Home Lead News ಸಂಪುಟ ರಚನೆ ಸವಾಲು

ಸಂಪುಟ ರಚನೆ ಸವಾಲು

ಬೆಂಗಳೂರು, ಮೇ ೩೧- ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕನ ಆಯ್ಕೆಯನ್ನು ಸುಗಮವಾಗಿ ನಡೆಸಿದ ಕಾಂಗ್ರೆಸ್ ಹೈಕಮಾಂಡ್‌ಗೆ ಈಗ ಸಚಿವ ಸಂಪುಟ ರಚನೆ ಸವಾಲಾಗಿ ಪರಿಣಮಿಸಿದೆ.


ನೂತನ ಮುಖ್ಯಮಂತ್ರಿಯಾಗಿ ಬುಧವಾರ ಪ್ರಮಾಣ ವಚನ ಸ್ವೀಕರಿಸಲಿರುವ ಡಿ.ಕೆ. ಶಿವಕುಮಾರ್ ರವರ ಜತೆ ೮-೧೦ ಸಚಿವರ ಪ್ರಮಾಣ ವಚನಕ್ಕೂ ಕಾಂಗ್ರೆಸ್ ಹೈಕಮಾಂಡ್ ನಿರ್ಧರಿಸಿತ್ತು. ಅದರಂತೆ ಹಿರಿಯ ಸಚಿವರನ್ನು ಮೊದಲ ಹಂತದ ಸಂಪುಟ ರಚನೆಯಲ್ಲಿ ಸೇರ್ಪಡೆ ಮಾಡಿಕೊಂಡು ಪ್ರಮಾಣ ವಚನ ನಡೆಸಲು ಕಾಂಗ್ರೆಸ್ ಹೈಕಮಾಂಡ್ ತೀರ್ಮಾನ ಕೈಗೊಂಡಿತ್ತು.


ಮೊದಲ ಹಂತದಲ್ಲೇ ಸಚಿವರಾಗಲು ಕಾಂಗ್ರೆಸ್‌ನ ಹಿರಿಯ ನಾಯಕರಲ್ಲೇ ಪೈಪೋಟಿ ಏರ್ಪಟ್ಟಿದ್ದು, ಸಂಪುಟ ರಚನೆ ಇದೀಗ ಹೈಕಮಾಂಡ್‌ಗೆ ಸವಾಲಿನ ಜತೆಗೆ ತಲೆನೋವಾಗಿ ಪರಿಣಮಿಸಿದೆ.


ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರಾಗಿ ಡಿ.ಕೆ. ಶಿವಕುಮಾರ್ ರವರನ್ನು ನಿನ್ನೆ ಸಂಜೆ ಶಾಸಕಾಂಗ ಪಕ್ಷದ ಸಭೆಯಲ್ಲಿ ಆಯ್ಕೆ ಮಾಡಿದ ನಂತರ ಎಐಸಿಸಿ ಪ್ರಧಾನ ಕಾರ್ಯದರ್ಶಿಗಳಾದ ರಣದೀಪ್ ಸಿಂಗ್ ಸುರ್ಜೇವಾಲ, ಕೆ.ಸಿ. ವೇಣುಗೋಪಾಲ್, ಡಿ.ಕೆ. ಶಿವಕುಮಾರ್ ಹಾಗೂ ಸಿದ್ದರಾಮಯ್ಯನವರು ಸಂಪುಟ ರಚನೆ ಬಗ್ಗೆ ಚರ್ಚೆ ನಡೆಸಿದರಾದರೂ ಮೊದಲ ಹಂತದ ಸಚಿವರ ಪಟ್ಟಿ ಅಂತಿಮಗೊಳಿಸಲು ಸಾಧ್ಯವಾಗಲಿಲ್ಲ.


ನಿನ್ನೆ ಸಂಜೆಯೇ ಸಚಿವರ ಪಟ್ಟಿ ಅಂತಿಮವಾಗಲಿದೆ ಎಂದು ಹೇಳಲಾಗಿತ್ತಾದರೂ ಹಿರಿಯ ಸಚಿವರುಗಳ ಪೈಪೋಟಿಯಿಂದ ಪಟ್ಟಿ ಅಂತಿಮಗೊಳ್ಳಲು ಸಾಧ್ಯವಾಗಿಲ್ಲ. ಹಾಗಾಗಿ ಸಚಿವ ಸಂಪುಟ ರಚನೆಯ ಪ್ರಕ್ರಿಯೆಗಳು ಈಗ ಮತ್ತೆ ಹೈಕಮಾಂಡ್ ಅಂಗಳಕ್ಕೆ ತಲುಪಿದೆ.


