Home ಜಿಲ್ಲೆ ಜನ್ಮದಿನಕ್ಕೆ ಸಸಿ ಉಡುಗೊರೆ ನೀಡಿ

ಜನ್ಮದಿನಕ್ಕೆ ಸಸಿ ಉಡುಗೊರೆ ನೀಡಿ

ಬೀದರ್: ಪರಿಸರ ಸಂರಕ್ಷಣೆಗೆ ಜನ್ಮದಿನ, ಸಭೆ-ಸಮಾರಂಭಗಳಲ್ಲಿ ಸಸಿ ಉಡುಗೊರೆಯಾಗಿ ನೀಡುವ ಪರಿಪಾಠ ಬೆಳೆಯಬೇಕು ಎಂದು ಪ್ರಾಚಾರ್ಯ ಗೋವಿಂದ ಡಿ. ತಾಂದಳೆ ಹೇಳಿದರು.
ಇಲ್ಲಿಯ ಸಪ್ತಗಿರಿ ಪದವಿಪೂರ್ವ ಕಾಲೇಜಿನಲ್ಲಿ ಪರಿಸರ ದಿನಾಚರಣೆ ನಿಮಿತ್ತ ಆಯೋಜಿಸಿದ್ದ ಪರಿಸರ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ನಿಸರ್ಗ ಮನುಷ್ಯನಿಗೆ ನೆಮ್ಮದಿಯಿಂದ ಬದುಕಲು ಎಲ್ಲವನ್ನೂ ಕೊಟ್ಟಿದೆ. ಪ್ರತಿಯೊಬ್ಬರೂ ಸಸಿ ನೆಟ್ಟು ಪರಿಸರ ರಕ್ಷಿಸಬೇಕಾಗಿದೆ ಎಂದು ತಿಳಿಸಿದರು.
ಪರಿಸರ ಚೆನ್ನಾಗಿದ್ದರೆ ಮಾತ್ರ ಮನುಷ್ಯನಿಗೆ ಉಳಿಗಾಲ ಇದೆ. ಹೀಗಾಗಿ ಪರಿಸರದ ಮಹತ್ವವನ್ನು ಎಲ್ಲರೂ ಅರಿಯಬೇಕು ಎಂದು ವೆಂಕಟೇಶ್ವರ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಶ್ರೀನಿವಾಸ್ ಡಿ. ತಾಂದಳೆ ಹೇಳಿದರು.
ಪರಿಸರ ಕಾಳಜಿ ಪರಿಸರ ದಿನಾಚರಣೆಗೆ ಸೀಮಿತವಾಗಬಾರದು. ಪರಿಸರ ಜಾಗೃತಿ ಕಾರ್ಯಕ್ರಮಗಳು ನಿರಂತರ ನಡೆಯಬೇಕು ಎಂದು ಸಂಸ್ಥೆಯ ಕಾರ್ಯದರ್ಶಿ ಗೋಪಾಲ್ ಡಿ. ತಾಂದಳೆ ಅಭಿಪ್ರಾಯಪಟ್ಟರು.
ಹವಾಮಾನ ಬದಲಾವಣೆ, ಜಾಗತಿಕ ತಾಪಮಾನ ಹೆಚ್ಚಳಕ್ಕೆ ಅರಣ್ಯ ನಾಶವೇ ಕಾರಣವಾಗಿದೆ. ಪರಿಸರದ ಸಮತೋಲನ ಕಾಯ್ದುಕೊಳ್ಳಲು ಸಸಿಗಳನ್ನು ಬೆಳೆಸುವುದು ಬಹಳ ಅವಶ್ಯಕವಾಗಿದೆ ಎಂದು ಜೀವಶಾಸ್ತ್ರ ಉಪನ್ಯಾಸಕ ಅನಿಲಕುಮಾರ ಜಾಧವ್ ಹೇಳಿದರು.
ಉಪನ್ಯಾಸಕ ಸಾಗರ್ ಮಾತನಾಡಿದರು. ಕಾಲೇಜು ಆವರಣದಲ್ಲಿ ಸಸಿ ನೆಟ್ಟು, ಸ್ವಚ್ಛತಾ ಅಭಿಯಾನ ನಡೆಸಲಾಯಿತು.
ಕಾಲೇಜಿನ ಬೋಧಕ, ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.