
ಬೆಂಗಳೂರು,ಆ.೧೪:ನಗರದ ಫೀಲ್ಡ್ ಮಾರ್ಷಲ್ ಮಾಣೆಕ್ ಶಾ ಪರೇಡ್ ಮೈದಾನದಲ್ಲಿ ಆ.೧೫ರಂದು ನಡೆಯಲಿರುವ ೮೦ನೇ ಸ್ವಾತಂತ್ರ್ಯೋತ್ಸವ ಸಮಾರಂಭಕ್ಕೆ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.
ಕಾರ್ಯಕ್ರಮದ ಭದ್ರತೆಗಾಗಿ ಡಿಸಿಪಿ, ಎಸಿಪಿ, ಪಿಐ, ಪಿಎಸ್‌ಐ ಸೇರಿದಂತೆ ೧,೧೦೦ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದು,ಸಂಚಾರ ವ್ಯವಸ್ಥೆ ಸುಗಮಗೊಳಿಸಲು ಪ್ರತ್ಯೇಕವಾಗಿ ೧,೫೮೩ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.
ಭದ್ರತಾ ವ್ಯವಸ್ಥೆಯ ಭಾಗವಾಗಿ ಮೈದಾನದ ಒಳ ಹಾಗೂ ಹೊರಭಾಗದಲ್ಲಿ ೧೧೦ ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗಿದ್ದು,ಸುತ್ತಮುತ್ತಲಿನ ಪ್ರದೇಶಗಳ ನಿಗಾವಣೆಗೆ ಹೆಚ್ಚುವರಿಯಾಗಿ ೧೦೦ ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ.ಪ್ರವೇಶ ದ್ವಾರಗಳಲ್ಲಿ ೪ ಬ್ಯಾಗೇಜ್ ಸ್ಕ್ಯಾನರ್, ೨೦ ಡಿಎಫ್‌ಎಂಡಿ ಹಾಗೂ ೪೦ ಎಚ್‌ಎಚ್‌ಎಂಡಿಗಳನ್ನು ಬಳಸಲಾಗುತ್ತಿದೆ.
ಇದರೊಂದಿಗೆ ೭ ಕೆಎಸ್‌ಆರ್‌ಪಿ, ಎಆರ್ ತುಕಡಿಗಳು, ೪ ಅಗ್ನಿಶಾಮಕ ವಾಹನಗಳು, ೩ ಆಂಬುಲೆನ್ಸ್‌ಗಳು ಹಾಗೂ ೪ ಬಾಂಬ್ ನಿಷ್ಕ್ರಿಯ ದಳಗಳನ್ನು ಕರ್ತವ್ಯಕ್ಕೆ ನಿಯೋಜಿಸಲಾಗಿದೆ. ತುರ್ತು ಪರಿಸ್ಥಿತಿ ಎದುರಿಸಲು ಕ್ವಿಕ್ ರೆಸ್ಪಾನ್ಸ್ ಟೀಮ್, ಡಿ-ಸ್ಕ್ವಾಡ್ ಹಾಗೂ ಆರ್‌ವಿ ತಂಡವೂ ಸನ್ನದ್ಧವಾಗಿರಲಿದೆ. ಕಳೆದ ೧೫ ದಿನಗಳಿಂದಲೇ ಪರೇಡ್ ಮೈದಾನ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಪೊಲೀಸರು ನಿರಂತರ ನಿಗಾ ವಹಿಸಿದ್ದಾರೆ.
