
ವಿಜಯಪುರ, ಮೇ. 15:ಭಾರೀ ಗಾಳಿ ಸಹಿತ ಮಳೆಗೆ ಮನೆಯ ಮೇಲ್ಚಾವಣೆ ಕುಸಿದು ಒಂದೇ ಕುಟುಂಬದ ನಾಲ್ವರು ಜೀವಂತ ಸಮಾಧಿಯಾಗಿರುವ ದುರಂತ ಜಿಲ್ಲೆಯ ಆಲಮೇಲ ತಾಲೂಕಿನ ಮೋರಟಗಿಯಲ್ಲಿ ಗುರುವಾರ ತಡರಾತ್ರಿ ಸಂಭವಿಸಿದೆ.
ಈ ದುರಂತದಲ್ಲಿ ಪತಿ, ಪತ್ನಿ ಹಾಗೂ ಇಬ್ಬರು ಮಕ್ಕಳು ಮೃತಪಟ್ಟಿದ್ದಾರೆ.
ಮೋರಟಗಿ ಗ್ರಾಮದ ಗುರುನಾಥ ಬಡಿಗೇರ (35), ಜ್ಯೋತಿ ಬಡಿಗೇರ (28), ಕಾಳಮ್ಮ ಬಡಿಗೇರ (13), ಕೀರ್ತಿ ಬಡಿಗೇರ (9) ಮೃತಪಟ್ಟ ನತದೃಷ್ಟರು.
ತಮ್ಮ ಮನೆಯನ್ನು ದುರಸ್ತಿ ಮಾಡುವ ಕಾರಣ ಹಳೆಯ ಮನೆಯಲ್ಲಿ ಈ ಕುಟುಂಬ ಬಾಡಿಗೆಯಿಂದ ವಾಸವಾಗಿತ್ತು.
ನಿನ್ನೆ ರಾತ್ರಿ ಭಾರೀ ಗಾಳಿ ಸಹಿತ ಸುರಿದ ಮಳೆಗೆ ಹಳೆಯ ಮನೆ ಇದ್ದಕ್ಕಿದ್ದಂತೆ ಕುಸಿದು ಬಿದ್ದಿದೆ. ಆಗ ಮನೆಯಲ್ಲಿದ್ದ ನಾಲ್ವರು ಕಲ್ಲು, ಮಣ್ಣಿನ ಅಡಿಯಲ್ಲಿ ಸಿಲುಕಿ ಮೃತಪಟ್ಟಿದ್ದಾರೆ.
ಸುದ್ದಿ ತಿಳಿದ ತಕ್ಷಣ ಸ್ಥಳಕ್ಕೆ ಸಿಂದಗಿ ಪೆÇಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಪೆÇಲೀಸರು ಹಾಗೂ ಅಗ್ನಿಶಾಮಕ ದಳ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ನಾಲ್ವರ ಶವ ಹೊರ ತೆಗೆಯಲು ಕ್ರಿಪ್ರ ಕಾರ್ಯಾಚರಣೆ ಕೈಗೊಂಡರು. ಬಹಳ ಹೊತ್ತಿನವರೆಗೆ ಕಾರ್ಯಾಚರಣೆ ನಂತರ ಕಲ್ಲು ಮಣ್ಣಿನ ಅಡಿಯಲ್ಲಿ ಸಿಲುಕಿದ ನಾಲ್ವರ ಶವಗಳನ್ನು ಹೊರ ತೆಗೆಯಲಾಯಿತು.
ಮೋರಟಗಿ ಗ್ರಾಮದ ಸ್ಥಳದಲ್ಲಿ ಕುಟುಂಬಸ್ಥರ ಹಾಗೂ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತ್ತು. ಗ್ರಾಮಸ್ಥರ ಕಣ್ಣಲ್ಲಿ ಕಣ್ಣೀರ ಕೋಡಿ ಹರಿಯಿತು. ಇಡೀ ಗ್ರಾಮ ದುಃಖದ ಮಡುವಿನಲ್ಲಿ ಮುಳುಗಿತ್ತು.
