
ಯಾದಗಿರಿ: ಹಿಂದೂ ಮಹಾಗಣಪತಿ ಉತ್ಸವ ಸಮಿತಿ ವತಿಯಿಂದ ಪ್ರಸಕ್ತ ಸಾಲಿನ ಗಣೇಶೋತ್ಸವ ಅಂಗವಾಗಿ ಇಂದಿನಿAದ (ಸೆ.೧೩) ಹಿಂದೂ ಮಹಾಗಣಪತಿ ವಿರಾಟ್ ಪ್ರತಿಮೆಯ ಭವ್ಯ ಆಗಮನ, ಸ್ವಾಗತ, ಪ್ರತಿಷ್ಠಾಪನೆ, ನಿತ್ಯ ಪೂಜೆ ಹಾಗೂ ವಿವಿಧ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಆರಂಭವಾಗಲಿವೆ.
ಸೆ.೧೩ರAದು ಭಾನುವಾರ ಸಂಜೆ ೭ ಗಂಟೆಗೆ ನಗರದ ಶಾಸ್ತ್ರಿ ವೃತ್ತದಲ್ಲಿ ವಿರಾಟ್ ರೂಪದ ವಿಘ್ನೇಶ್ವರನ ಪ್ರತಿಮೆಯನ್ನು ಶಾಸ್ತ್ರೋಕ್ತ ವಿಧಿವಿಧಾನಗಳೊಂದಿಗೆ ಬರಮಾಡಿಕೊಂಡು, ಶ್ರೀಗಣೇಶನ ಮುಖದರ್ಶನ ಕಾರ್ಯಕ್ರಮ ನಡೆಯಲಿದೆ.
ನಂತರ ಕನ್ನೇರಿ ಪರಮಪೂಜ್ಯ ಶ್ರೀ ಅದೃಶ್ಯ ಕಾಡಸಿದ್ಧೇಶ್ವರ ಸ್ವಾಮೀಜಿಗಳ ಸಾನ್ನಿಧ್ಯದಲ್ಲಿ ಲಕ್ಷ ವೃಕ್ಷಾರೋಪಣ ಸಂಕಲ್ಪ ಹಾಗೂ ಸಾವಯವ ಕೃಷಿ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮ ನಡೆಯಲಿದೆ.
ಸೆ.೧೪ರಂದು ಸೋಮವಾರ ಬೆಳಗ್ಗೆ ೧೧ ಗಂಟೆಗೆ ಶ್ರೀ ಜೈ ಭವಾನಿ ದೇವಸ್ಥಾನದ ಸಮೀಪದ ವೇದಿಕೆಯಲ್ಲಿ ಶ್ರೀ ಗಣೇಶ ದೇವರ ಭವ್ಯ ಪ್ರತಿಮೆ ಪ್ರತಿಷ್ಠಾಪನೆ ನಡೆಯಲಿದೆ. ಈ ಸಂದರ್ಭದಲ್ಲಿ ಪೂಜೆ, ಮಹಾಪಂಚಾಮೃತ ಅಭಿಷೇಕ, ಅಷ್ಟದ್ರವ್ಯ ಗಣಪತಿ ಹೋಮ, ಹೋಮ ಪೂರ್ಣಾಹುತಿ, ಮಹಾಮಂಗಳಾರತಿ ಹಾಗೂ ಪ್ರಸಾದ ವಿನಿಯೋಗ ಕಾರ್ಯಕ್ರಮಗಳು ಜರುಗಲಿವೆ.
ಉತ್ಸವದ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಕ್ತರು ಕುಟುಂಬ ಪರಿವಾರ ಸಮೇತ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ, ಪೂಜಾ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಶ್ರೀ ಗಣೇಶನ ಕೃಪೆಗೆ ಪಾತ್ರರಾಗಬೇಕು ಎಂದು ಶಿವಕುಮಾರ್ ಸುಕ್ಲೂರು ಮನವಿ ಮಾಡಿದ್ದಾರೆ.





