ಇನ್ನು ಗೇಟ್ ನಂ. ೨ ಮೂಲಕ ಪಿಂಕ್ ಬ್ಯಾಡ್ಜ್ ಹೊಂದಿರುವ ವಿಐಪಿಗಳಿಗೆ ಬ್ಲಾಕ್ ೧ಎ ಹಾಗೂ ತಿಳಿ ಪಿಂಕ್ ಬ್ಯಾಡ್ಜ್ ಹೊಂದಿರುವ ವಿಐಪಿಗಳಿಗೆ ಬ್ಲಾಕ್ ೨ ಮತ್ತು ೩ಕ್ಕೆ ಪ್ರವೇಶ ಕಲ್ಪಿಸಲಾಗಿದೆ. ಗೇಟ್ ನಂ. ೪ ಮೂಲಕ ಬಿಳಿ ಬ್ಯಾಡ್ಜ್ ಹೊಂದಿರುವವರಿಗೆ ಬ್ಲಾಕ್ ೪, ೫ ಮತ್ತು ೬ಕ್ಕೆ ಹಾಗೂ ಮಾಧ್ಯಮದವರಿಗೆ ಪ್ರವೇಶವಿದೆ. ಗೇಟ್ ನಂ. ೫ ಮೂಲಕ ಹಸಿರು ಬ್ಯಾಡ್ಜ್ ಹಾಗೂ ಇ-ಪಾಸ್ ಹೊಂದಿರುವ ಸಾರ್ವಜನಿಕರಿಗೆ ಬ್ಲಾಕ್ ೭, ೮ ಮತ್ತು ೯ಕ್ಕೆ ಪ್ರವೇಶ ಕಲ್ಪಿಸಲಾಗಿದೆ. ಭದ್ರತಾ ದೃಷ್ಟಿಯಿಂದ ಎಲ್ಲಾ ಪ್ರವೇಶ ದ್ವಾರಗಳಲ್ಲಿ ತಪಾಸಣೆ ನಡೆಸಲಾಗುತ್ತಿದ್ದು, ಕಾರ್ಯಕ್ರಮಕ್ಕೆ ಆಗಮಿಸುವವರು ಪೊಲೀಸರೊಂದಿಗೆ ಸಹಕರಿಸುವಂತೆ ಮನವಿ ಮಾಡಲಾಗಿದೆ.
ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ಭರದ ಸಿದ್ಧತೆ
ಬೆಂಗಳೂರು: ೮೦ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ನಡೆಯಲಿರುವ ಕಾರ್ಯಕ್ರಮದ ತಾಲೀಮು ನಡೆಯಿತು.
ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ ರಾವ್ ಹಾಗೂ ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ತಾಲೀಮನ್ನು ವೀಕ್ಷಿಸಿದರು.
ಬಳಿಕ ಮಾತನಾಡಿದ ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ ರಾವ್, ಸ್ವಾತಂತ್ರ್ಯೋತ್ಸವದಂದು ಬೆಳಗ್ಗೆ ೯ ಗಂಟೆಗೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಧ್ವಜಾರೋಹಣ ನೆರವೇರಿಸಲಿದ್ದು, ನಂತರ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ ಎಂದು ತಿಳಿಸಿದರು.
ಕಾರ್ಯಕ್ರಮದ ಹಿನ್ನೆಲೆಯಲ್ಲಿ ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ಮುಂಜಾಗ್ರತಾ ಕ್ರಮವಾಗಿ ಬಿಗಿ ಪೊಲೀಸ್ ಭದ್ರತೆ ಕೈಗೊಳ್ಳಲಾಗಿದೆ. ಕಳೆದ ೧೫ ದಿನಗಳಿಂದಲೇ ಮೈದಾನದಲ್ಲಿ ಪೊಲೀಸರನ್ನು ಕಣ್ಣಾವಲು ಕರ್ತವ್ಯಕ್ಕೆ ನಿಯೋಜಿಸಲಾಗಿದೆ. ಬೆಂಗಳೂರು ನಗರದ ಎಲ್ಲ ಹೋಟೆಲ್‌ಗಳು, ಲಾಡ್ಜ್‌ಗಳು, ತಂಗುದಾಣಗಳು ಸೇರಿದಂತೆ ವಿವಿಧ ಸ್ಥಳಗಳಲ್ಲಿ ಅನುಮಾನಾಸ್ಪದವಾಗಿ ವಾಸ್ತವ್ಯ ಹೂಡುವವರ ಮೇಲೆ ಸೂಕ್ತ ನಿಗಾ ಇರಿಸಲಾಗಿದೆ. ಭದ್ರತಾ ವ್ಯವಸ್ಥೆಯನ್ನು ಮತ್ತಷ್ಟು ಬಿಗಿಗೊಳಿಸಲಾಗಿದೆ ಎಂದು ತಿಳಿಸಿದರು.
