Home ಜಿಲ್ಲೆ ಬೆಂಗಳೂರು ಗಾಂಜಾ ವ್ಯಾಪಾರ, ಸೇವನೆ – ಆರು ಬಂಧನ

ಗಾಂಜಾ ವ್ಯಾಪಾರ, ಸೇವನೆ – ಆರು ಬಂಧನ

ಕೆಜಿಎಫ್, ಅ. ೦೮: ಬೇತಮಂಗಲ ಮತ್ತು ಕ್ಯಾಸಂಬಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಾದಕ ವಸ್ತುಗಳ ವಿರುದ್ಧ ನಡೆಸಿದ ಕಾರ್ಯಾಚರಣೆಯಲ್ಲಿ ಬೇತಮಂಗಲ ಪೊಲೀಸರು ಗಾಂಜಾ ಮಾರಾಟಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಬಂಧಿಸಿ ಅವರಿಂದ ೨೮೯ ಗ್ರಾಂ ಗಾಂಜಾ ವಶಪಡಿಸಿಕೊಂಡಿದ್ದಾರೆ, ಗಾಂಜಾ ಸೇವನೆಗೆ ಸಂಬಂಧಿಸಿದಂತೆ ಕ್ಯಾಸಂಬಳ್ಳಿ ಪೊಲೀಸರು ನಾಲ್ಕು ಜನರ ವಿರುದ್ಧ ಪ್ರಕರಣಗಳು ದಾಖಲಿಸಿದ್ದಾರೆ.


ಅ.೬ ರಂದು ಎಂ. ಕೊತ್ತೂರಿನಿಂದ ಕೊಡಿಗೆನಹಳ್ಳಿಗೆ ಹೋಗುವ ರಸ್ತೆಯ ಪಕ್ಕದಲ್ಲಿದ್ದ ತಬಸೆ ಮರದ ಹತ್ತಿರ ಗಾಂಜಾ ಮಾರಾಟ ಮಾಡುತ್ತಿರುವುದಾಗಿ ಬಂದ ಖಚಿತ ಮಾಹಿತಿಯ ಮೇರೆಗೆ ಬೇತಮಂಗಲ ಪಿ.ಎಸ್.ಐ ತ್ಯಾಗರಾಜ್ ಸಿಬ್ಬಂದಿಯೊಂದಿಗೆ ಕಾರ್ಯಾಚರಣೆ ನಡೆಸಿ, ಮುಳಬಾಗಿಲು ನಗರದ ಶಾಮೀರ್ ಎಂಬಾತ ಮತ್ತು ಬಿಲ್ಲೇರಹಳ್ಳಿಯ ಸುಧಾಕರ್ ನನ್ನು ವಶಕ್ಕೆ ತೆಗೆದುಕೊಂಡರು. ಆರೋಪಿಗಳಿಂದ ೨೦,೦೦೦ ರೂ.ಮೌಲ್ಯದ ೨೮೯ ಗ್ರಾಂ ಗಾಂಜಾ ವಶಪಡಿಸಿಕೊಂಡು ಬೇತಮಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಲಾಗಿದೆ.


ಇದೆ ಸಂದರ್ಭದಲ್ಲಿ ಗಾಂಜಾ ಸೇವನೆಯ ವಿರುದ್ಧವೂ ಕಾರ್ಯಾಚರಣೆ ನಡೆಸಲಾಗಿದೆ. ಕ್ಯಾಸಂಬಳ್ಳಿ ಪೊಲೀಸರು ಕ್ಯಾಸಂಬಳ್ಳಿ ಪೊಲೀಸ್ ಠಾಣಾ ಸರಹದ್ದಿನ ವಿವಿಧ ಪ್ರದೇಶಗಳಲ್ಲಿ ಗಾಂಜಾ ಸೇವನೆ ಮಾಡುತ್ತಿದ್ದ ಅಜಾಮ್@ಕಾಲು ಸುರೇಂದ್ರ, ಶರತ್, ಯುವರಾಜ್ ಎಂಬ ನಾಲ್ವರನ್ನು ಪತ್ತೆಹಚ್ಚಿ ವೈದ್ಯಕೀಯ ಪರೀಕ್ಷೆಗೊಳಪಡಿಸಿದಾಗ, ಗಾಂಜಾ ಸೇವನೆ ಮಾಡಿರುವುದು ದೃಢಪಟ್ಟಿದೆ. ಕ್ಯಾಸಂಬಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣಗಳು ದಾಖಲಾಗಿವೆ