
ಯಾದಗಿರಿ:ಜೂ.೧೫: ಮುಂಗಾರು ಆರಂಭವಾಗಿ ರೈತರು ಬಿತ್ತನೆ ಕಾರ್ಯಕ್ಕೆ ಸಜ್ಜಾಗಿರುವ ಸಂದರ್ಭದಲ್ಲಿ ಕೃಷಿ ಇಲಾಖೆಗೆ ಪೂರ್ಣಾವಧಿ ಸಚಿವರನ್ನು ನೇಮಿಸದೆ ರಾಜ್ಯ ಸರ್ಕಾರ ರೈತರ ಹಿತವನ್ನು ಕಡೆಗಣಿಸಿದೆ ಎಂದು ಬಿಜೆಪಿ ಹಿರಿಯ ಮುಖಂಡ ರಾಚನಗೌಡ ಮುದ್ನಾಳ ಆರೋಪಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಅವರು, ಕಲ್ಯಾಣ ಕರ್ನಾಟಕ ಸೇರಿದಂತೆ ಉತ್ತರ ಕರ್ನಾಟಕ ಭಾಗದ ರೈತರು ಭೂಮಿ ಹದಗೊಳಿಸಿ ಬಿತ್ತನೆಗಾಗಿ ಸಿದ್ಧತೆ ಮಾಡಿಕೊಂಡಿದ್ದಾರೆ. ಆದರೆ ರೈತ ಸಂಪರ್ಕ ಕೇಂದ್ರಗಳಲ್ಲಿ ಡಿಎಪಿ, ಯೂರಿಯಾ ಸೇರಿದಂತೆ ಅಗತ್ಯ ರಸಗೊಬ್ಬರ ಸಿಗದೆ ರೈತರು ಬೆಳಗ್ಗೆಯಿಂದಲೇ ಸರತಿ ಸಾಲಿನಲ್ಲಿ ನಿಲ್ಲುವ ಪರಿಸ್ಥಿತಿ ಎದುರಾಗಿದೆ ಎಂದು ದೂರಿದರು.
ರಿಯಾಯಿತಿ ದರದ ಬೀಜಗಳ ಕೊರತೆಯೂ ರೈತರನ್ನು ಸಂಕಷ್ಟಕ್ಕೆ ತಳ್ಳಿದೆ. ಸರ್ಕಾರಿ ವ್ಯವಸ್ಥೆಯಲ್ಲಿ ಸಮರ್ಪಕ ದಾಸ್ತಾನು ಇಲ್ಲದ ಕಾರಣ ರೈತರು ಅನಿವಾರ್ಯವಾಗಿ ಖಾಸಗಿ ಅಂಗಡಿಗಳ ಮೊರೆ ಹೋಗುತ್ತಿದ್ದಾರೆ. ಇದರ ಪರಿಣಾಮವಾಗಿ ಕೆಲವರು ಕಳಪೆ ಬೀಜ ಹಾಗೂ ನಕಲಿ ಕೀಟನಾಶಕಗಳ ವಂಚನೆಗೆ ಒಳಗಾಗುವ ಆತಂಕವಿದೆ. ಇದನ್ನು ತಡೆಯಬೇಕಾದ ಜಾಗೃತ ವ್ಯವಸ್ಥೆ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂದು ಆರೋಪಿಸಿದರು.
ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಅಗತ್ಯ ಪ್ರಮಾಣದಲ್ಲಿ ರಸಗೊಬ್ಬರ ಪೂರೈಕೆಯಾಗಿದ್ದರೂ, ರಾಜ್ಯ ಸರ್ಕಾರದ ಆಡಳಿತ ವೈಫಲ್ಯದಿಂದ ರೈತರಿಗೆ ಸಮಯಕ್ಕೆ ಸರಿಯಾಗಿ ತಲುಪಿಸುವ ವ್ಯವಸ್ಥೆ ಕುಸಿದಿದೆ ಎಂದು ಹೇಳಿದರು.
ಯಾದಗಿರಿ ಸೇರಿದಂತೆ ಕಲಬುರಗಿ, ರಾಯಚೂರು, ಬೀದರ್, ಕೊಪ್ಪಳ, ಬಳ್ಳಾರಿ, ಗದಗ, ಹಾವೇರಿ ಜಿಲ್ಲೆಗಳ ಹಲವು ರೈತ ಸಂಪರ್ಕ ಕೇಂದ್ರಗಳಲ್ಲಿ ಗೊಬ್ಬರದ ಸಮಸ್ಯೆ ಎದುರಾಗಿದೆ. ದಾಖಲೆಗಳಲ್ಲಿ ದಾಸ್ತಾನು ಇದೆ ಎಂದು ತೋರಿಸಲಾಗುತ್ತಿದ್ದರೂ, ನೆಲಮಟ್ಟದಲ್ಲಿ ರೈತರಿಗೆ ಅಗತ್ಯ ಪ್ರಮಾಣದ ಗೊಬ್ಬರ ಸಿಗುತ್ತಿಲ್ಲ ಎಂದು ರಾಚನಗೌಡ ಮುದ್ನಾಳ ಆರೋಪಿಸಿದರು.