ಸ್ವಾತಂತ್ರ್ಯೋತ್ಸವ ಕಾರ್ಯಕ್ರಮ ವೀಕ್ಷಣೆಗೆ ಈಗಾಗಲೇ ೧,೦೦೦ ಪಾಸ್‌ಗಳನ್ನು ಆನ್‌ಲೈನ್ ಮೂಲಕ ವಿತರಿಸಲಾಗಿದೆ ಎಂದು ಮಹೇಶ್ವರ ರಾವ್ ಹೇಳಿದರು.
ಬಿಗಿ ಪೊಲೀಸ್ ಬಂದೋಬಸ್ತ್
ಮುಖ್ಯಮಂತ್ರಿ ಅವರ ಕಾರ್ಯಕ್ರಮದ ಹಿನ್ನೆಲೆಯಲ್ಲಿ ನಗರದ ಮೈದಾನದಲ್ಲಿ ಭದ್ರತಾ ವ್ಯವಸ್ಥೆಯನ್ನು ಬಿಗಿಗೊಳಿಸಲಾಗಿದೆ.ಕಾರ್ಯಕ್ರಮಕ್ಕೆ ಆಗಮಿಸುವವರು ಬೆಳಗ್ಗೆ ೮.೧೫ರೊಳಗೆ ಮೈದಾನ ಪ್ರವೇಶಿಸಿ ಹಾಜರಿರಬೇಕು.ಕಾರ್ಯಕ್ರಮದ ಸಂದರ್ಭದಲ್ಲಿ ಸಂಚಾರ ಮಾರ್ಗಗಳಲ್ಲೂ ಬದಲಾವಣೆ ಮಾಡಲಾಗುವುದು ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ತಿಳಿಸಿದ್ದಾರೆ.
ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಬೆಳಗ್ಗೆ ೮.೫೫ಕ್ಕೆ ಮೈದಾನಕ್ಕೆ ಆಗಮಿಸಲಿದ್ದಾರೆ.ಅವರ ಆಗಮನದ ಹಿನ್ನೆಲೆಯಲ್ಲಿ ಮೈದಾನ ಹಾಗೂ ಸುತ್ತಮುತ್ತಲ ಪ್ರದೇಶದಲ್ಲಿ ವ್ಯಾಪಕ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದೆ. ಮೈದಾನದ ಭದ್ರತೆಗೆ ಇಬ್ಬರು ಜಂಟಿ ಪೊಲೀಸ್ ಆಯುಕ್ತರು, ೯ ಡಿಸಿಪಿಗಳು, ೧೭ ಎಸಿಪಿಗಳು, ೪೯ ಇನ್‌ಸ್ಪೆಕ್ಟರ್‌ಗಳು, ೧೦೬ ಪಿಎಸ್‌ಐಗಳು ಸೇರಿದಂತೆ ೧,೧೦೦ ಅಧಿಕಾರಿ ಮತ್ತು ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಸಂಚಾರ ನಿರ್ವಹಣೆಗೆ ಮೂವರು ಡಿಸಿಪಿಗಳು ಸೇರಿದಂತೆ ಒಟ್ಟು ೧,೫೮೩ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದರು.
ಭದ್ರತಾ ದೃಷ್ಟಿಯಿಂದ ಮೈದಾನದ ಸುತ್ತಮುತ್ತ ೧೧೦ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ.೭ ಕೆಎಸ್‌ಆರ್‌ಪಿ ಹಾಗೂ ಸಿಎಆರ್ ತುಕಡಿಗಳು, ಅಗ್ನಿಶಾಮಕ ದಳ, ಮೂರು ಆಂಬ್ಯುಲೆನ್ಸ್‌ಗಳು, ಒಂದು ಕ್ಯೂಆರ್‌ಟಿ ತಂಡ ಹಾಗೂ ಡಿ-ಸ್ವಾಟ್ ಸಿಬ್ಬಂದಿಯನ್ನೂ ನಿಯೋಜಿಸಲಾಗಿದೆ ಎಂದು ಸಿಮಂತ್ ಕುಮಾರ್ ಸಿಂಗ್ ತಿಳಿಸಿದ್ದಾರೆ.
































