Home ಜಿಲ್ಲೆ ಗ್ಯಾರಂಟಿ ಯೋಜನೆಗಳಿಂದ ಅಭಿವೃದ್ಧಿಗೆ ಹಿನ್ನಡೆ; ಅನುದಾನ ಕೊರತೆಯಿಂದ ಗ್ರಾಮೀಣ ಕಾಮಗಾರಿಗಳಿಗೆ ಅಡಚಣೆ

ಗ್ಯಾರಂಟಿ ಯೋಜನೆಗಳಿಂದ ಅಭಿವೃದ್ಧಿಗೆ ಹಿನ್ನಡೆ; ಅನುದಾನ ಕೊರತೆಯಿಂದ ಗ್ರಾಮೀಣ ಕಾಮಗಾರಿಗಳಿಗೆ ಅಡಚಣೆ

ಯಾದಗಿರಿ: ಜು.3:ಗುರುಮಠಕಲ್ ವಿಧಾನಸಭಾ ಕ್ಷೇತ್ರದ ಗೋಪಾಳಪುರ, ಚಿನ್ನಾಕಾರ, ಬೆಟ್ಟದಳ್ಳಿ ತಾಂಡಾ ಹಾಗೂ ಧರ್ಮಾಪುರ ತಾಂಡಾಗಳಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಶರಣಗೌಡ ಕಂದಕೂರ ಶಂಕುಸ್ಥಾಪನೆ ನೆರವೇರಿಸಿ, ಸರ್ಕಾರದಿಂದ ಸಮರ್ಪಕ ಅನುದಾನ ಬಿಡುಗಡೆಯಾಗದ ಕಾರಣ ಗ್ರಾಮೀಣ ಅಭಿವೃದ್ಧಿ ಕಾಮಗಾರಿಗಳಿಗೆ ತೀವ್ರ ಹಿನ್ನಡೆಯಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಗೋಪಾಳಪುರದಲ್ಲಿ ಕೆಕೆಆರ್‍ಡಿಬಿ ಅನುದಾನದಡಿ ಶಾಲಾ ತರಗತಿ ಕೊಠಡಿ ನಿರ್ಮಾಣ, ಚಿನ್ನಾಕಾರದಲ್ಲಿ ಅಂಗನವಾಡಿ ಕಟ್ಟಡ ನಿರ್ಮಾಣ, ಬೆಟ್ಟದಳ್ಳಿ ತಾಂಡಾದಲ್ಲಿ ?15 ಲಕ್ಷ ವೆಚ್ಚದ ಅಂಗನವಾಡಿ ಕಟ್ಟಡ ಹಾಗೂ ಧರ್ಮಾಪುರ ತಾಂಡಾದಲ್ಲಿ ?40 ಲಕ್ಷ ವೆಚ್ಚದಲ್ಲಿ ಸರ್ಕಾರಿ ಶಾಲೆಗೆ ಎರಡು ಕೊಠಡಿಗಳ ನಿರ್ಮಾಣ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ಗ್ಯಾರಂಟಿ ಯೋಜನೆಗಳ ನಡುವೆ ಅಭಿವೃದ್ಧಿ ಕಾಮಗಾರಿಗಳಿಗೆ ಅಗತ್ಯ ಅನುದಾನ ಬಿಡುಗಡೆಯಾಗುತ್ತಿಲ್ಲ ಎಂದು ಹೇಳಿದರು.

ಬೆಟ್ಟದಳ್ಳಿಯಲ್ಲಿ ಗ್ರಾಮಸ್ಥರನ್ನುದ್ದೇಶಿಸಿ ಮಾತನಾಡಿದ ಶಾಸಕ ಕಂದಕೂರ, “ನೀವು ಹಲವು ಚುನಾವಣೆಗಳಲ್ಲಿ ನನಗೆ ಬೆಂಬಲ ನೀಡಿದ್ದೀರಿ. ಕಳೆದ ಚುನಾವಣೆಯಲ್ಲಿ ಕೆಲವರು ಅಸಮಾಧಾನ ವ್ಯಕ್ತಪಡಿಸಿದ್ದರೂ ಕ್ಷೇತ್ರದ ಅಭಿವೃದ್ಧಿಗಾಗಿ ನನ್ನ ಕೆಲಸ ನಿಂತಿಲ್ಲ. ಅಭಿವೃದ್ಧಿಯೇ ನನ್ನ ಪ್ರಮುಖ ಗುರಿ” ಎಂದು ಹೇಳಿದರು.

