
ಕಲಬುರಗಿ: ಪವಿತ್ರ ಶ್ರಾವಣ ಮಾಸದ ಅಂಗವಾಗಿ ಶರಣಬಸವೇಶ್ವರ ದೇವಸ್ಥಾನ ಆವರಣದಲ್ಲಿ ಪ್ರತಿವರ್ಷ ನಡೆಯುವ 40 ದಿನಗಳ ವಾರ್ಷಿಕ ಉತ್ಸವವು ಬುಧವಾರದಿಂದ ಆರಂಭವಾಗಲಿದೆ. ಉತ್ಸವದ ಅಂಗವಾಗಿ ಸಾಮಾಜಿಕ ಹಾಗೂ ಧಾರ್ಮಿಕ ವಿಷಯಗಳ ಕುರಿತು ಪ್ರವಚನಗಳು, ವಿಶೇಷ ಉಪನ್ಯಾಸಗಳು ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಭಕ್ತರು ಶ್ರಾವಣ ಮಾಸದ 30 ದಿನಗಳ ಕಾಲ ನಡೆಯುವ ಧಾರ್ಮಿಕ ಪ್ರವಚನಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷರು ಹಾಗೂ ಶರಣಬಸವ ವಿಶ್ವವಿದ್ಯಾಲಯದ ಕುಲಾಧಿಪತಿಗಳಾದ ಮಾತೋಶ್ರೀ ಪೂಜ್ಯ ಡಾ. ದಾಕ್ಷಾಯಿಣಿ ಅವ್ವಾಜಿ ಎಂದು ಭಕ್ತರಲ್ಲಿ ಮನವಿ ಮಾಡಿದರು.
ಶರಣಬಸವೇಶ್ವರ ಸಂಸ್ಥಾನದ 8ನೇ ಮಹಾದಾಸೋಹ ಪೀಠಾಧಿಪತಿಗಳಾದ ಲಿಂಗೈಕ್ಯ ಪೂಜ್ಯ ಡಾ. ಶರಣಬಸವಪ್ಪ ಅಪ್ಪಾಜಿ ಅವರ ಪ್ರಥಮ ಪುಣ್ಯತಿಥಿ ಹಾಗೂ ಸಂಸ್ಥಾನದ 7ನೇ ಮಹಾದಾಸೋಹ ಪೀಠಾಧಿಪತಿಗಳಾಗಿದ್ದ ಪೂಜ್ಯ ದೊಡ್ಡಪ್ಪ ಅಪ್ಪಾಜಿ ಅವರ 43ನೇ ಪುಣ್ಯತಿಥಿಯ ಅಂಗವಾಗಿ 40 ದಿನಗಳ ಕಾಲ ವಿಶೇಷ ಉಪನ್ಯಾಸಗಳನ್ನು ಆಯೋಜಿಸಲಾಗಿದೆ. ಪ್ರತಿದಿನ ಸಾಯಂಕಾಲ ಒಂದು ಗಂಟೆ ನಡೆಯುವ ಧಾರ್ಮಿಕ ಪ್ರವಚನಕ್ಕೂ ಮುನ್ನ ವಿಶೇಷ ಉಪನ್ಯಾಸಗಳು ನಡೆಯಲಿವೆ ಎಂದು ಅವರು ತಿಳಿಸಿದರು. ಶರಣಬಸವೇಶ್ವರರ ಜೀವನ ಮತ್ತು ಸಾಧನೆ ಕುರಿತು ಕಲಬುರಗಿ ಜಿಲ್ಲೆಯ ಸುಂಟನೂರಿನ ಖ್ಯಾತ ಧಾರ್ಮಿಕ ಪ್ರವಚನಕಾರ ಶ್ರೀ ಬಂಡಯ್ಯ ಶಾಸ್ತ್ರಿಗಳು ಅಖಿಲ ಭಾರತ ಶಿವಾನುಭವ ಮಂಟಪದಲ್ಲಿ ಶ್ರಾವಣ ಮಾಸದ 30 ದಿನಗಳ ಕಾಲ ಪ್ರತಿದಿನ ಒಂದು ಗಂಟೆ ಪ್ರವಚನ ನೀಡಲಿದ್ದಾರೆ ಎಂದು ಡಾ. ಅವ್ವಾಜಿ ಹೇಳಿದರು.
