
ಕಲಬುರಗಿ: ವಿದ್ಯಾರ್ಥಿಗಳನ್ನು ದೇಶದ ಅಮೂಲ್ಯ ಸಂಪತ್ತನ್ನಾಗಿಸುವ ದೊಡ್ಡ ಜವಾಬ್ದಾರಿ ಶಿಕ್ಷಕರ ಮೇಲಿದೆ. ಶಿಕ್ಷಕರು ತಮ್ಮ ಕರ್ತವ್ಯವನ್ನು ಬದ್ಧತೆ, ಪ್ರಾಮಾಣಿಕತೆಯಿಂದ ಮಾಡಬೇಕು. ತಮ್ಮ ವಿದ್ಯಾರ್ಥಿಗಳು ಮತ್ತು ಶಾಲೆಯನ್ನು ಉನ್ನತ ಸಾಲಿನಲ್ಲಿ ಸೇರ್ಪಡೆಗೊಳಿಸಬೇಕು ಎಂಬ ಛಲಗಾರಿಕೆ ಇರಬೇಕು. ಶೃದ್ಧೆಯೊಂದಿಗೆ ಕೆಲಸ ಸಲ್ಲಿಸುವುದು ಅಗತ್ಯವಾಗಿದೆ ಎಂದು ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪುರಷ್ಕøತ ಮುಖ್ಯ ಶಿಕ್ಷಕ ನಿಂಗಪ್ಪ ಸಿ.ಮಂಗೊಂಡಿ ಮಾರ್ಮಿಕವಾಗಿ ಹೇಳಿದರು.
ನಗರದ ಆಳಂದ ರಸ್ತೆಯ ಖಾದ್ರಿ ಚೌಕ್‍ನಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಬುಧವಾರ ಸಂಜೆ ಏರ್ಪಡಿಸಿದ್ದ ತಮಗೆ ಏರ್ಪಡಿಸಿದ್ದ ಗೌರವ ಸತ್ಕಾರ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ, ಅವರು ಮಾತನಾಡಿದರು.
ನಾನು ಯಾವುದೇ ಪ್ರಶಸ್ತಿ-ಪುರಸ್ಕಾರ, ಗೌರವ ಬಯಸಿದವನಲ್ಲ. ನನ್ನ ಪಾಡಿಗೆ ನಾನು ಪ್ರಾಮಾಣಿಕತೆಯಿಂದ ಸೇವೆ ಸಲ್ಲಿಸುವುದಷ್ಟೇ ನನಗೆ ಗೊತ್ತು. ನಮ್ಮ ಶಾಲೆಗೆ ಪಿಎಂಶ್ರೀ ಯೋಜನೆ ಅಡಿಯಲ್ಲಿ ಗೌರವ, ಸ್ವಾಭಿಮಾನಿ ಶಾಲೆ ಪ್ರಶಸ್ತಿ ದೊರೆತಿದೆ. ರಾಜ್ಯ ಮಟ್ಟದ ಈ ಪ್ರಶಸ್ತಿ ನನಗೆ ದೊರೆತಿರುವುದು ಕಾರ್ಯಕ್ಕೆ ಸಹಕಾರ ನೀಡದವರು ಮತ್ತು ನನ್ನ ವಿದ್ಯಾರ್ಥಿಗಳಿಗೆ ದೊರೆತಿದೆ ಎಂದು ಭಾವಿಸುತ್ತೇನೆ ಎಂದರು.
ಉಪನ್ಯಾಸಕ ಎಚ್.ಬಿ.ಪಾಟೀಲ್ ಮಾತನಾಡಿ, ಒಬ್ಬ ಮಾದರಿ, ಆದರ್ಶ ಶಿಕ್ಷಕ ಎಂದರೆ ಹೇಗಿರಬೇಕು ಎಂಬುದಕ್ಕೆ ಮಂಗೊಂಡಿಯವರು ಉದಾಹರಣೆಯಾಗಿದ್ದಾರೆ. ಅವರಲ್ಲಿರುವ ಕಾಳಜಿ, ಕರ್ತವ್ಯದ ಬಗ್ಗೆ ಶೃದ್ಧೆ ಮಾದರಿಯಾಗಿದೆ. ಗುಂಜ ಬಬಲಾದ ಗ್ರಾಮದಲ್ಲಿನ ಸರ್ಕಾರಿ ಪ್ರಾಥಮಿಕ ಶಾಲೆ ಒಂದು ಆದರ್ಶ, ಮಾದರಿ ಶಾಲೆಯನ್ನಾಗಿಸುವ ಮೂಲಕ, ಶಾಲೆ, ಗ್ರಾಮದ ಕೀರ್ತಿಯನ್ನು ರಾಜ್ಯ, ದೇಶ ಮಟ್ಟದಲ್ಲಿ ಪಸರಿಸುವ ಕಾರ್ಯ ಮಾಡಿರುವುದು ನಿಜಕ್ಕೂ ಶ್ಲಾಘನೀಯ ಮತ್ತು ಅಭಿನಂದನಾರ್ಹವಾಗಿವೆ ಎಂದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷ ಅಸ್ಲಾಂ ಶೇಖ್, ಸಮಾಜ ಸೇವಕ ಶಿವಯೋಗೆಪ್ಪಾ ಎಸ್.ಬಿರಾದಾರ, ಅಮರ ಜಿ.ಬಂಗರಗಿ, ಶಿಕ್ಷಕಿ ಪೂಜಾ ಹೂಗಾರ ಹಾಗೂ ವಿದ್ಯಾರ್ಥಿಗಳಿದ್ದರು.































