ಯಾದಗಿರಿ: ಜು.3: ಶಹಾಪುರದ ಮಾತೋಶ್ರೀ ಹೇಮರೆಡ್ಡಿ ಮಲ್ಲಮ್ಮ ಸೌಹಾರ್ದ ಸಹಕಾರ ಸಂಘದ ಅಧ್ಯಕ್ಷರಾಗಿದ್ದ ಬಸನಗೌಡ ಮಾಲಿಪಾಟೀಲ್ ಅವರ ಆತ್ಮಹತ್ಯೆ ಪ್ರಕರಣಕ್ಕೆ ಶಾಸಕ ಶರಣಬಸಪ್ಪ ದರ್ಶನಾಪುರ, ಅಂಬರೀಶಗೌಡ ದರ್ಶನಾಪುರ ಹಾಗೂ ವಿಶ್ವನಾಥರೆಡ್ಡಿ ದರ್ಶನಾಪುರ ನೇರ ಹೊಣೆಗಾರರು ಎಂದು ಬಿಜೆಪಿ ಮಾಜಿ ಜಿಲ್ಲಾ ಅಧ್ಯಕ್ಷ ಅಮೀನ್ ರೆಡ್ಡಿ ಯಾಳಗಿ ಗಂಭೀರ ಆರೋಪ ಮಾಡಿದರು. ಅಲ್ಲದೆ, ಸಂಘದಲ್ಲಿ ನಡೆದಿರುವ ಹಣಕಾಸು ಅವ್ಯವಹಾರದ ಸಮಗ್ರ ತನಿಖೆಯನ್ನು ಸಿಬಿಐಗೆ ವಹಿಸಬೇಕೆಂದು ಆಗ್ರಹಿಸಿದರು.
ಗುರುವಾರ ಯಾದಗಿರಿಯ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆತ್ಮಹತ್ಯೆಗೂ ಮುನ್ನ ಬಸನಗೌಡ ಮಾಲಿಪಾಟೀಲ್ ಬರೆದಿದ್ದಾರೆ ಎನ್ನಲಾದ ಡೆತ್ ನೋಟ್ ಅನ್ನು ಸರ್ಕಾರ ಬಹಿರಂಗಪಡಿಸಬೇಕು. ಅವರು ಸಲ್ಲಿಸಿದ್ದ ದೂರಿನ ಆಧಾರದ ಮೇಲೆ ಸಂಬಂಧಪಟ್ಟವರ ವಿರುದ್ಧ ತಕ್ಷಣ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.
ಸಹಕಾರ ಸಂಘವು ಶಾಸಕ ಶರಣಬಸಪ್ಪ ದರ್ಶನಾಪುರ ಅವರ ಪ್ರಭಾವದಲ್ಲಿಯೇ ಕಾರ್ಯನಿರ್ವಹಿಸುತ್ತಿತ್ತು. ಅವರು ಮಧ್ಯಪ್ರವೇಶಿಸಿ ಸಮಸ್ಯೆ ಬಗೆಹರಿಸಿದ್ದರೆ ಅಧ್ಯಕ್ಷ ಬಸನಗೌಡ ಅವರ ಜೀವ ಉಳಿಯಬಹುದಿತ್ತು. ಆದರೆ ತಮ್ಮ ಆಪ್ತರನ್ನೇ ರಕ್ಷಿಸುವ ಪ್ರಯತ್ನದಿಂದ ಪರಿಸ್ಥಿತಿ ಈ ಹಂತಕ್ಕೆ ತಲುಪಿದ್ದು, ಅದರ ಸಂಪೂರ್ಣ ಹೊಣೆ ಅವರ ಮೇಲಿದೆ ಎಂದು ಅಮೀನ್ ರೆಡ್ಡಿ ಆರೋಪಿಸಿದರು.