ಸಿಂದಗಿ ಪೆÇಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಪವಾಡ ಸದೃಶ ರೀತಿಯಲ್ಲಿ ಬದುಕುಳಿದ ಎರಡು ಜೀವ: ತಲಾ 5 ಲಕ್ಷ ಪರಿಹಾರ ಘೋಷಿಸಿದ ಸಚಿವ ಎಂ ಬಿ ಪಾಟೀಲ್
ಆಲಮೇಲ ತಾಲೂಕಿನ ಮೋರಟಗಿ ಗ್ರಾಮದಲ್ಲಿ ಭಾರಿ ಗಾಳಿ ಸಹಿತ ಮಳೆಯಿಂದಾಗಿ ಮೇಲ್ಚಾವಣೆ ಕುಸಿದು ಒಂದೇ ಕುಟುಂಬದ ನಾಲ್ವರು ಮೃತಪಟ್ಟ ಪ್ರಕರಣದಲ್ಲಿ ಇಬ್ಬರು ಪವಾಡ ಸದೃಶ ರೀತಿಯಲ್ಲಿ ಬದುಕುಳಿದಿರುವ ಅಂಶ ಬೆಳಕಿಗೆ ಬಂದಿದೆ.
ಭಾರೀ ಗಾಳಿ ಸಹಿತ ಮಳೆ, ಮನೆಯ ಮೇಲ್ಚಾವಣಿ ಕುಸಿದು ದಂಪತಿ ಹಾಗೂ ಇಬ್ಬರು ಮಕ್ಕಳ ಜೀವಂತ ಸಮಾಧಿಯಾಗಿದ್ದಾರೆ. ಆದರೆ ಮನೆ ಹೊರಗಡೆ ಕೂದಲು ಎಳೆಯಷ್ಟು ದೂರದಲ್ಲಿ ಮಲಗಿದ್ದ ಗುರುನಾಥ ಬಡಿಗೇರ ಅವರ ಇನ್ನೋರ್ವ ಪುತ್ರ ಹಾಗೂ ಗುರುನಾಥ ಅವರ ತಾಯಿ ಪವಾಡ ಸದೃಶ ರೀತಿಯಲ್ಲಿ ಜೀವ ಉಳಿಸಿಕೊಂಡಿದ್ದಾರೆ.
ತಂದೆ- ತಾಯಿ ಸಹೋದರಿಯರಿಬ್ಬರನ್ನು ಕಳೆದುಕೊಂಡು ಪುಟ್ಟ ಬಾಲಕ ಈಗ ಅನಾಥವಾಗಿದ್ದಾನೆ.
ಕಲ್ಲು ಮಣ್ಣಿನ ಅಡಿಯಲ್ಲಿ ಸಿಲುಕಿದ್ದ ನಾಲ್ವರ ಶವಗಳನ್ನು ಅಗ್ನಿಶಾಮಕ ಸಿಬ್ಬಂದಿ ಹೊರ ತಗೆದಿದ್ದಾರೆ.
ಘಟನಾ ಸ್ಥಳಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಘಟನೆ ಕುರಿತು ವಿಷಾದ ವ್ಯಕ್ತಪಡಿಸಿದ ಜಿಲ್ಲಾ ಉಸ್ತುವಾರಿ ಸಚಿವ ಪಾಟೀಲ,
ಮಳೆಯಿಂದ ಮನೆ ಮೇಲ್ಚಾವಣಿ ಕುಸಿದು ನಡೆದ ಘಟನೆ ದುರಂತವಾಗಿದೆ.
ಮೃತರ ಕುಟುಂಬಕ್ಕೆ ದೈರ್ಯ ತುಂಬುವ ಕೆಲಸ ಮಾಡಲಾಗುತ್ತದೆ. ಸರ್ಕಾರದಿಂದ ಮೃತರಿಗೆ ತಲಾ ಐದು ಲಕ್ಷ ರೂಪಾಯಿ ಪರಿಹಾರ ನೀಡಲಾಗುತ್ತದೆ. ವೈಯುಕ್ತಿಕವಾಗಿಯೂ ನಾನೂ ಸಹಾಯ ಮಾಡುವೆ. ಇಂಥ ಘಟನೆಗಳು ಜರುಗಬಾರದು. ಹಳೆಯ ಮನೆಗಳಿರುವವರು ಜಾಗೃತೆ ವಹಿಸಬೇಕೆಂದು ಮನವಿ ಮಾಡಿದರು.