ಶಾಸಕಾಂಗ ಪಕ್ಷದ ಸಭೆಗೆ ವೀಕ್ಷಕರಾಗಿ ಆಗಮಿಸಿದ್ದ ರಣದೀಪ್ ಸಿಂಗ್ ಸುರ್ಜೇವಾಲ ಮತ್ತು ಕೆ.ಸಿ. ವೇಣುಗೋಪಾಲ್ ಅವರು ನಿಯೋಜಿತ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ರವರನ್ನು ದೆಹಲಿಗೆ ಬನ್ನಿ, ಅಲ್ಲಿಯೇ ವರಿಷ್ಠರ ಸಮ್ಮುಖದಲ್ಲಿ ಸಚಿವರ ಪಟ್ಟಿಯನ್ನು ಅಂತಿಮಗೊಳಿಸೋಣ ಎಂದು ಹೇಳಿದ್ದು, ಅದಕ್ಕೆ ಡಿ.ಕೆ. ಶಿವಕುಮಾರ್ ಮತ್ತು ಸಿದ್ದರಾಮಯ್ಯ ಒಪ್ಪಿಗೆ ನೀಡಿದ್ದಾರೆ.


ಸಚಿವ ಸಂಪುಟ ರಚನೆ ಸಂಬಂಧ ಡಿ.ಕೆ. ಶಿವಕುಮಾರ್ ರವರು ಇಂದು ಸಂಜೆ ಅಥವಾ ನಾಳೆ ದೆಹಲಿಗೆ ತೆರಳಲಿದ್ದು, ಸಿದ್ದರಾಮಯ್ಯ ಅವರನ್ನು ಸಹ ವರಿಷ್ಠರು ದೆಹಲಿಗೆ ಕರೆಸಿಕೊಂಡು ಇಬ್ಬರ ಜೊತೆಯೂ ಚರ್ಚಿಸಿ ಅಂತಿಮಗೊಳಿಸುವರು.


ಸಿದ್ದರಾಮಯ್ಯ ಅವರು ನಾಳೆ ದೆಹಲಿಗೆ ತೆರಳುವ ಸಾಧ್ಯತೆಯಿದೆ. ನಾಳೆ ದೆಹಲಿಯಲ್ಲಿ ಸಚಿವರ ಪಟ್ಟಿ ಅಂತಿಮಗೊಳಿಸುವ ಸಂಬಂಧ ವರಿಷ್ಠರ ಸಭೆ ನಿಗದಿಯಾಗಿದೆ.
ಬುಧವಾರ ಡಿ.ಕೆ. ಶಿವಕುಮಾರ್ ರವರ ಜತೆ ಹಿರಿಯರಾದ ಡಾ. ಜಿ. ಪರಮೇಶ್ವರ್, ರಾಮಲಿಂಗಾರೆಡ್ಡಿ, ಕೆ.ಜೆ. ಜಾರ್ಜ್, ಸತೀಶ್ ಜಾರಕಿಹೊಳಿ, ಎಂ.ಬಿ. ಪಾಟೀಲ್, ಕೆ.ಹೆಚ್. ಮುನಿಯಪ್ಪ, ಈಶ್ವರ್ ಖಂಡ್ರೆ, ಜಮೀರ್ ಅಹಮದ್ ಖಾನ್, ಯು.ಟಿ. ಖಾದರ್, ಚಲುವರಾಯಸ್ವಾಮಿ ಇವರುಗಳು ಪ್ರಮಾಣ ವಚನ ಸ್ವೀಕರಿಸಬೇಕಾಗಿತ್ತಾದರೂ ಮೊದಲ ಹಂತದಲ್ಲಿ ಸಚಿವರಾಗಲು ಸಚಿವಾಕಾಂಕ್ಷಿಗಳ ನಡುವೆ ಪೈಪೋಟಿ ಏರ್ಪಟ್ಟಿದ್ದು, ಪಟ್ಟಿ ಅಂತಿಮಗೊಳಿಸುವುದು ಹೈಕಮಾಂಡ್‌ಗೆ ತಲೆನೋವು ತಂದಿದೆ.


