Home ಜಿಲ್ಲೆ ವೈದ್ಯಕೀಯ ವಿದ್ಯಾರ್ಥಿಯ ಕನಸಿಗೆ ಆರ್ಥಿಕ ಬಲ : ಮಾನವೀಯತೆ ಮೆರೆದ ಸಚಿವ ಬೈರತಿ ಸುರೇಶ್

ವೈದ್ಯಕೀಯ ವಿದ್ಯಾರ್ಥಿಯ ಕನಸಿಗೆ ಆರ್ಥಿಕ ಬಲ : ಮಾನವೀಯತೆ ಮೆರೆದ ಸಚಿವ ಬೈರತಿ ಸುರೇಶ್

ಯಾದಗಿರಿ:ಮೇ.15: ಆರ್ಥಿಕ ಸಂಕಷ್ಟದ ನಡುವೆಯೂ ವೈದ್ಯಕೀಯ ಶಿಕ್ಷಣದ ಮಹತ್ತರ ಗುರಿಯನ್ನು ಬೆನ್ನಟ್ಟುತ್ತಿರುವ ಯಾದಗಿರಿ ಜಿಲ್ಲೆಯ ಬಾಡಿಯಾಳ ಗ್ರಾಮದ ಪ್ರತಿಭಾವಂತ ವಿದ್ಯಾರ್ಥಿ ದರ್ಶನ್ ಎಂಬ ವಿದ್ಯಾರ್ಥಿಗೆ ನೆರವಿಗೆ ಕರ್ನಾಟಕ ಸರ್ಕಾರದ ಸಚಿವ ಬೈರತಿ ಸುರೇಶ್ ಧಾವಿಸಿ ಮಾನವೀಯತೆ ಹಾಗೂ ಸಾಮಾಜಿಕ ಬದ್ಧತೆಯ ಅಪೂರ್ವ ಉದಾಹರಣೆ ನಿರ್ಮಿಸಿದ್ದಾರೆ.

ಪ್ರಸ್ತುತ ಬೆಂಗಳೂರಿನ ಪ್ರತಿಷ್ಠಿತ ಬೆಂಗಳೂರು ಮೆಡಿಕಲ್ ಕಾಲೇಜ ಆಯಿಂಡ್ ರಿಸರ್ಚ ಇನಸ್ಟಿಟ್ಯೂಟ್ ನಲ್ಲಿ ನಾಲ್ಕನೇ ವರ್ಷದ ಎಂ.ಬಿ.ಬಿ.ಎಸ್ ವೈದ್ಯಕೀಯ ವ್ಯಾಸಂಗ ಮಾಡುತ್ತಿರುವ ದರ್ಶನ್ ಅವರು, ಈ ಸಾಲಿನ ಕಾಲೇಜು ಶುಲ್ಕ ಪಾವತಿಸುವ ಸಂಬಂಧ ಗೃಹ ಕಚೇರಿಗೆ ಭೇಟಿ ನೀಡಿದ್ದರು. ವಿದ್ಯಾರ್ಥಿಯ ಶೈಕ್ಷಣಿಕ ಸಾಧನೆ, ಪರಿಶ್ರಮ ಹಾಗೂ ಕುಟುಂಬದ ಆರ್ಥಿಕ ಪರಿಸ್ಥಿತಿಯನ್ನು ಮನಗಂಡ ಸಚಿವ ಬೈರತಿ ಸುರೇಶ್ ಅವರು ತಮ್ಮ ಸ್ವಂತ ಹಣದ ಚೆಕ್ ಮೂಲಕ ಕಾಲೇಜು ಶುಲ್ಕವನ್ನು ನೀಡಿ ವಿದ್ಯಾರ್ಥಿಯ ಕನಸಿಗೆ ಆರ್ಥಿಕ ಬಲ ತುಂಬಿದರು.

ಸಚಿವರ ಈ ಮಾನವೀಯ ನಡೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಮೆಚ್ಚುಗೆಗೆ ಪಾತ್ರವಾಗಿದ್ದು, ಬಡ ಹಾಗೂ ಗ್ರಾಮೀಣ ಹಿನ್ನೆಲೆಯ ವಿದ್ಯಾರ್ಥಿಗಳ ಶಿಕ್ಷಣದ ಮೇಲಿನ ಅವರ ಬದ್ಧತೆಯನ್ನು ಮತ್ತೊಮ್ಮೆ ಅನಾವರಣಗೊಳಿಸಿದೆ. “ಶಿಕ್ಷಣವೇ ಸಮಾಜ ಪರಿವರ್ತನೆಯ ಪ್ರಬಲ ಅಸ್ತ್ರ. ಗ್ರಾಮೀಣ ಭಾಗದ ಪ್ರತಿಭಾವಂತ ವಿದ್ಯಾರ್ಥಿಗಳು ಆರ್ಥಿಕ ಅಡಚಣೆಯಿಂದ ಶಿಕ್ಷಣದಿಂದ ವಂಚಿತರಾಗಬಾರದು. ಇಂತಹ ವಿದ್ಯಾರ್ಥಿಗಳಿಗೆ ನೆರವಾಗುವುದು ಪ್ರತಿಯೊಬ್ಬರ ಸಾಮಾಜಿಕ ಜವಾಬ್ದಾರಿ” ಎಂಬ ಸಂದೇಶವನ್ನು ಸಚಿವರು ಈ ಮೂಲಕ ಸಾರಿದ್ದಾರೆ.

ನೆರವಿನಿಂದ ಭಾವುಕರಾದ ವಿದ್ಯಾರ್ಥಿ ದರ್ಶನ್ ಅವರು ಸಚಿವರಿಗೆ ಕೃತಜ್ಞತೆ ಸಲ್ಲಿಸಿ, ವೈದ್ಯಕೀಯ ಶಿಕ್ಷಣವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿ ಸಮಾಜದ ಬಡ ಮತ್ತು ನಿರ್ಗತಿಕ ವರ್ಗದ ಜನರಿಗೆ ಸೇವೆ ಸಲ್ಲಿಸುವ ಸಂಕಲ್ಪ ವ್ಯಕ್ತಪಡಿಸಿದರು.

ಸಚಿವ ಬೈರತಿ ಸುರೇಶ್ ಅವರ ಈ ಸಾಮಾಜಿಕ ಕಾಳಜಿ ಹಾಗೂ ಶಿಕ್ಷಣಪರ ಮಾನವೀಯ ಧೋರಣೆ ಸಾರ್ವಜನಿಕರಿಂದ ಪ್ರಶಂಸೆಗೆ ಪಾತ್ರವಾಗಿದ್ದು, ವಿದ್ಯಾರ್ಥಿ ಸಮುದಾಯಕ್ಕೆ ಹೊಸ ಪ್ರೇರಣೆಯಾಗಿ ಪರಿಣಮಿಸಿದೆ.