
ಬೆಂಗಳೂರು, ಆಗಸ್ಟ್ ೧೪- ಬೆಂಗಳೂರು ದಕ್ಷಿಣ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಮನೆ ಮನೆ ಕಸ ಸಂಗ್ರಹಣಾ ವ್ಯವಸ್ಥೆಯನ್ನು ಮತ್ತಷ್ಟು ಪಾರದರ್ಶಕ ಹಾಗೂ ಪರಿಣಾಮಕಾರಿಗೊಳಿಸಲು ಕಸ ಸಂಗ್ರಹಿಸುವ ಆಟೋಗಳಿಗೆ ಜಿಪಿಎಸ್ ಟ್ರ್ಯಾಕಿಂಗ್ ಅಳವಡಿಸುವ ಪ್ರಾಯೋಗಿಕ ಯೋಜನೆಗೆ ಚಾಲನೆ ನೀಡಲಾಗಿದೆ.
ಹೆಚ್‌ಎಸ್‌ಆರ್ ಲೇಔಟ್‌ನ ಅಟಲ್ ಬಿಹಾರಿ ವಾಜಪೇಯಿ ಕ್ರೀಡಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಬೆಂಗಳೂರು ದಕ್ಷಿಣ ನಗರ ಪಾಲಿಕೆ ಆಯುಕ್ತ ಕೆ.ಎನ್. ರಮೇಶ್ ಹಾಗೂ ಬೊಮ್ಮನಹಳ್ಳಿ ಶಾಸಕ ಸತೀಶ್ ರೆಡ್ಡಿ ಅವರು ಯೋಜನೆಗೆ ಚಾಲನೆ ನೀಡಿದರು.
ಬೊಮ್ಮನಹಳ್ಳಿ ವಲಯದಲ್ಲಿ ಸುಮಾರು ೨೦೮ ಕಸ ಸಂಗ್ರಹಣಾ ಆಟೋಗಳಿದ್ದು, ಮೊದಲ ಹಂತದಲ್ಲಿ ಹೆಚ್‌ಎಸ್‌ಆರ್ ಲೇಔಟ್‌ನ ೩೬ ಆಟೋಗಳಿಗೆ ಜಿಪಿಎಸ್ ಅಳವಡಿಸಲಾಗಿದೆ. ಪಾಲಿಕೆ, ಃSWಒಐ, ಲೇಸ್ಟ್ ಬಿ ದಿ ಚೇಂಜ್ ಎನ್‌ಜಿಒ ಹಾಗೂ ಇಂಟೆಲ್ ಸಂಸ್ಥೆಯ ಸಹಯೋಗದಲ್ಲಿ ಯೋಜನೆ ಜಾರಿಗೊಳ್ಳುತ್ತಿದೆ.
ಜಿಪಿಎಸ್ ಮೂಲಕ ಆಟೋಗಳ ಸಂಚಾರ, ನಿಗದಿತ ಮಾರ್ಗ, ಸಮಯ ಹಾಗೂ ಪ್ರಸ್ತುತ ಸ್ಥಳ ಸೇರಿದಂತೆ ಕಸ ಸಂಗ್ರಹಣೆಯ ಚಟುವಟಿಕೆಗಳನ್ನು ರಿಯಲ್‌ಟೈಮ್‌ನಲ್ಲಿ ಮಾನಿಟರ್ ಮಾಡಬಹುದಾಗಿದೆ. ಈ ಪೈಲಟ್ ಯೋಜನೆ ಮುಂದಿನ ಎಂಟು ತಿಂಗಳು ನಡೆಯಲಿದ್ದು, ಯಶಸ್ವಿಯಾದರೆ ಪಾಲಿಕೆಯ ಇತರ ಪ್ರದೇಶಗಳಿಗೂ ವಿಸ್ತರಿಸಲು ಉದ್ದೇಶಿಸಲಾಗಿದೆ.
ಇದರ ಜೊತೆಗೆ ‘ಸೇವಕ್’ ತಂತ್ರಜ್ಞಾನ ಬಳಸಿ ಮನೆಗಳಲ್ಲಿ ಸಂಗ್ರಹವಾಗುವ ಕಸದ ತೂಕ ಹಾಗೂ ಕಸ ವಿಂಗಡಣೆಯನ್ನೂ ಮಾನಿಟರ್ ಮಾಡಲಾಗುತ್ತದೆ. ಹಸಿ ಮತ್ತು ಒಣ ಕಸವನ್ನು ಸರಿಯಾಗಿ ವಿಂಗಡಿಸಿ ನೀಡುವ ಮನೆಗಳಿಗೆ ೦ರಿಂದ ೫ ಸ್ಟಾರ್ ರೇಟಿಂಗ್ ನೀಡಲಾಗುತ್ತದೆ. ಸತತವಾಗಿ ಕಸ ನೀಡದ ಮನೆಗಳನ್ನು ಗುರುತಿಸಿ, ಅಗತ್ಯವಿದ್ದಲ್ಲಿ ದಂಡ ವಿಧಿಸಲು ಮಾರ್ಷಲ್‌ಗಳಿಗೆ ಡೇಟಾ ಒದಗಿಸಲಾಗುತ್ತದೆ.