ಗೋಪಾಳಪುರಕ್ಕೆ ವಿಶೇಷ ಅನುದಾನದ ಭರವಸೆ

ಗೋಪಾಳಪುರದಲ್ಲಿ ಸಾರ್ವಜನಿಕರ ಅಹವಾಲು ಆಲಿಸಿದ ಶಾಸಕ, ಮುಖ್ಯಮಂತ್ರಿ ವಿಶೇಷ ಅನುದಾನದಡಿ ಗ್ರಾಮಕ್ಕೆ ?10 ಲಕ್ಷ ಬಿಡುಗಡೆ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿರುವುದಾಗಿ ತಿಳಿಸಿದರು. ನವಾಬುರ್ಜ್-ಗೋಪಾಳಪುರ ರಸ್ತೆ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗುವುದು ಎಂದ ಅವರು, ದೇವಸ್ಥಾನಗಳ ಜೀರ್ಣೋದ್ಧಾರಕ್ಕೆ ಟ್ರಸ್ಟ್ ರಚನೆಯಾದರೆ ಮಾತ್ರ ಸರ್ಕಾರದಿಂದ ಅನುದಾನ ದೊರೆಯಲಿದೆ ಎಂದು ವಿವರಿಸಿದರು.

ಕಲ್ಯಾಣ ಕರ್ನಾಟಕ ಭಾಗದಲ್ಲಿ 5 ಸಾವಿರ ಶಿಕ್ಷಕರ ನೇಮಕಾತಿ ನಡೆದರೆ ಕ್ಷೇತ್ರದಲ್ಲಿರುವ ಶಿಕ್ಷಕರ ಕೊರತೆ ನಿವಾರಣೆಯಾಗಲಿದೆ ಎಂದ ಅವರು, 2015-16ರಲ್ಲಿ ಕೆರೆಗಳ ಹೂಳೆತ್ತುವ ಕಾಮಗಾರಿಗೆ ಬಿಡುಗಡೆಯಾಗಿದ್ದ ಸುಮಾರು ?5 ಕೋಟಿ ದುರುಪಯೋಗಗೊಂಡ ಕಾರಣ ನಂತರ ಸರ್ಕಾರದಿಂದ ಅನುದಾನ ಬಿಡುಗಡೆಯಾಗಿಲ್ಲ ಎಂದು ಆರೋಪಿಸಿದರು.

ಚಿನ್ನಾಕಾರ ಗ್ರಾಮದಲ್ಲಿ ಮಾತನಾಡಿದ ಅವರು, ಗ್ರಾಮದ ಸರ್ಕಾರಿ ಶಾಲಾ ಕಟ್ಟಡವು ಕ್ಷೇತ್ರದಲ್ಲಿಯೇ ಮಾದರಿಯ ಕಟ್ಟಡವಾಗಿದ್ದು, ತಮ್ಮ ತಂದೆ ಶಾಸಕ ನಾಗನಗೌಡ ಅವರ ಅವಧಿಯಲ್ಲಿ ನಿರ್ಮಾಣಗೊಂಡಿದ್ದರೂ ಉದ್ಘಾಟನೆಗೆ ಅವರು ಭಾಗವಹಿಸಲು ಸಾಧ್ಯವಾಗಿರಲಿಲ್ಲ ಎಂದು ಸ್ಮರಿಸಿದರು.

ಗ್ರಾಮದ ದೊಡ್ಡ ಬೆಟ್ಟಕ್ಕೆ ಸಂಪರ್ಕಿಸುವ ರಸ್ತೆ ಕಾಮಗಾರಿಗೆ ಸರ್ಕಾರ ಅನುಮೋದನೆ ನೀಡಿದ್ದು, ಹಿಂದಿನ ಅವಧಿಯಲ್ಲಿ ಮಂಜೂರಾಗಿದ್ದ ?10 ಕೋಟಿಯಲ್ಲಿ ?3 ಕೋಟಿ ಬಿಡುಗಡೆಯಾಗಿದೆ. ಒಂದು-ಎರಡು ವಾರಗಳಲ್ಲಿ ಕಾಮಗಾರಿ ಆರಂಭವಾಗಲಿದೆ ಎಂದರು.