ಸಂಘದಲ್ಲಿ ಬಡವರು, ನಿವೃತ್ತ ನೌಕರರು, ಸಣ್ಣ ವ್ಯಾಪಾರಿಗಳು ಸೇರಿದಂತೆ ವಿವಿಧ ವರ್ಗದ ಜನರು ತಮ್ಮ ಜೀವನದ ಉಳಿತಾಯವನ್ನು ಠೇವಣಿ ಇಟ್ಟಿದ್ದಾರೆ. ಇಂದು ಅವರು ಹಣ ಸಿಗದೆ ಸಂಕಷ್ಟದಲ್ಲಿದ್ದಾರೆ. ಇನ್ನೂ ಕಾಲ ಮೀರಿಲ್ಲ. ಶಾಸಕರು ಮಧ್ಯಸ್ಥಿಕೆ ವಹಿಸಿ ಬಾಕಿ ಹಣವನ್ನು ವಸೂಲಿ ಮಾಡಿಸಿ ಠೇವಣಿದಾರರಿಗೆ ಹಿಂತಿರುಗಿಸಿದರೆ ಮಾತೋಶ್ರೀ ಹೇಮರೆಡ್ಡಿ ಮಲ್ಲಮ್ಮ ಅವರ ಹೆಸರಿಗೆ ಗೌರವ ಉಳಿಯುತ್ತದೆ. ಇಲ್ಲವಾದರೆ ಮುಂದಿನ ದಿನಗಳಲ್ಲಿ ಶಹಾಪುರದಲ್ಲಿ ಬೀದಿಗಿಳಿದು ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಬಿಜೆಪಿ ಜಿಲ್ಲಾಧ್ಯಕ್ಷ ಬಸವರಾಜಪ್ಪ ವಿಭೂತಿಹಳ್ಳಿ, ತಮ್ಮ ಮಾಹಿತಿಯ ಪ್ರಕಾರ ಬಸನಗೌಡ ಮಾಲಿಪಾಟೀಲ್ ಅವರು ಸುಮಾರು ?40 ಲಕ್ಷ ಸಾಲ ಪಡೆದಿದ್ದರು. ನಂತರ ನಡೆದ ರಾಜಿ ಪಂಚಾಯಿತಿಯಲ್ಲಿ ಅವರ ಮೇಲೆ ಸುಮಾರು ?1.50 ಕೋಟಿ ಸಾಲದ ಹೊಣೆ ಹೊರಿಸಲಾಗಿತ್ತು. ಅದರಂತೆ ಅವರು ತಮ್ಮ 21 ಎಕರೆ ಜಮೀನು ಮಾರಾಟ ಮಾಡಿ ?1.50 ಕೋಟಿ ಬ್ಯಾಂಕ್‍ಗೆ ಪಾವತಿಸಿದ್ದರು. ಆದರೆ ಉಳಿದ ಸಾಲಗಾರರು ತಮ್ಮ ಬಾಕಿಯನ್ನು ತೀರಿಸಿಲ್ಲ ಎಂದು ಆರೋಪಿಸಿದರು.
ಇದೇ ವೇಳೆ ಠೇವಣಿದಾರರು ನಿರಂತರವಾಗಿ ಹಣಕ್ಕಾಗಿ ಬಸನಗೌಡರನ್ನು ಒತ್ತಾಯಿಸುತ್ತಿದ್ದರು. ಕೆಲವರು ಅವರ ಮನೆಗೆ ತೆರಳಿ ಜಗಳ ಹಾಗೂ ಒತ್ತಡ ತಂದಿದ್ದರು. ಇದರಿಂದ ಮಾನಸಿಕವಾಗಿ ನೊಂದ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆಗೂ ಮುನ್ನ ಅವರು ಮಾಡಿರುವ ವಿಡಿಯೋ ಕೂಡ ಪ್ರಮುಖ ಸಾಕ್ಷಿಯಾಗಿದೆ ಎಂದು ಹೇಳಿದರು.
ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ರಾಜಶೇಖರ ಗೂಗಲ್ ಮಾತನಾಡಿ, ಸಹಕಾರ ಸಂಘದ ಅವ್ಯವಹಾರದ ಕುರಿತು ಕಳೆದ ಏಪ್ರಿಲ್ 2ರಂದು ದೂರು ಸಲ್ಲಿಸಿದ್ದರೂ ಅಧಿಕಾರಿಗಳು ಯಾವುದೇ ಸೂಕ್ತ ಕ್ರಮ ಕೈಗೊಳ್ಳದ ಪರಿಣಾಮ ಪರಿಸ್ಥಿತಿ ಗಂಭೀರ ಹಂತ ತಲುಪಿದೆ ಎಂದು ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಪರಶುರಾಮ ಕುರಕುಂದಾ, ಮುಖಂಡರಾದ ಗುರು ಕಾಮಾ, ತಿರುಪತಿ, ಬಸನಗೌಡ ಆರಣಗೇರಾ, ತಿರುಪತಿ ಹತ್ತಿಕಟಗಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.





























