Home ಜಿಲ್ಲೆ ಕಲಬುರಗಿ ಮುಂಗಾರು ಪೂರ್ವಸಿದ್ಧತೆ: ಅಧಿಕಾರಿಗಳಿಗೆ ಶಾಸಕರ ಖಡಕ್ ಸೂಚನೆ

ಮುಂಗಾರು ಪೂರ್ವಸಿದ್ಧತೆ: ಅಧಿಕಾರಿಗಳಿಗೆ ಶಾಸಕರ ಖಡಕ್ ಸೂಚನೆ

ಕಲಬುರಗಿ,ಜೂ.2: ಮಳೆಗಾಲ ಆರಂಭವಾಗುತ್ತಿರುವದರಿಂದ ಕಲಬುರಗಿ ಮಹಾ ನಗರದ ಎಲ್ಲಾ 55 ವಾರ್ಡ್‍ಗಳಲ್ಲಿರುವ ಮಳೆ ನೀರಿನ ಮೋರಿಗಳು, ಚರಂಡಿಗಳಲ್ಲಿನ ಹೂಳೆತ್ತಿ ಸ್ವಚ್ಛತೆ ಇಟ್ಟುಕೊಂಡು ಮಳೆಗಾಲ ಪೂರ್ತಿ ನೀರು ರಸ್ತೆಯಲ್ಲಿ ನಿಲ್ಲದಂತೆ ಸರಾಗವಾಗಿ ಹರಿದು ಹೋಗಲು ಈಗಿನಿಂದಲೇ ಪೂರ್ವಸಿದ್ಧತೆ ಮಾಡಿಕೊಂಡು ಜನರ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡುವಂತೆ ಪಾಲಿಕೆಯ ಅಧಿಕಾರಿಗಳಿಗೆ ಕಲಬುರಗಿ ದಕ್ಷಿಣ ಮತಕ್ಷೇತ್ರ ಶಾಸಕ ಅಲ್ಲಮಪ್ರಭು ಪಾಟೀಲ ಅವರು ನಿರ್ದೇಶನ ನೀಡಿದ್ದಾರೆ.
ಪಾಲಿಕೆಯ ಆಯುಕ್ತರು ಸೇರಿದಂತೆ ನೈರ್ಮಲ್ಯ ವಿಭಾಗ, ಬೀದಿ ದೀಪ ವಿಭಾಗದ ಪ್ರಮುಖರಿಗೆ ನಿರ್ದೇಶನ ನೀಡಿದ್ದು ಮಳೆಗಾಲದಲ್ಲಿ ರಸ್ತೆ ದೀಪಗಳು ಕೈ ಕೊಡದಂತೆ ಅಗತ್ಯ ರಿಪೇರಿ ಮಾಡಕೊಳ್ಳಿ, ಚರಂಡಿ ಹೂಳು ಎತ್ತುವ ಮೂಲಕ ನೀರಿನ ಸರಾಗ ಹರಿವು ಖಚಿತಪಡಿಸಿಕೊಳ್ಳುವಂತೆ ಸಲಹೆ ನೀಡಿದ್ದಾರೆ.
ಬೀದಿ ದೀಪ ಕೆಲಸ ಮಾಡದಿದ್ದರೆ ಮಳೆಗಾಲದಲ್ಲಿ ಜನ ತೊಂದರೆ ಎದುರಿಸಬೇಕಾಗುತ್ತದೆ. ಪಾಲಿಕೆಯ ವಿದ್ಯುತ್ ವಿಭಾಗದವರು ಎಲ್ಲಾ ಬೀದಿ ದೀಪಗಳ ನಿರ್ವಹಣೆ ಸರಿಯಾಗಿ ಈಗಿನಿಂದಲೇ ಕೈಗೊಂಡು ಜನರ ತೊಂದರೆ ಕಮ್ಮಿ ಮಾಡಬೇಕು, ಜೊತೆಗೇ ರಸ್ತೆಗಳಲ್ಲಿ ಕುಳಿಗಳು ಕಂಡಲ್ಲಿ ತಕ್ಷಣ ಯಂತ್ರಗಳ ಸಹಾಯದಿಂದ ದುರಸ್ಥಿಗೆ ಮುಂದಾಗಬೇಕು, ಮಳೆಗಾಲದಲ್ಲಿ ನೀರು ನಿಂತು ತಗ್ಗಲ್ಲಿ ಬೈಕ್ ಸವಾರರು, ಪಾದಚಾರಿಗಳು ಬಿದ್ದು ತೊಂದರೆ ಎದುರಿಸುವ ಸಾಧ್ಯತೆಗಳಿರುವದರಿಂದ ಈ ಬಗ್ಗೆ ಪಾಲಿಕೆ ಈಗಿನಿಂದಲೇ ಗಮನ ಹರಿಸುವಂತೆ ಶಾಸಕರು ಸೂಚಿಸಿದ್ದಾರೆ.
ಕಲಬುರಗಿ ದಕ್ಷಿಣ ಮತಕ್ಷೇತ್ರದಡಿ ಬರುವ ರೈತರಿಗೆ ಮುಂಗಾರು ಮಳೆ ಬಂದಾಕ್ಷಣ ರಸಗೊಬ್ಬರ, ಬಿತ್ತನೆ ಬೀಜಗಳ ಕೊರತೆ ಕಾಡದಂತೆ ರೈತರ ಬೇಡಿಕೆಗೆ ತಕ್ಕಂತೆ ದಾಸ್ತಾನು ಮಾಡಿಟ್ಟುಕೊಂಡು ಅಗತ್ಯ ಮಾಹಿತಿ ರೈತರಲ್ಲಿ ತಿಳಿಸಬೇಕು ಎಂದು ಕೃಷಿ ಸಹಾಯಕ ನಿರ್ದೇಶಕರಿಗೂ ಶಾಸಕರು ಸೂಚಿಸಿದ್ದಾರೆ.
ಇದಲ್ಲದೆ ರೈತ ಸಂಪರ್ಕ ಕೇಂದ್ರಗಳಲ್ಲಿಯೂ ರೈತರಿಗೆ ಅಗತ್ಯ ಮಹಿತಿ, ಸೂಚನೆ ನೀಡುವ ಕೆಲಸಕ್ಕೂ ವ್ಯವಸ್ಥೆ ಮಾಡಬೇಕು. ರೈತರಿಗೆ ಸೂಕ್ತ ಬಿತ್ತನೆ ಬೀಜ, ಗೊಬ್ಬರ ದೊರಕಬೇಕು. ರಸಗೊಬ್ಬರ, ಬೀಜ ಹೆಚ್ಚಿನ ಬೆಲೆಗೆ ಮಾರಾಟವಾಗದಂತೆ ಸೂಕ್ತ ಉಸ್ತುವಾರಿ ವಹಿಸುವಂತೆಯೂ ಕೃಷಿ ಇಲಾಖೆ ತಾಲೂಕು ಅಧಿಕಾರಿಗಳಿಗೆ ಅಲ್ಲಮಪ್ರಭು ಪಾಟೀಲ್ ಸೂಚಿಸಿದ್ದಾರೆ.