Home ಜಿಲ್ಲೆ ಭರ್ತಿಯಾಗದ ಹತ್ತಿಕುಣಿ ಜಲಾಶಯ; ರೈತರಲ್ಲಿ ಆತಂಕ

ಭರ್ತಿಯಾಗದ ಹತ್ತಿಕುಣಿ ಜಲಾಶಯ; ರೈತರಲ್ಲಿ ಆತಂಕ

ಯಾದಗಿರಿ: ಕಲ್ಯಾಣ ಕರ್ನಾಟಕ ಭಾಗದಲ್ಲಿ ಈ ಬಾರಿ ಮುಂಗಾರು ಮಳೆ ನಿರೀಕ್ಷಿತ ಪ್ರಮಾಣದಲ್ಲಿ ಸುರಿಯದ ಪರಿಣಾಮ ಬಹುತೇಕ ಕೆರೆ-ಕಟ್ಟೆಗಳು ನೀರಿಲ್ಲದೆ ಸೊರಗಿವೆ. ತಾಲ್ಲೂಕಿನ ರೈತರ ಜೀವನಾಡಿಯಾಗಿರುವ ಹತ್ತಿಕುಣಿ ಜಲಾಶಯವೂ ಇನ್ನೂ ಭರ್ತಿಯಾಗದಿರುವುದು ರೈತರಲ್ಲಿ ಆತಂಕ ಮೂಡಿಸಿದೆ.

ಸಕಾಲಕ್ಕೆ ಮಳೆ ಬಾರದ ಹಿನ್ನೆಲೆಯಲ್ಲಿ ಹೆಸರು, ತೊಗರಿ, ಹತ್ತಿ, ಸಜ್ಜೆ ಸೇರಿದಂತೆ ವಿವಿಧ ಮುಂಗಾರು ಬೆಳೆಗಳು ಸರಿಯಾಗಿ ಬೆಳವಣಿಗೆಯಾಗದೆ ರೈತರು ನಷ್ಟ ಅನುಭವಿಸುವಂತಾಗಿದೆ. ಹತ್ತಿಕುಣಿ ಜಲಾಶಯದ ವ್ಯಾಪ್ತಿಗೆ ಬರುವ ಹತ್ತಿಕುಣಿ, ಯಡ್ಡಳ್ಳಿ, ಕಟಗಿ ಶಹಾಪುರ, ಹೊನಗೇರಾ, ಬಂದಳ್ಳಿ ಹಾಗೂ ದಸರಾಬಾದ್ ಗ್ರಾಮಗಳ ಸುಮಾರು 5,400ಕ್ಕೂ ಹೆಚ್ಚು ಎಕರೆ ಜಮೀನು ನೀರಾವರಿ ಪ್ರದೇಶಕ್ಕೆ ಒಳಪಡುತ್ತದೆ.

ನಿಸರ್ಗದ ಮಳೆಯನ್ನೇ ಅವಲಂಬಿಸಿರುವ ಹತ್ತಿಕುಣಿ ಜಲಾಶಯ ಕಳೆದ ವರ್ಷ ಜೂನ್ ತಿಂಗಳ ಕೊನೆಯ ವಾರದಲ್ಲಿಯೇ ಉತ್ತಮ ಮಳೆಯಿಂದ ಭರ್ತಿಯಾಗಿತ್ತು. ಜಲಾಶಯ ಹಾಗೂ ಸುತ್ತಮುತ್ತಲಿನ ಹಸಿರು ಬೆಟ್ಟಗಳ ನಿಸರ್ಗ ಸೌಂದರ್ಯವನ್ನು ಸವಿಯಲು ಯಾದಗಿರಿ ಜಿಲ್ಲೆ ಸೇರಿದಂತೆ ಹೊರ ಜಿಲ್ಲೆಗಳಿಂದಲೂ ಸಾವಿರಾರು ಜನರು ಹಾಗೂ ವಿದ್ಯಾರ್ಥಿಗಳು ಭೇಟಿ ನೀಡಿದ್ದರು.

