ಯಾದಗಿರಿ :ಜು.೧೦: ಕರ್ನಾಟಕದಾದ್ಯಂತ ಮಳೆಯಿಲ್ಲದೇ ಬರ ಆವರಿಸಿ ರೈತರು ತೀರಾ ಸಂಕಷ್ಟದಲ್ಲಿದ್ದು, ಬಿತ್ತನೆ ಕಾರ್ಯ ಮುಗಿದು ಬೆಳೆ ಬಾರದೆ ಕಂಗಾಲು ಆಗಿದ್ದಾರೆ ಕೂಡಲೇ ಸರ್ಕಾರ ಕಲ್ಯಾಣ ಕರ್ನಾಟಕಕ್ಕೆ ಬರಗಾಲ ಘೋಷಣೆ ಮಾಡಿ ಬೆಳೆ ಪರಿಹಾರ ನೀಡಬೇಕು ಎಂದು ಬಿಜೆಪಿ ಯುವ ಮುಖಂಡ ಮಹೇಶ್ ಜಾರಕಿಹೋಳಿ
ಸರ್ಕಾರಕ್ಕೆ ಒತ್ತಾಯಿಸಿದರು.
ಈ ಕುರಿತು ಬುಧವಾರ ಹೇಳಿಕೆ ನೀಡಿರುವ ಅವರು, ರಾಜ್ಯದಾದ್ಯಂತ ಪ್ರಸ್ತುತ ಮುಂಗಾರು ಕೈ ಕೊಟ್ಟಿದ್ದರ ಹಿನ್ನಲೆ ರೈತರು ಕಂಗಾಲಾಗಿದ್ದು, ಜಮೀನಿನಲ್ಲಿ ಬೆಳೆಗೆ ಮಳೆಬಾರದೆ ಹೈರಾಣರಾಗಿದ್ದಾರೆ ಎಂದರು.
ಮಳೆ ಬಾರದೆ ಜನ-ಜಾನುವಾರು ಸೇರಿ ಪ್ರಾಣಿ ಪಶುಗಳಿಗೂ ನೀರು ಸಿಗುತ್ತಿಲ್ಲ. ಮುಂಗಾರು ಮಳೆ ಕೈಕೊಟ್ಟಿದ್ದರಿಂದ ರಾಜ್ಯಾದ್ಯಂತ ಬಿತ್ತನೆ ಕಾರ್ಯ ಬಹುತೇಕ ಆಗಿಲ್ಲ.
ಎಷ್ಟೋ ಕಡೆಗಳಲ್ಲಿ ರೈತರು ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಬೀಜ, ಹಾಗೂ ರಸಗೊಬ್ಬರಗಳನ್ನು ಖರೀದಿಸಿ ಉಳುಮೆ ಮಾಡಿದ್ದಾರೆ ಮಳೆಯ ಮುನಿಸಿಗೆ ಮೊದಲ ಬಿತ್ತನೆ ಬೆಳೆ ಬಾರದೆ, ಮತ್ತೊಮ್ಮೆ ಎರಡನೇ ಬಾರಿಗೆ ಬೆಳೆಯನ್ನು ಬಿತ್ತಿದ್ದಾರೆ. ಇದೆಲ್ಲವನ್ನು ಸರಕಾರ ಗಮನಿಸಿ ರೈತರಿಗೆ ಬೆಳೆ ಪರಿಹಾರದ ಜೊತೆಗೆ ಮಳೆಯಾಗದ ಪ್ರದೇಶಗಳನ್ನು ಗುರುತಿಸಿ
ವಿಶೇಷ ಪ್ಯಾಕೇಜ್ ನೀಡಬೇಕು ಹಾಗೆಯೇ ಬರಗಾಲ ಘೋಷಣೆ ಮಾಡಬೇಕು.
ಎಂದು ಒತ್ತಾಯಿಸಿದ್ದಾರೆ.





























