
ಕಲಬುರಗಿ,ಜೂ.16-ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ದೌರ್ಜನ್ಯ ಪ್ರಕರಣವೊಂದರಲ್ಲಿ ಆರೋಪಿಗೆ ಸಹಕರಿಸಲು ವಿಶೇಷ ಸರ್ಕಾರಿ ಅಭಿಯೋಜಕರಿಗೆ (ಎಸ್‍ಪಿಪಿ) 5 ಸಾವಿರ ರೂ.ಲಂಚ ನೀಡಲು ಯತ್ನಿಸಿದ ಅಪ್ಪ ಹಾಗೂ ಮಗ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ.
ಜಿಲ್ಲಾ ಕೋರ್ಟ್ ಸಂಕೀರ್ಣದ ಕಟ್ಟಡದಲ್ಲಿ ಸೋಮವಾರ ಈ ಘಟನೆ ನಡೆದಿದ್ದು, ಆಳಂದ ತಾಲ್ಲೂಕಿನ ಕೊತನಹಿಪ್ಪರಗಾದ ಸಂಜೀವನ್ ದತ್ತಾಜಿ ಪಾಟೀಲ (80) ಹಾಗೂ ಅವರ ಪುತ್ರ ಸುರೇಶ ಸಂಜೀವನ್ ಪಾಟೀಲ (44) ಲೋಕಾಯುಕ್ತ ಬಲೆಗೆ ಬಿದ್ದವರು.
ಆಳಂದ ಪೊಲೀಸ್ ಠಾಣೆ ವ್ಯಾಪ್ತಿಯ ಎಸ್‍ಸಿ/ಎಸ್‍ಟಿ ದೌರ್ಜನ್ಯ ಪ್ರಕರಣದ ವಿಚಾರಣೆಯು ಕಲಬುರಗಿಯ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದಲ್ಲಿ ನಡೆಯುತ್ತಿದೆ.
ಈ ಪ್ರಕರಣದಲ್ಲಿ ಆರೋಪಿಯಾದ ತಮ್ಮನಿಗೆ ಸಹಕರಿಸುವಂತೆ ಅಣ್ಣ ಸಂಜೀವನ್ ಪಾಟೀಲ ಅವರು ತಮ್ಮ ಮಗ ಸುರೇಶ ಜೊತೆಗೆ 5 ಸಾವಿರ ಹಣವನ್ನು ಕವರ್‍ನಲ್ಲಿ ಇಟ್ಟು ಎಸ್‍ಪಿಪಿಗೆ ಲಂಚ ಕೊಡಲು ಮುಂದಾಗಿದ್ದರು. ಕಲಬುರಗಿ ವಿಭಾಗದ ವಿಶೇಷ ಸರ್ಕಾರಿ ಅಭಿಯೋಜಕ ಪ್ರಾಣೇಶ ಭರತನೂರ ಅವರು ಈ ಕುರಿತು ಲೋಕಾಯುಕ್ತ ಪೊಲೀಸರಿಗೆ ಮಾಹಿತಿ ನೀಡಿದ್ದರು.
ಲೋಕಾಯುಕ್ತ ಎಸ್.ಪಿ.ಸಿದ್ಧರಾಜು ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಇನ್ಸ್‍ಸ್ಪೆಕ್ಟರ್‍ಗಳಾದ ರಾಜಶೇಖರ ಬಡದೇಸಾರ, ಅರುಣಕುಮಾರ ಪಾಲ್ಗೊಂಡಿದ್ದರು.


