“ಎಕರೆಗೆ ಒಂದೊAದು ಚೀಲ ಗೊಬ್ಬರ ನೀಡಿ ರೈತರನ್ನು ವಾಪಸ್ ಕಳುಹಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಬಿತ್ತನೆ ಸಮಯದಲ್ಲಿ ಗೊಬ್ಬರ ಸಿಗದಿದ್ದರೆ ರೈತನ ಇಡೀ ವರ್ಷದ ಶ್ರಮಕ್ಕೆ ಹೊಡೆತ ಬೀಳಲಿದೆ” ಎಂದು ಹೇಳಿದರು.
ರಾಜ್ಯ ಸರ್ಕಾರ ಆಂತರಿಕ ಗೊಂದಲಗಳಲ್ಲಿ ಮುಳುಗಿ ಕೃಷಿಯಂತಹ ಪ್ರಮುಖ ಇಲಾಖೆಯನ್ನು ನಿರ್ಲಕ್ಷಿಸಿದೆ. ಇದರ ಪರಿಣಾಮವಾಗಿ ಅಧಿಕಾರಿಗಳ ಮೇಲೆ ನಿಯಂತ್ರಣ ಕಡಿಮೆಯಾಗಿದ್ದು, ಕಾಳಸಂತೆಕೋರರು ಕೃತಕ ಅಭಾವ ಸೃಷ್ಟಿಸಿ ರೈತರನ್ನು ಸುಲಿಗೆ ಮಾಡುವ ಪರಿಸ್ಥಿತಿ ಬಂದಿದೆ ಎಂದು ಆರೋಪಿಸಿದರು.
ಜೂನ್ ತಿಂಗಳು ರೈತರ ಪಾಲಿಗೆ ಅತ್ಯಂತ ನಿರ್ಣಾಯಕ ಸಮಯವಾಗಿದ್ದು, ಬಿತ್ತನೆ ವಿಳಂಬವಾದರೆ ರೈತರ ಬದುಕು ಸಂಕಷ್ಟಕ್ಕೆ ಸಿಲುಕಲಿದೆ. ಸರ್ಕಾರ ರಾಜಕೀಯ ವಿಚಾರಗಳನ್ನು ಬದಿಗಿಟ್ಟು ಮೊದಲು ಅನ್ನದಾತನ ಸಮಸ್ಯೆಗಳಿಗೆ ಸ್ಪಂದಿಸಬೇಕು ಎಂದು ಒತ್ತಾಯಿಸಿದರು.
ಕೃಷಿ ಇಲಾಖೆಗೆ ತಕ್ಷಣ ಪೂರ್ಣಾವಧಿ ಹಾಗೂ ಸಮರ್ಥ ಸಚಿವರನ್ನು ನೇಮಿಸಬೇಕು. ಗೊಬ್ಬರ ಮತ್ತು ಬೀಜ ವಿತರಣೆಯಲ್ಲಿ ಪಾರದರ್ಶಕತೆ ತರಬೇಕು. ನಕಲಿ ಬೀಜ ಹಾಗೂ ಕಾಳಸಂತೆ ವಿರುದ್ಧ ಕಠಿಣ ಕ್ರಮ ಕೈಗೊಂಡು ಯಾದಗಿರಿ ಸೇರಿದಂತೆ ಉತ್ತರ ಕರ್ನಾಟಕದ ಜಿಲ್ಲೆಗಳಿಗೆ ತುರ್ತಾಗಿ ಗೊಬ್ಬರ ಮತ್ತು ಬೀಜ ಪೂರೈಕೆ ಮಾಡಬೇಕು ಎಂದು ಆಗ್ರಹಿಸಿದರು.
ರೈತರ ಸಮಸ್ಯೆಗಳಿಗೆ ಶೀಘ್ರ ಪರಿಹಾರ ನೀಡದಿದ್ದರೆ ರೈತರ ಹಿತರಕ್ಷಣೆಗೆ ಭಾರತೀಯ ಜನತಾ ಪಾರ್ಟಿ ಹೋರಾಟದ ಹಾದಿ ಹಿಡಿಯಲಿದೆ ಎಂದು ರಾಚನಗೌಡ ಮುದ್ನಾಳ ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.


