ಸಂಸ್ಥಾನದ 9ನೇ ಮಹಾದಾಸೋಹ ಪೀಠಾಧಿಪತಿಗಳಾದ ಪೂಜ್ಯ ದೊಡ್ಡಪ್ಪ ಅಪ್ಪಾಜಿಯವರು ಪವಿತ್ರ ಶ್ರಾವಣ ಮಾಸದ ಸ್ಮರಣಾರ್ಥ, ಸಾಂಪ್ರದಾಯಿಕ ಪಾದಪೂಜೆ, ತ್ರಿಕಾಲ ಪೂಜೆ ಹಾಗೂ ವಿಶೇಷ ಪೂಜೆಗಳನ್ನು ನೆರವೇರಿಸಲಿದ್ದಾರೆ. ಪ್ರತಿ ಸೋಮವಾರ ಶ್ರೀ ಶರಣಬಸವೇಶ್ವರರ ವಿಶೇಷ ಪಲ್ಲಕ್ಕಿ ಉತ್ಸವದಲ್ಲಿ ದಿವ್ಯ ಸಾನಿಧ್ಯ ವಹಿಸುವರು. ದಿನಂಪ್ರತಿ ವಿವಿಧ ಭಜನಾ ಮಂಡಳಿಗಳಿಂದ ಭಜನಾ ಕಾರ್ಯಕ್ರÀಮ, ಕಲಬುರಗಿಯ ಜಾಗತಿಕ ಲಿಂಗಾಯತ ಮಹಾಸಭಾ ಮಹಿಳಾ ಮಂಡಳ ವತಿಯಿಂದ ವಚನಾಂಜಲಿ ಕಾರ್ಯಕ್ರಮ ಜರುಗುವುದು ಎಂದು ಡಾ. ಅವ್ವಾಜಿ ಹೇಳಿದರು.
ಇದೇ ಸಂದರ್ಭದಲ್ಲಿ ನಾಡಿನ ಗಣ್ಯರು, ಶಿಕ್ಷಣ ತಜ್ಞರು ಹಾಗೂ ವಿವಿಧ ಕ್ಷೇತ್ರಗಳ ಪ್ರಮುಖರು ಲಿಂಗೈಕ್ಯ ಪೂಜ್ಯ ಡಾ. ಶರಣಬಸವಪ್ಪ ಅಪ್ಪಾಜಿ ಅವರ ಜೀವನ ಮತ್ತು ಸಾಧನೆ ಕುರಿತು ವಿಶೇಷ ಉಪನ್ಯಾಸಗಳನ್ನು ನೀಡಲಿದ್ದಾರೆ. ವಿಶೇಷವಾಗಿ ಶಿಕ್ಷಣ ಕ್ಷೇತ್ರ ಹಾಗೂ ಸಾಮಾಜಿಕ ಜೀವನಕ್ಕೆ ಡಾ. ಅಪ್ಪಾಜಿ ಅವರು ನೀಡಿದ ಕೊಡುಗೆ ಮತ್ತು ಕಲ್ಯಾಣ ಕರ್ನಾಟಕ ಪ್ರದೇಶವನ್ನು ಶೈಕ್ಷಣಿಕವಾಗಿ ಅಭಿವೃದ್ಧಿಪಡಿಸಿ ಶಿಕ್ಷಣದ ಕೇಂದ್ರವನ್ನಾಗಿ ರೂಪಿಸುವಲ್ಲಿ ಅವರು ವಹಿಸಿದ ಮಹತ್ವದ ಪಾತ್ರದ ಕುರಿತು ಉಪನ್ಯಾಸಗಳಲ್ಲಿ ಬೆಳಕು ಚೆಲ್ಲಲಾಗುವುದು ಎಂದರು.