ಆದರೆ ಈ ವರ್ಷ ಇದುವರೆಗೆ ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗಿಲ್ಲ. ಜಲಾಶಯಕ್ಕೆ ಕೇವಲ 5 ಅಡಿ ನೀರು ಹರಿದು ಬಂದಿದ್ದು, ಕಳೆದ 20 ದಿನಗಳಿಂದ ಮಳೆಯಿಲ್ಲದೆ ಮಳೆಗಾಲದಲ್ಲೇ ಬೇಸಿಗೆಯ ವಾತಾವರಣ ನಿರ್ಮಾಣವಾಗಿದೆ. ಮಳೆಗಾಗಿ ರೈತರು ವಿವಿಧ ದೇವಸ್ಥಾನಗಳಲ್ಲಿ ಪೂಜೆ, ಭಜನೆ ಸೇರಿದಂತೆ ಹಲವು ರೀತಿಯಲ್ಲಿ ಪ್ರಾರ್ಥನೆ ಸಲ್ಲಿಸುತ್ತಿದ್ದರೂ ವರುಣ ಕೃಪೆ ತೋರದಿರುವುದು ರೈತರ ಆತಂಕಕ್ಕೆ ಕಾರಣವಾಗಿದೆ.

ಈ ವರ್ಷ ಜಲಾಶಯ ಭರ್ತಿಯಾಗುವುದೇ ಎಂಬ ಅನುಮಾನ ರೈತರನ್ನು ಕಾಡುತ್ತಿದೆ. ಜಲಾಶಯ ಭರ್ತಿಯಾಗದಿದ್ದರೆ ಮುಂದಿನ ದಿನಗಳಲ್ಲಿ ನೀರಾವರಿ ಹಾಗೂ ಕೃಷಿ ಚಟುವಟಿಕೆಗಳ ಮೇಲೆ ಗಂಭೀರ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ರೈತರು ಆತಂಕ ವ್ಯಕ್ತಪಡಿಸಿದ್ದಾರೆ.

ಜಲಾಶಯದ ಕಾಲುವೆಗಳ ನವೀಕರಣಕ್ಕಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಈಗಾಗಲೇ ?68 ಕೋಟಿ ಅನುದಾನ ಮಂಜೂರಾಗಿದೆ ಎಂದು ಹೇಳಲಾಗಿದ್ದು, ಕಾಮಗಾರಿ ಇನ್ನೂ ಆರಂಭವಾಗಿಲ್ಲ. ಕಾಮಗಾರಿ ಶೀಘ್ರ ಆರಂಭಿಸಿ ಪೂರ್ಣಗೊಳಿಸಿದರೆ ಜಲಾಶಯದ ಕೊನೆಯ ಭಾಗದಲ್ಲಿರುವ ರೈತರ ಜಮೀನುಗಳಿಗೂ ನೀರು ತಲುಪಲು ಅನುಕೂಲವಾಗಲಿದೆ ಎಂದು ರೈತರು ತಿಳಿಸಿದ್ದಾರೆ.

ಕೇವಲ ಮಳೆ ನೀರನ್ನು ಅವಲಂಬಿಸಿರುವ ಹತ್ತಿಕುಣಿ ಜಲಾಶಯಕ್ಕೆ ಭೀಮಾ ನದಿಯಿಂದ ನೀರು ತುಂಬಿಸುವ ಯೋಜನೆ ಜಾರಿಗೊಳಿಸುವುದು ಶಾಶ್ವತ ಪರಿಹಾರ ಎಂದು ರೈತರು ಆಗ್ರಹಿಸಿದ್ದಾರೆ.

ಈಗಾಗಲೇ ಸರ್ಕಾರ ತಾಲ್ಲೂಕಿನ 82 ಕೆರೆಗಳಿಗೆ ಭೀಮಾ ನದಿಯಿಂದ ನೀರು ತುಂಬಿಸುವ ಯೋಜನೆ ಕೈಗೊಂಡಿದ್ದು, ಇದೇ ಮಾದರಿಯಲ್ಲಿ ಹತ್ತಿಕುಣಿ ಜಲಾಶಯಕ್ಕೂ ಭೀಮಾ ನದಿ ನೀರು ಹರಿಸುವ ಯೋಜನೆ ಜಾರಿಗೊಳಿಸಬೇಕು. ಇದರಿಂದ ಬರಗಾಲದ ಸಂದರ್ಭದಲ್ಲೂ ರೈತರಿಗೆ ನೀರಿನ ಭದ್ರತೆ ದೊರೆಯಲಿದೆ ಎಂದು ರೈತರು ಒತ್ತಾಯಿಸಿದ್ದಾರೆ.