Home ಜಿಲ್ಲೆ ಸಾಬಣ್ಣ ಬಸವಂತಪುರ ಅವರಿಗೆ ಕೊಲಿ ಕಬ್ಬಲಿಗ ಸಮಾಜದ ವತಿಯಿಂದ ಅಭಿನಂದನೆ

ಸಾಬಣ್ಣ ಬಸವಂತಪುರ ಅವರಿಗೆ ಕೊಲಿ ಕಬ್ಬಲಿಗ ಸಮಾಜದ ವತಿಯಿಂದ ಅಭಿನಂದನೆ

ಯಾದಗಿರಿ: ವಿಕಾಸಶೀಲ ಇನ್ಸಾನ್ ಪಕ್ಷಕ್ಕೆ (ವಿಐಪಿ) ಸೇರ್ಪಡೆಗೊಂಡಿರುವ ಹಿರಿಯ ಮುಖಂಡ ಸಾಬಣ್ಣ ಬಸವಂತಪುರ ಅವರನ್ನು ಯಾದಗಿರಿ ಜಿಲ್ಲಾ ಘಟಕದ ಜಿಲ್ಲಾಧ್ಯಕ್ಷರಾಗಿ ನೇಮಕ ಮಾಡಿರುವ ಹಿನ್ನೆಲೆಯಲ್ಲಿ ಕೊಲಿ ಕಬ್ಬಲಿಗ ಸಮಾಜದ ವತಿಯಿಂದ ಅಭಿನಂದನೆ ಸಲ್ಲಿಸಲಾಯಿತು.
ಯಾದಗಿರಿ ನಗರದ ಶ್ರೀ ಆಂಜನೇಯ ದೇವಸ್ಥಾನದಲ್ಲಿ ಯುವ ಕೂಲಿ ಕಬ್ಬಲಿಗ ಸಮಾಜದ ತಾಲೂಕು ಅಧ್ಯಕ್ಷ ಮುದಕಪ್ಪ ಚಾಮನಾಳ ಅವರ ನೇತೃತ್ವದಲ್ಲಿ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಸಾಬಣ್ಣ ಬಸವಂತಪುರ ಅವರನ್ನು ಸನ್ಮಾನಿಸಿ ಅಭಿನಂದಿಸಿದರು. ಇದೇ ಸಂದರ್ಭದಲ್ಲಿ ಅಂಬಿಗರ ಚೌಡಯ್ಯ ಅವರ ಭಾವಚಿತ್ರವನ್ನು ನೀಡಿ ಗೌರವ ಸಲ್ಲಿಸಲಾಯಿತು.
ಈ ವೇಳೆ ಮಾತನಾಡಿದ ಮುದಕಪ್ಪ ಚಾಮನಾಳ, “ಮುಂದಿನ ದಿನಗಳಲ್ಲಿ ವಿಐಪಿ ಪಕ್ಷವು ಉತ್ತಮವಾಗಿ ಬೆಳೆಯಲಿ. ನಮ್ಮ ಬೆಂಬಲ ಸದಾ ಪಕ್ಷದೊಂದಿಗೆ ಇರುತ್ತದೆ. ಸಾಬಣ್ಣ ಬಸವಂತಪುರ ಅವರು ನಮ್ಮ ಸಮಾಜದ ಹಿರಿಯ ಮುಖಂಡರಾಗಿದ್ದು, ಉತ್ತಮ ಸಮಾಜ ನಿರ್ಮಾಣದ ಉದ್ದೇಶದಿಂದ ವಿಐಪಿ ಪಕ್ಷಕ್ಕೆ ಸೇರ್ಪಡೆಯಾಗಿರುವುದು ಸಂತೋಷದ ವಿಷಯವಾಗಿದೆ” ಎಂದರು.
ಸಾಬಣ್ಣ ಬಸವಂತಪುರ ಅವರ ನೇತೃತ್ವದಲ್ಲಿ ಯಾದಗಿರಿ ಜಿಲ್ಲೆಯಲ್ಲಿ ಪಕ್ಷವನ್ನು ಪರಿಣಾಮಕಾರಿಯಾಗಿ ಸಂಘಟಿಸಿ, ಜನರ ಸಮಸ್ಯೆಗಳಿಗೆ ಧ್ವನಿಯಾಗುವ ವಿಶ್ವಾಸವನ್ನು ಮುಖಂಡರು ವ್ಯಕ್ತಪಡಿಸಿದರು. ಮುಂದಿನ ದಿನಗಳಲ್ಲಿ ಪಕ್ಷದ ಸಂಘಟನೆಯನ್ನು ಮತ್ತಷ್ಟು ಬಲಪಡಿಸಲು ಎಲ್ಲರೂ ಒಗ್ಗಟ್ಟಿನಿಂದ ಕಾರ್ಯನಿರ್ವಹಿಸುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಮಲ್ಲಿಕಾರ್ಜುನ ಟಿ. ವಡಗೇರಾ, ವೆಂಕಟೇಶ್ ಕುಂಟಿಮೆರಿ ಆಶನಾಳ, ಮಲ್ಲು ಕೋಲಿವಾಡ, ಶ್ರೀಶೈಲ್ ಮಾನೆಗಾರ್, ವೆಂಕಟ್ ರಾಮಣ್ಣ, ನಿಂಗಪ್ಪ ಬೋಯಿನ್ ಆಶನಾಳ ಹಾಗೂ ಶರಣು ಪಟೇದಾರ್ ಆಶನಾಳ ಸೇರಿದಂತೆ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.