Home ಜಿಲ್ಲೆ ಕಲಬುರಗಿ ಸಹ ಶಿಕ್ಷಕ ಜಹಾಂಗೀರ್ ಬಾಷಾ ಮುಲ್ಲಾ ಸೇವೆ ಶ್ಲಾಘನೆ

ಸಹ ಶಿಕ್ಷಕ ಜಹಾಂಗೀರ್ ಬಾಷಾ ಮುಲ್ಲಾ ಸೇವೆ ಶ್ಲಾಘನೆ

ಕರಜಗಿ :ಜೂ.24:ಶಿಕ್ಷಣ ಕ್ಷೇತ್ರದಲ್ಲಿ ಹಲವು ವರ್ಷಗಳ ಕಾಲ ವಿದ್ಯಾರ್ಥಿಗಳ ವ್ಯಕ್ತಿತ್ವ ನಿರ್ಮಾಣ ಹಾಗೂ ಶೈಕ್ಷಣಿಕ ಪ್ರಗತಿಗೆ ಶ್ರಮಿಸಿದ ಸಹ ಶಿಕ್ಷಕ ಜಹಾಂಗೀರ್ ಬಾಷಾ ಮುಲ್ಲಾ ಅವರಿಗೆ ಅಫಜಲಪುರ ತಾಲೂಕಿನ ಕರಜಗಿ ಗ್ರಾಮದ ಸರ್ಕಾರಿ ಉರ್ದು ಪ್ರಾಥಮಿಕ ಶಾಲೆಯಲ್ಲಿ ಭಾವಪೂರ್ಣ ಬೀಳ್ಕೊಡುಗೆ ನೀಡಲಾಯಿತು.ಸೇವಾ ನಿವೃತ್ತಿ ಅಂಗವಾಗಿ ಆಯೋಜಿಸಿದ್ದ ಸಮಾರಂಭದಲ್ಲಿ ಮುಖ್ಯಗುರುಗಳು, ಶಿಕ್ಷಕರು ಹಾಗೂ ಹಳೆಯ ಸಹೋದ್ಯೋಗಿಗಳು ಅವರ ಸೇವೆಯನ್ನು ಸ್ಮರಿಸಿ ಅಭಿನಂದಿಸಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ನಿವೃತ್ತ ಪ್ರಾಚಾರ್ಯ ಚಂದ್ರಕಾಂತ ಬುರಕಲ್ ಮಾತನಾಡಿ,ಜಹಾಂಗೀರ್ ಬಾಷಾ ಪಟೇಲ್ ಅವರು ತಮ್ಮ ವೃತ್ತಿ ಜೀವನದುದ್ದಕ್ಕೂ ಕರ್ತವ್ಯನಿಷ್ಠೆ,ಶಿಸ್ತು ಹಾಗೂ ವಿದ್ಯಾರ್ಥಿ ಕೇಂದ್ರಿತ ಬೋಧನೆಯ ಮೂಲಕ ವಿಶಿಷ್ಟ ಗುರುತನ್ನು ಮೂಡಿಸಿದ್ದಾರೆ.ಶಿಕ್ಷಣ ಕ್ಷೇತ್ರದಲ್ಲಿ ಜ್ಞಾನ ನೀಡುವುದಷ್ಟೇ ಅಲ್ಲದೆ ವಿದ್ಯಾರ್ಥಿಗಳಲ್ಲಿ ಮೌಲ್ಯಗಳು,ಸಾಮಾಜಿಕ ಜವಾಬ್ದಾರಿ ಹಾಗೂ ಪ್ರಜಾಪ್ರಭುತ್ವದ ಅರಿವು ಮೂಡಿಸುವ ಕಾರ್ಯವನ್ನು ಅವರು ಯಶಸ್ವಿಯಾಗಿ ನಿರ್ವಹಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಮುಖ್ಯಗುರುಗಳಾದ ಉಮೇಶ್ ಅಷ್ಟಗಿ ಮಾತನಾಡಿ,ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಶಿಕ್ಷಕರ ಪಾತ್ರ ಅತ್ಯಂತ ಮಹತ್ವದ್ದಾಗಿದೆ.ಆ ನಿಟ್ಟಿನಲ್ಲಿ ಜಾಹಾಂಗೀರ್ ಬಾಷಾ ಮುಲ್ಲಾ ಅವರು ವಿದ್ಯಾರ್ಥಿಗಳಿಗೆ ಉತ್ತಮ ಮಾರ್ಗದರ್ಶನ ನೀಡಿ ಕಾಲೇಜಿನ ಶೈಕ್ಷಣಿಕ ವಾತಾವರಣವನ್ನು ಉತ್ತಮಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.ಸಮಯಪ್ರಜ್ಞೆ ಮತ್ತು ಶಿಸ್ತಿನ ಮೂಲಕ ಇತರರಿಗೆ ಮಾದರಿಯಾಗಿದ್ದರು ಎಂದು ಹೇಳಿದರು.

ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ನಿವೃತ್ತ ಶಿಕ್ಷಕ ಜಹಾಂಗೀರ್ ಭಾಷಾ ಮುಲ್ಲಾ ಮಾತನಾಡಿ,ಶಿಕ್ಷಕ ವೃತ್ತಿ ಕೇವಲ ಉದ್ಯೋಗವಲ್ಲ,ಅದು ಸಮಾಜ ನಿರ್ಮಾಣದ ಜವಾಬ್ದಾರಿವಾಗಿದೆ.ತಮ್ಮ ಸೇವಾ ಅವಧಿಯಲ್ಲಿ ವಿದ್ಯಾರ್ಥಿಗಳ ಭವಿಷ್ಯ ರೂಪಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ.ಸಹೋದ್ಯೋಗಿಗಳು ಹಾಗೂ ಕುಟುಂಬದ ಸದಸ್ಯರ ಬೆಂಬಲವೇ ನನ್ನ ಸೇವೆಯ ಯಶಸ್ಸಿಗೆ ಕಾರಣವಾಗಿದೆ ಎಂದು ತಿಳಿಸಿದ ಅವರು ವಿದ್ಯಾರ್ಥಿಗಳೊಂದಿಗೆ ಬೆಳೆಸಿಕೊಂಡ ಬಾಂಧವ್ಯ, ವಿವಿಧ ಶಾಲೆಗಳಲ್ಲಿ ಸಲ್ಲಿಸಿದ ಸೇವೆ ಹಾಗೂ ಸಹೋದ್ಯೋಗಿಗಳೊಂದಿಗೆ ಕಳೆದ ಕ್ಷಣಗಳು ಜೀವನದ ಅಮೂಲ್ಯ ನೆನಪುಗಳಾಗಿ ಉಳಿಯಲಿವೆ ಎಂದು ಅವರು ಭಾವುಕರಾಗಿ ನುಡಿದರು.

ಈ ಸಂದರ್ಭದಲ್ಲಿ ಮುಖಂಡರಾದ ಮಂಜೂರ ಅಹ್ಮದ್ ಅಗರಖೇಡ,ಗುರುಸಿದ್ಧಯ್ಯ ನಂದಿಮಠ,ಗುರಣ್ಣ,ಅಬ್ದುಲ್ ಸತ್ತಾರ್,ಹೀರೋಜರಾಯ ಪಾಟೀಲ್,ಮಡಿವಾಳಪ್ಪ ಬಾಗೇವಾಡಿ,ಆನಂದ್ ಕುಂಬಾರ,ಹುಸೇನಸಾಬ ಶೇಖ್ ಸಲೀಮ್ ಬಾಗವನ್,ಮುಸ್ತಾಫಾ ಚಂದನ್,ಅಬೂಬಕರ್ ಚಂದನ್,ಮುಲ್ಕಾಸಾಬ್ ಜಮಾದಾರ,ಆನ್ಸರಸಾಬ್ ಜಮಾದಾರ,ಮಹಿಬೂಬಸಾಬ್ ಜಮಾದಾರ,ಶಬ್ಬೀರ್ ಹುಸೈನ್,ಮಡಿವಾಳಪ್ಪ ಪರೀಟ್,ಹುಸೇನಿ ಮುಜಾವರ,ನಿಂಗಪ್ಪ ಪೂಜಾರಿ ಉಪಸ್ಥಿತರಿದ್ದರು.