
ಹುಳಿಯಾರು, ಆ. ೧೫- ಅಧಿಕ ಇಳುವರಿ ನೀಡುವ ’ಐಸಿಎಚ್-೫’ ತಳಿಯ ಹರಳು ಬೆಳೆಯುವುದರಿಂದ ಈ ಬರಗಾಲದಲ್ಲೂ ಕೈ ತುಂಬ ದುಡ್ಡು ನೋಡಬಹುದು ಎಂದು ಕೊನೆಹಳ್ಳಿ ಕೃಷಿ ವಿಜ್ಞಾನ ಕೇಂದ್ರದ ಬೇಸಾಯ ಶಾಸ್ತ್ರ ತಜ್ಞರಾದ ಡಾ.ತಸ್ಮಿಯಾ ಕೌಸಿರ್ ರೈತರಿಗೆ ಸಲಹೆ ನೀಡಿದರು.
ಪಟ್ಟಣದ ಎಪಿಎಂಸಿ ಆವರಣದಲ್ಲಿರುವ ಕಲ್ಪಮಿತ್ರ ರೈತ ಉತ್ಪಾದಕ ಕಂಪನಿಯ ಕಚೇರಿಯಲ್ಲಿ ಕೊನೆಹಳ್ಳಿ ವಿಜ್ಞಾನ ಕೇಂದ್ರದ ವತಿಯಿಂದ ಏರ್ಪಡಿಸಿದ್ದ ಉಚಿತ ಹರಳು ಬೀಜ ವಿತರಣೆ ಹಾಗೂ ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಐಸಿಎಚ್ ೫ ಹರಳು ಒಣ ಬೇಸಾಯಕ್ಕೆ ಸೂಕ್ತವಾದ ತಳಿಯಾಗಿದ್ದು ಕಡಿಮೆ ಮಳೆ ಮತ್ತು ಕಡಿಮೆ ಖರ್ಚಿನಲ್ಲಿ ಬೆಳೆಯಬಹುದಾದ ಬೆಳೆಯಾಗಿದ್ದು ