ ಮತ್ತು ಚಿಂತನೆಗಳು ವಿದ್ಯಾರ್ಥಿಗಳಿಗೆ ಉತ್ತಮ ಸಮಾಜ ನಿರ್ಮಾಣದ ಪ್ರೇರಣೆಯಾಗಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ನಿವೃತ್ತಾ ಪ್ರಾಂಶುಪಾಲ ಜಿ.ಎಂ.ಗುರುಪ್ರಸಾದ, ಕರಬಸಯ್ಯ ದಂಡಿಗಮಠ, ಶಿಕ್ಷಕರಾದ ಸಂಗಾರಡ್ಡಿ ಪಾಟೀಲ, ನಿಜಗುಣಚಾರ್ಯ, ವಿದ್ಯಾರ್ಥಿಗಳು ಸೇರಿದಂತೆ ಇತರರಿದ್ದರು.





