ಹಾಗಾಗಿ ಸಚಿವರ ಪಟ್ಟಿ ಅಂತಿಮಗೊಳ್ಳುವುದು ತಡವಾಗಿದ್ದು, ಬಹುತೇಕ ಮಂಗಳವಾರ ಮೊದಲ ಹಂತದ ಸಚಿವರ ಪಟ್ಟಿ ಅಂತಿಮಗೊಳ್ಳಲಿದ್ದು, ೧೨ ರಿಂದ ೧೪ ಮಂದಿ ಹಿರಿಯರು ಪ್ರಮಾಣ ವಚನ ಸ್ವೀಕರಿಸುವ ಸಾಧ್ಯತೆ ಇದೆ.
ಜೂ. ೧೬ ರೊಳಗೆ ಸಂಪೂರ್ಣ ಮಂತ್ರಿ ಮಂಡಲ
ಜೂನ್ ೩ ರಂದು ನೂತನ ಮುಖ್ಯಮಂತ್ರಿಯ ಪದಗ್ರಹಣ, ಮೊದಲ ಹಂತದ ಸಚಿವರ ಪ್ರಮಾಣ ವಚನ ನಡೆದ ಬಳಿಕ ಜೂ. ೧೬ ರೊಳಗೆ ಪೂರ್ಣ ಪ್ರಮಾಣದ ಸಚಿವ ಸಂಪುಟ ರಚನೆಯಾಗಲಿದೆ.


ಪ್ರಾದೇಶಿಕವಾರು, ಜಾತಿವಾರು ಪ್ರಾತಿನಿಧ್ಯ ಎಲ್ಲವನ್ನು ಅಳೆದು ತೂಗಿ ಹೈಕಮಾಂಡ್ ಸಚಿವ ಸಂಪುಟ ರಚನೆಗೆ ನಿರ್ಧಿರಿಸಿದ್ದು, ಆದಷ್ಟು ಹೊಸ ಮುಖಗಳಿಗೆ ಆದ್ಯತೆ ನೀಡಲು ನಿರ್ಧರಿಸಿದೆ. ಹಾಗಾಗಿ ಸಿದ್ದರಾಮಯ್ಯ ಮಂತ್ರಿ ಮಂಡಲದಲ್ಲಿದ್ದು ೧೫ ರಿಂದ ೧೭ ಮಂದಿಗೆ ಮತ್ತೆ ಸಚಿವ ಸ್ಥಾನ ಸಿಗುವುದು ಕಷ್ಟ.


ಹೈಕಮಾಂಡ್ ಸಂಪುಟದಲ್ಲಿ ಹೊಸ ಮುಖಗಳಿಗೆ ಆದ್ಯತೆ ನೀಡಿ ಹಿರಿಯರಿಗೆ ಕೊಕ್ ನೀಡಲಿದೆ ಎಂಬ ಸುದ್ದಿಗಳು ಗೊತ್ತಾಗುತ್ತಿದ್ದಂತೆಯೇ ನಾಲ್ಕೈದು ಬಾರಿ ಗೆದ್ದಿರುವ, ೨-೩ ಬಾರಿ ಸಚಿವರಾಗಿರುವವರು ಪಕ್ಷದ ತಮ್ಮ ಸೇವೆಯನ್ನು ಪರಿಗಣಿಸಿ ನಮಗೆ ಸಚಿವ ಸ್ಥಾನ ನೀಡಿ. ಹಿರಿಯರು ಎಂಬ ಕಾರಣಕ್ಕೆ ಸಚಿವ ಸ್ಥಾನ ನೀಡದೇ ಇರುವುದು ಸರಿಯಲ್ಲ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆರವರಿಗೆ ಮನವಿ ಮಾಡಿದ್ದಾರೆ.


ಇದರ ಜತೆಗೆ ಹೊಸದಾಗಿ ವಿಧಾನಸಭೆಗೆ ಆಯ್ಕೆಯಾಗಿರುವ ಯುವ ಶಾಸಕರು ತಮಗೂ ಸಂಪುಟದಲ್ಲಿ ಆದ್ಯತೆ ನೀಡಿ ಎಂದು ಪಟ್ಟು ಹಿಡಿದಿದ್ದಾರೆ. ಹೀಗಾಗಿ ಸಂಪುಟ ರಚನೆ ಹೈಕಮಾಂಡ್‌ಗೆ ಸವಾಲಾಗಿದ್ದು, ಇದಕ್ಕೆ ಯಾವ ರೀತಿ ಪರಿಹಾರ ಸೂತ್ರಗಳನ್ನು ಕಂಡುಕೊಳ್ಳಲಿದೆ ಎಂಬುದು ಕುತೂಹಲ ಮೂಡಿಸಿದೆ.