ಕೆಕೆಆರ್‍ಡಿಬಿ ಅನುದಾನದಡಿ ಪರಮೇಶಪಲ್ಲಿವರೆಗೆ ರಸ್ತೆ ನಿರ್ಮಾಣ ಕೈಗೊಳ್ಳಲಾಗುವುದು. ಸಾರ್ವಜನಿಕ ಶೌಚಾಲಯ ನಿರ್ಮಾಣಕ್ಕಿಂತ ವೈಯಕ್ತಿಕ ಶೌಚಾಲಯ ನಿರ್ಮಾಣಕ್ಕೆ ಜನರು ಮುಂದಾಗಬೇಕು ಎಂದು ಸಲಹೆ ನೀಡಿದರು.

ಗ್ರಾಮ ಪಂಚಾಯಿತಿಗಳಲ್ಲಿ ಸಣ್ಣಪುಟ್ಟ ಸಮಸ್ಯೆಗಳನ್ನು ಪಿಡಿಒಗಳು ತ್ವರಿತವಾಗಿ ಬಗೆಹರಿಸಬೇಕು. ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಕೆಕೆಆರ್‍ಡಿಬಿ ಅನುದಾನ ಬಿಡುಗಡೆಯಾದ ನಂತರ ಗ್ರಾಮಸ್ಥರ ಅಗತ್ಯಕ್ಕೆ ಅನುಗುಣವಾಗಿ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಈ ಸಂದರ್ಭದಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು, ಜೆಡಿಎಸ್ ಮುಖಂಡರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

“ಐದು ವರ್ಷಗಳ ಕಾಲ ನಿಮ್ಮ ಸೇವೆ ಮಾಡಲು ಅವಕಾಶ ನೀಡಿದ್ದೀರಿ. ಅದಕ್ಕೂ ಮುನ್ನ ನನ್ನ ತಂದೆ ದಿವಂಗತ ನಾಗನಗೌಡ ಅವರಿಗೆ ಆಶೀರ್ವಾದ ಮಾಡಿದ್ದೀರಿ. ನಿಮ್ಮ ಸೇವಕನಾಗಿ ಕ್ಷೇತ್ರದ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಕೆಲಸ ಮಾಡುವುದು ನನ್ನ ಕರ್ತವ್ಯ. ತಾಂಡಾ ನಿವಾಸಿಗಳು ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಬೇಕು. ಶಿಕ್ಷಣವೇ ಅಭಿವೃದ್ಧಿಯ ದಾರಿ. ನಿಮ್ಮ ಮಕ್ಕಳ ಭವಿಷ್ಯಕ್ಕಾಗಿ ಅಗತ್ಯ ಸೌಲಭ್ಯ ಕಲ್ಪಿಸಲು ನಾನು ಬದ್ಧನಿದ್ದೇನೆ.”
ಶರಣಗೌಡ ಕಂದಕೂರ, ಶಾಸಕ, ಗುರುಮಠಕಲ್.

ಯಪ್ಪಾ… ಹೇಗಾದರೂ ನಮ್ಮ ಪಿಂಚಣಿ ಕೊಡಿಸಿ”

ಗೋಪಾಳಪುರ ಗ್ರಾಮದಲ್ಲಿ ಅಂಗವಿಕಲ ಹಾಗೂ ವೃದ್ಧಾಪ್ಯ ವೇತನ ಹಲವು ತಿಂಗಳಿಂದ ಬಂದಿಲ್ಲ ಎಂದು ಭೀಮವ್ವ ಹಾಗೂ ಲಚಮವ್ವ ಎಂಬ ಮಹಿಳೆಯರು ಶಾಸಕ ಶರಣಗೌಡ ಕಂದಕೂರ ಅವರ ಎದುರು ಕೈಮುಗಿದು ಮನವಿ ಮಾಡಿದರು.

