
ಬೀದರ, ಏ.೨೯: ಮಾಳೆಗಾಂವ ಹಾಗೂ ಸುತ್ತಲಿನ ಗ್ರಾಮಗಳ ಜನರಿಗೆ ಅನುಕೂಲವಾಗುವ ದೃಷ್ಟಿಯಿಂದ ಮಾಳೆಗಾಂವನಲ್ಲಿ ೫ ಕೋಟಿ ರೂ. ವೆಚ್ಚದಲ್ಲಿ ಆಸ್ಪತ್ರೆ ನಿರ್ಮಿಸಲಾಗುವುದು ಎಂದು ಪೌರಾಡಳಿತ ಹಾಗೂ ಹಜ್ ಸಚಿವರಾದ ರಹೀಂ ಖಾನ್ ತಿಳಿಸಿದರು.
ಅವರು ಇಂದು ಬೀದರ ತಾಲ್ಲೂಕಿನ ಮಾಳೆಗಾಂವನಲ್ಲಿ ಜರುಗಿದ ಜನಸ್ಪಂದನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಬಹುದಿನಗಳಿಂದ ಮಾಳೆಗಾಂವನಲ್ಲಿ ಆಸ್ಪತ್ರೆಯ ಬೇಡಿಕೆ ಇತ್ತು, ಗ್ರಾಮದಲ್ಲಿ ಈಗಾಗಲೇ ಆಸ್ಪತ್ರೆಗೆ ಭೂಮಿ ಮಂಜೂರಾಗಿದ್ದು, ೫ ಕೋಟಿ ರೂ. ಅನುದಾನವು ಸಹ ಬಿಡುಗಡೆಯಾಗಿದೆ. ೨ ತಿಂಗಳಲ್ಲಿ ಕಾಮಗಾರಿ ಆರಂಭಿಸಲಾಗುತ್ತದೆ ಎಂದು ಸಚಿವ ರಹೀಂ ಖಾನ್ ತಿಳಿಸಿದರು.
ಸರಕಾರವು ಜನರ ಸಮಸ್ಯೆಗಳನ್ನು ಆಲಿಸಿ ಇತ್ಯರ್ಥಪಡಿಸಲು ಜಿಲ್ಲಾಡಳಿತವೇ ಗ್ರಾಮಸ್ಥರ ಬಳಿ ತೆರಳುತ್ತಿದೆ, ಜನಸಾಮಾನ್ಯರ ಅಹವಾಲುಗಳನ್ನು ಸ್ಥಳದಲ್ಲೇ ಇತ್ಯರ್ಥಪಡಿಸಲಾಗುವುದೆಂದು ಅವರು ತಿಳಿಸಿದರು.
ಚಿಲ್ಲರ್ಗಿ ಸುತ್ತಲಿನ ಹಲವಾರು ಗ್ರಾಮಗಳ ರಸ್ತೆ ಹಾಗೂ ಸೇತುವೆ ಕಾಮಗಾರಿ ಆರಂಭಿಸಲಾಗಿದೆ. ವಿವಿಧ ಗ್ರಾಮಗಳ ರಸ್ತೆ ನಿರ್ಮಾಣಕ್ಕೆ ೧೬ ಕೋಟಿ ರೂ. ಬಿಡುಗಡೆ ಮಾಡಲಾಗಿದೆಯೆಂದು ಸಚಿವರು ತಿಳಿಸಿದರು.
ನಮ್ಮ ಹೊಲ ನಮ್ಮ ದಾರಿ ಯೋಜನೆಯಡಿ ಸಾಕಷ್ಟು ರೈತರು ತಮ್ಮ ಹೊಲಗಳಿಗೆ ದಾರಿ ಮಾಡಿಕೊಡುವಂತೆ ಮನವಿ ಸಲ್ಲಿಸಿದ್ದಾರೆ. ಈ ಎಲ್ಲ ಹೊಲಗಳನ್ನು ಪರಿಶೀಲಿಸಿ ದಾರಿ ಮಾಡಿಕೊಡಲಾಗುವುದೆಂದರು.
ಬೀದರ ನಗರ ಅಭಿವೃದ್ಧಿಗೆ ೫೦೦ ಕೋಟಿ ರೂ. ಅನುದಾನ ತರಲಾಗಿದೆ. ನಗರ ಸಭೆಯನ್ನು ಮಹಾನಗರ ಪಾಲಿಕೆಯನ್ನಾಗಿ ಮಾಡಿ ಈಗಾಗಲೇ ೨೦೦ ಕೋಟಿ ರೂ. ಅನದಾನ ನೀಡಲಾಗಿದೆ. ೫೦ ಕೋಟಿ ರೂ. ವೆಚ್ಚಲದಲಿ ಕ್ಯಾನ್ಸರ್ ಆಸ್ಪತ್ರೆ ನಿರ್ಮಿಸಲಾಗುವುದು. ೪೦ ಕೋಟಿ ರೂ. ವೆಚ್ಚದಲ್ಲಿ ಮಕ್ಕಳ ಆಸ್ಪತ್ರೆ ನಿರ್ಮಿಸಲಾಗುವುದೆಂದರು.
ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಜನಸ್ಪಂದನಲ್ಲಿ ಸ್ವೀಕರಿಸಲಾದ ಎಲ್ಲ ಅರ್ಜಿಗಳನ್ನು ಪರಿಶೀಲಿಸಿ ಇತ್ಯರ್ಥಪಡಿಸಲಾಗುವುದು. ರಸ್ತೆ, ಚರಂಡಿ, ಹೊಲಕ್ಕೆ ದಾರಿ, ನೀರಿನ ಸಮಸ್ಯೆ, ನೀರಿನ ಟ್ಯಾಂಕ್ ನಿರ್ಮಾಣ ಸೇರಿದಂತೆ ಹಲವು ಅರ್ಜಿಗಳನ್ನು ಸ್ವೀಕೃತವಾಗಿವೆ ಎಂದರು.
ಗ್ರಾಮ ಮಟ್ಟದ ಅಧಿಕಾರಿಗಳು ಸ್ಥಳೀಯ ಸಮಸ್ಯೆಗಳನ್ನು ತಮ್ಮ ಹಂತದಲ್ಲಿಯೇ ಇತ್ಯರ್ಥಗೊಳಿಸಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಗಿರೀಶ ಬದೋಲೆ, ಜಿಲ್ಲಾ ಪಂಚಾಯತ ಉಪ ಕಾರ್ಯದರ್ಶಿ ಶರಣಬಸಪ್ಪಾ ಕೋಟೆಪ್ಪಗೋಳ, ಬೀದರ ಉಪ ಪೊಲೀಸ್ ವರಿಷ್ಠಾಧಿಕಾರಿ ಚಂದ್ರಕಾAತ ಪೂಜಾರಿ, ಸಹಾಯಕ ಆಯುಕ್ತರಾದ ಮಹಮ್ಮದ ಶಕೀಲ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

























