Home ಜಿಲ್ಲೆ ಸೆ.೧೭ರಂದು ಅದ್ಧೂರಿ ವಿಶ್ವಕರ್ಮ ಜಯಂತ್ಯೋತ್ಸವ

ಸೆ.೧೭ರಂದು ಅದ್ಧೂರಿ ವಿಶ್ವಕರ್ಮ ಜಯಂತ್ಯೋತ್ಸವ

ಯಾದಗಿರಿ: ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ನಗರಸಭೆ, ಶ್ರೀ ವಿಶ್ವಕರ್ಮ ಜಯಂತ್ಯೋತ್ಸವ ಸಮಿತಿ ಹಾಗೂ ವಿವಿಧ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ಸೆ.೧೭ರಂದು ಮಧ್ಯಾಹ್ನ ೨ ಗಂಟೆಗೆ ನಗರದ ಸರ್ಕಾರಿ ಪದವಿ ಮಹಾವಿದ್ಯಾಲಯದಲ್ಲಿ ಅದ್ಧೂರಿ ವಿಶ್ವಕರ್ಮ ಜಯಂತ್ಯೋತ್ಸವ ಹಮ್ಮಿಕೊಳ್ಳಲಾಗಿದೆ ಎಂದು ಆನೆಗುಂದಿ ಸಂಸ್ಥಾನ ಸರಸ್ವತಿ ಪೀಠಾಧೀಶ ಹಾಗೂ ಯಾದಗಿರಿಯ ವಿಶ್ವಕರ್ಮ ಏಕದಂಡಗಿ ಮಠದ ಶ್ರೀ ರವೀಂದ್ರ ಸ್ವಾಮೀಜಿ ಹೇಳಿದರು.
ಶನಿವಾರ ಜಿಲ್ಲಾ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಯಂತ್ಯೋತ್ಸವಕ್ಕೂ ಮುನ್ನ ವಿಶ್ವಕರ್ಮ ಚೌಕ್‌ನಿಂದ ಸರ್ಕಾರಿ ಪದವಿ ಮಹಾವಿದ್ಯಾಲಯದವರೆಗೆ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಜಯಂತ್ಯೋತ್ಸವದಲ್ಲಿ ಜಿಲ್ಲೆಯ ವಿವಿಧ ಭಾಗಗಳಿಂದ ಸುಮಾರು ಸಾವಿರಕ್ಕೂ ಅಧಿಕ ಜನರು ಭಾಗವಹಿಸುವ ನಿರೀಕ್ಷೆ ಇದೆ ಎಂದು ತಿಳಿಸಿದರು.
ಜಿಲ್ಲಾ ಉಸ್ತುವಾರಿ ಸಚಿವ ಡಾ. ಶರಣಪ್ರಕಾಶ್ ಪಾಟೀಲ್ ಅವರು ಕಾರ್ಯಕ್ರಮ ಉದ್ಘಾಟಿಸುವರು. ಶಾಸಕ ಚೆನ್ನಾರೆಡ್ಡಿ ಪಾಟೀಲ್ ತುನ್ನೂರು ಅಧ್ಯಕ್ಷತೆ ವಹಿಸುವರು. ಆನೆಗುಂದಿ ಸಂಸ್ಥಾನ ಸರಸ್ವತಿ ಪೀಠಾಧೀಶ ಹಾಗೂ ಯಾದಗಿರಿಯ ವಿಶ್ವಕರ್ಮ ಏಕದಂಡಗಿ ಮಠದ ಪರಮಪೂಜ್ಯ ಶ್ರೀ ರವೀಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಹಲವಾರು ಜನಪ್ರತಿನಿಧಿಗಳು ಹಾಗೂ ಗಣ್ಯರು ಭಾಗವಹಿಸಲಿದ್ದಾರೆ ಎಂದು ಹೇಳಿದರು.
ಭಗವಂತನ ದೇವತೆಗಳಿಗೆ ಶಿಲ್ಪಕಲೆ ಸೇರಿದಂತೆ ವಿವಿಧ ಕಲಾಕೃತಿಗಳನ್ನು ನಿರ್ಮಿಸಿದ ವಿಶ್ವಕರ್ಮರ ಕೊಡುಗೆ ಅಪಾರವಾಗಿದೆ. ಪ್ರಕೃತಿಯಲ್ಲಿ ಅಡಗಿರುವ ಕಲೆಯನ್ನು ಶಿಲ್ಪಕಲೆಯ ಮೂಲಕ ಸುಂದರವಾಗಿ ರೂಪಿಸಿದ ವಿಶ್ವಕರ್ಮರ ಪರಂಪರೆ, ಕಲೆ ಹಾಗೂ ಸಾಧನೆಗಳನ್ನು ಸ್ಮರಿಸುವುದೇ ಜಯಂತ್ಯೋತ್ಸವದ ಪ್ರಮುಖ ಉದ್ದೇಶವಾಗಿದೆ ಎಂದು ಶ್ರೀ ರವೀಂದ್ರ ಸ್ವಾಮೀಜಿ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ವಿಶ್ವಕರ್ಮ ಏಕದಂಡಗಿ ಮಠದ ಶ್ರೀ ವಿಶ್ವಾಮೂರ್ತಿ ಸ್ವಾಮೀಜಿ, ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾದ ಯಾದಗಿರಿ ಜಿಲ್ಲಾ ಅಧ್ಯಕ್ಷ ಮಹೇಶ್ ತಳಿಬಿಡಿ, ದೇವಿದ್ರಪ್ಪ ಎಲ್., ಶಿವಣ್ಣ ವಿಶ್ವಕರ್ಮ, ಹನುಮಂತರಾಯ, ಬನಪ್ಪ ಕಾಳೆಬೆಳ್ಳಗುಂದಿ ಹಾಗೂ ಬನಪ್ಪ ವಿಶ್ವಕರ್ಮ ಗೋಡಿಯಾಳ ಉಪಸ್ಥಿತರಿದ್ದರು.