ಈ ಕುರಿತು ಅಧಿಕಾರಿಗಳನ್ನು ಪ್ರಶ್ನಿಸಿದ ಶಾಸಕ, ರಾಜ್ಯದಲ್ಲಿ ಫಲಾನುಭವಿಗಳ ಮಾಹಿತಿಯ ಪರಿಷ್ಕರಣೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಅನೇಕ ಮಂದಿಗೆ ತಾತ್ಕಾಲಿಕವಾಗಿ ಹಣ ಬಿಡುಗಡೆಯಾಗುತ್ತಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದರು. ರಾಜ್ಯದ ಲಕ್ಷಾಂತರ ಫಲಾನುಭವಿಗಳು ಸಮಸ್ಯೆ ಎದುರಿಸುತ್ತಿದ್ದು, ಅಧಿಕಾರಿಗಳು ಗ್ರಾಮ ಮಟ್ಟದಲ್ಲೇ ತಾಂತ್ರಿಕ ಸಮಸ್ಯೆಗಳನ್ನು ತ್ವರಿತವಾಗಿ ಬಗೆಹರಿಸಬೇಕು ಎಂದು ಸೂಚಿಸಿದರು.

ಜನಸಂಖ್ಯೆ ಹೆಚ್ಚಿರುವ ಗ್ರಾಮಗಳಲ್ಲಿ ಒಂದೇ ನ್ಯಾಯಬೆಲೆ ಅಂಗಡಿ ಇರುವುದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಅಗತ್ಯವಿರುವ ಕಡೆ ಹೊಸ ನ್ಯಾಯಬೆಲೆ ಅಂಗಡಿಗಳನ್ನು ಆರಂಭಿಸುವಂತೆ ಸರ್ಕಾರಕ್ಕೆ ಮನವಿ ಮಾಡಲಾಗುವುದು. ಫಲಾನುಭವಿಗಳ ಮಾಹಿತಿಯನ್ನು ಸಂಗ್ರಹಿಸಿ ಸಂಬಂಧಿತ ಸಚಿವರೊಂದಿಗೆ ಚರ್ಚೆ ನಡೆಸಿ ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕ ತಿಳಿಸಿದರು.

“ಸ್ವಾತಂತ್ರ್ಯ ಬಂದು ದಶಕಗಳು ಕಳೆದರೂ ಗ್ರಾಮೀಣ ಜನರು ಇಂದಿಗೂ ಪಡಿತರ, ಶುದ್ಧ ಕುಡಿಯುವ ನೀರು ಹಾಗೂ ಮೂಲಸೌಕರ್ಯಕ್ಕಾಗಿ ಪರದಾಡುತ್ತಿರುವುದು ಬೇಸರದ ಸಂಗತಿ. ಗ್ರಾಮ ಪಂಚಾಯಿತಿಗಳಲ್ಲಿ ಚರಂಡಿ ಸ್ವಚ್ಛಗೊಳಿಸಲು ಸಹ ಅನುದಾನ ಇಲ್ಲದಿರುವುದು ಕಳವಳಕಾರಿ.”

ಗ್ರಾಮಗಳಲ್ಲಿ ಚರಂಡಿ ಸ್ವಚ್ಛಗೊಳಿಸಲು ಪಂಚಾಯಿತಿಗಳ ಬಳಿ ಹಣವಿಲ್ಲ ಎನ್ನುವುದು ಆತಂಕಕಾರಿ ಬೆಳವಣಿಗೆ. ಶಾಲೆ, ಅಂಗನವಾಡಿ, ಆರೋಗ್ಯ ಕೇಂದ್ರಗಳಿಗೆ ಶಾಸಕರ ಅನುದಾನ ನೀಡಬಹುದು. ಆದರೆ ಕುಡಿಯುವ ನೀರು ಹಾಗೂ ಚರಂಡಿ ಸ್ವಚ್ಛತೆಗೆ ಸಹ ಶಾಸಕರ ಅನುದಾನವೇ ಬೇಕಾದರೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ತಮ್ಮ ಜವಾಬ್ದಾರಿ ಅರಿತು ಕೆಲಸ ಮಾಡಬೇಕು. ಅಗತ್ಯವಿದ್ದರೆ ಪತ್ರ ನೀಡಿ, ಶಾಸಕರ ಅನುದಾನದಿಂದಲೇ ನೆರವು ಒದಗಿಸುತ್ತೇನೆ ಎಂದು ಅಧಿಕಾರಿಗಳಿಗೆ ಶಾಸಕ ಕಂದಕೂರ ಸೂಚನೆ ನೀಡಿದರು.