ಮೂಲದಲ್ಲಿಯೇ ಹಸಿ ಮತ್ತು ಒಣ ಕಸವನ್ನು ವಿಂಗಡಿಸಿ ನೀಡುವುದರಿಂದ ಕಸದ ಸಮಸ್ಯೆಯನ್ನು ಬಹುಮಟ್ಟಿಗೆ ಕಡಿಮೆ ಮಾಡಬಹುದು. ಸಾರ್ವಜನಿಕರು ಎಲ್ಲೆಂದರಲ್ಲಿ ಕಸ ಎಸೆಯುವುದನ್ನು ತಡೆಯುವ ಮೂಲಕ ಸ್ವಚ್ಛ ಹಾಗೂ ಸುಂದರ ನಗರ ನಿರ್ಮಾಣಕ್ಕೆ ಸಹಕರಿಸಬೇಕು ಎಂದು ಆಯುಕ್ತ ಕೆ.ಎನ್. ರಮೇಶ್ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಸತೀಶ್ ರೆಡ್ಡಿ, ಕಸ ಸಂಗ್ರಹಣೆಯಲ್ಲಿ ಪಾರದರ್ಶಕತೆ ತರಲು ಹಾಗೂ ಆರೋಪ-ಪ್ರತ್ಯಾರೋಪಗಳಿಗೆ ಅವಕಾಶವಿಲ್ಲದಂತೆ ಮಾಡಲು ತಂತ್ರಜ್ಞಾನ ಬಳಕೆ ಅಗತ್ಯ ಎಂದರು. ಸೇವೆಯಿಂದ ನಿವೃತ್ತರಾದ ಅಥವಾ ಮೃತಪಟ್ಟ ಪೌರಕಾರ್ಮಿಕರ ಕಾರಣದಿಂದ ಖಾಲಿಯಾಗಿರುವ ಹುದ್ದೆಗಳನ್ನು ತಕ್ಷಣ ಭರ್ತಿ ಮಾಡುವಂತೆ ಆಯುಕ್ತರಿಗೆ ಮನವಿ ಮಾಡಿದರು.
ಕಾರ್ಯಕ್ರಮದ ಬಳಿಕ ಶಾಸಕ ಸತೀಶ್ ರೆಡ್ಡಿ ಹಾಗೂ ಆಯುಕ್ತ ಕೆ.ಎನ್. ರಮೇಶ್ ಅವರು ಅಟಲ್ ಬಿಹಾರಿ ವಾಜಪೇಯಿ ಕ್ರೀಡಾಂಗಣದ ಅಭಿವೃದ್ಧಿ ಕಾಮಗಾರಿಗಳನ್ನು ಪರಿಶೀಲಿಸಿದರು. ಹೊರಾಂಗಣ ಕ್ರೀಡಾಂಗಣದಲ್ಲಿ ಕಾನೂನುಬಾಹಿರ ಚಟುವಟಿಕೆಗಳಿಗೆ ಕಡಿವಾಣ ಹಾಕಲು ಸೂಕ್ತ ಭದ್ರತಾ ವ್ಯವಸ್ಥೆ ಕಲ್ಪಿಸುವಂತೆ ಅಧಿಕಾರಿಗಳಿಗೆ ಆಯುಕ್ತರು ಸೂಚಿಸಿದರು.
ಬೊಮ್ಮನಹಳ್ಳಿ ವಲಯದ ಜಂಟಿ ಆಯುಕ್ತ ಸತೀಶ್ ಬಾಬು, ಇಂಟೆಲ್ ಸಂಸ್ಥೆಯ ಹಿರಿಯ ನಿರ್ದೇಶಕ ಮಾನಸ್, ಃSWಒಐ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಮಾಮಣಿ ಸೇರಿದಂತೆ ಅಧಿಕಾರಿಗಳು ಉಪಸ್ಥಿತರಿದ್ದರು.
