ಕಳೆದ 250ಕ್ಕೂ ಹೆಚ್ಚು ವರ್ಷಗಳಿಂದ ಪವಿತ್ರ ಶ್ರಾವಣ ಮಾಸದಲ್ಲಿ ಶರಣಬಸವೇಶ್ವರ ದೇವಸ್ಥಾನದಲ್ಲಿ ನಡೆಯುತ್ತಿರುವ ಈ ಬೃಹತ್ ಸಾಮಾಜಿಕ, ಧಾರ್ಮಿಕ ಉತ್ಸವವು ಇದೇ ಮೊದಲ ಬಾರಿಗೆ ಸಂಸ್ಥಾನದ 9ನೇ ಪೀಠಾಧಿಪತಿಗಳಾದ ಪೂಜ್ಯ ದೊಡ್ಡಪ್ಪ ಅಪ್ಪ ಅವರ ನೇತೃತ್ವದಲ್ಲಿ ಹಾಗೂ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಮಾತೋಶ್ರೀ ಪೂಜ್ಯ ಡಾ. ದಾಕ್ಷಾಯಿಣಿ ಅವ್ವಾಜಿ ಅವರ ಮಾರ್ಗದರ್ಶನದಲ್ಲಿ ನಡೆಯಲಿದೆ.
ಲಿಂಗೈಕ್ಯ ಪೂಜ್ಯ ಡಾ. ಅಪ್ಪಾಜಿ ಅವರ ಪ್ರಥಮ ಪುಣ್ಯತಿಥಿಯ ಅಂಗವಾಗಿ ಬುಧವಾರದಿಂದ 40 ದಿನಗಳ ಕಾಲ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಕ್ರೀಡಾಕೂಟಗಳು, ಮ್ಯಾರಥಾನ್, ಉಚಿತ ಆರೋಗ್ಯ ತಪಾಸಣಾ ಶಿಬಿರಗಳು, ರಕ್ತದಾನ ಶಿಬಿರಗಳು, ನಗರದ ವಿವಿಧ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳಿಂದ ಸ್ವಚ್ಛತಾ ಹಾಗೂ ಜಾಗೃತಿ ಅಭಿಯಾನಗಳು, ಮಹಿಳಾ ಶಿಕ್ಷಕರು ಮತ್ತು ವಿದ್ಯಾರ್ಥಿನಿಯರಿಂದ ಬೈಕ್ ರ್ಯಾಲಿ ಸೇರಿದಂತೆ ಅಪ್ಪಾಜಿ ಅವರ ಕೊಡುಗೆಗಳನ್ನು ಬಿಂಬಿಸುವ ಹಲವು ಕಾರ್ಯಕ್ರಮಗಳು ನಡೆಯಲಿವೆ ಎಂದು ಡಾ. ಅವ್ವಾಜಿ ತಿಳಿಸಿದರು.
ಹಿಂದೂ ಪಂಚಾಂಗದ ಪ್ರಕಾರ ಲಿಂಗೈಕ್ಯ ಪೂಜ್ಯ ಡಾ. ಅಪ್ಪಾಜಿ ಅವರ ಪ್ರಥಮ ಪುಣ್ಯತಿಥಿಯು ಸೆಪ್ಟೆಂಬರ್ 2 ರಂದು ನಡೆಯಲಿದ್ದು, ಅಂದು ವಿವಿಧ ಧಾರ್ಮಿಕ ಮಠಗಳ ಪೀಠಾಧಿಪತಿಗಳು ಭಾಗವಹಿಸುವ ಬೃಹತ್ ಕಾರ್ಯಕ್ರಮವನ್ನು ಆಯೋಜಿಸಲಾಗುವುದು ಎಂದರು. ಈ ಸಂದರ್ಭದಲ್ಲಿ ಡಾ. ಅಪ್ಪಾಜಿ ಅವರೊಂದಿಗೆ ನಿಕಟ ಸಂಪರ್ಕ ಹೊಂದಿದ್ದ ಹಲವು ಗಣ್ಯರು ಬರೆದ ಲೇಖನಗಳು ಹಾಗೂ ನೆನಪುಗಳನ್ನು ಒಳಗೊಂಡ, ಡಾ. ನೀಲಾಂಬಿಕಾ ಶೇರಿಕಾರ್ ಅವರು ಸಂಪಾದಿಸಿ ರಚಿಸಿರುವ “ಮಹಾಮಾನವ” ಎಂಬ ಬೃಹತ್ ಕೃತಿಯನ್ನು ಬಿಡುಗಡೆ ಮಾಡಲಾಗುವುದು. ತಮ್ಮ ತಮ್ಮ ಶಾಲಾ, ಕಾಲೇಜುಗಳಲ್ಲಿ ಉತ್ತಮ ಫಲಿತಾಂಶ ಸಾಧಿಸಲು ವಿಶೇಷವಾಗಿ ಶ್ರಮಿಸಿದ ವಿವಿಧ ಶಾಲೆಗಳ ಅತ್ಯುತ್ತಮ ಶಿಕ್ಷಕರಿಗೆ ಕಾರ್ಯಕ್ರಮದಲ್ಲಿ ಪ್ರಶಸ್ತಿಗಳನ್ನು ವಿತರಿಸಲಾಗುವುದು. ಅಲ್ಲದೆ, ಪುಣ್ಯತಿಥಿಯ ಅಂಗವಾಗಿ ಆಯೋಜಿಸಲಾದ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ತೇರ್ಗಡೆಯಾದ ವಿದ್ಯಾರ್ಥಿಗಳಿಗೂ ಬಹುಮಾನಗಳನ್ನು ವಿತರಿಸಲಾಗುವುದು ಎಂದು ಅವರು ಹೇಳಿದರು.
ಲಿಂಗೈಕ್ಯ ಡಾ. ಅಪ್ಪಾಜಿ ಅವರ ಪುಣ್ಯತಿಥಿಯ ಅಂಗವಾಗಿ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ವತಿಯಿಂದ ವಿವಿಧ ಸ್ಪರ್ಧೆಗಳು ಹಾಗೂ ಕ್ರೀಡಾಕೂಟಗಳನ್ನು ಆಯೋಜಿಸಲಾಗಿದೆ. ಡಾ. ಅಪ್ಪಾಜಿ ಅವರಿಗೆ ಅತ್ಯಂತ ಪ್ರಿಯವಾದ ಕ್ರೀಡೆಯಾಗಿದ್ದ ವಾಲಿಬಾಲ್‍ಗೆ ವಿಶೇಷ ಮಹತ್ವ ನೀಡಲಾಗಿದ್ದು, ಶರಣಬಸವೇಶ್ವರ ಆಟ್ರ್ಸ್ ಕಾಲೇಜಿನ ಆಶ್ರಯದಲ್ಲಿ ಅಂತರ್ ಶಾಲಾ ಹಾಗೂ ಅಂತರ್ ಕಾಲೇಜು ವಾಲಿಬಾಲ್ ಪಂದ್ಯಾವಳಿ ನಡೆಯಲಿದೆ. ಪುಣ್ಯತಿಥಿಯ ಅಂಗವಾಗಿ ಶಿಕ್ಷಕರು ಹಾಗೂ ವಿದ್ಯಾರ್ಥಿಗಳಿಗಾಗಿ ಮ್ಯಾರಥಾನ್ ಓಟವನ್ನೂ ಆಯೋಜಿಸಲಾಗಿದೆ. ಶರಣಬಸವ ವಿಶ್ವವಿದ್ಯಾಲಯದ ವಿವಿಧ ವಿಭಾಗಗಳು ಹಾಗೂ ಸಂಘದ ಅಧೀನದಲ್ಲಿರುವ ಕಾಲೇಜುಗಳ ವಿದ್ಯಾರ್ಥಿಗಳಿಂದ ಪೂಜ್ಯ ಡಾ. ಅಪ್ಪಾಜಿ ಅವರ ಜೀವನದ ವಿವಿಧ ಆಯಾಮಗಳನ್ನು ಆಧರಿಸಿ ಚರ್ಚಾ ಸ್ಪರ್ಧೆ, ಭಾಷಣ ಸ್ಪರ್ಧೆ, ಚಿತ್ರಕಲೆ, ಸಂಗೀತ ಸೇರಿದಂತೆ ವಿವಿಧ ಸ್ಪರ್ಧೆಗಳು ಹಾಗೂ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಡಾ. ಅವ್ವಾಜಿ ತಿಳಿಸಿದರು.




























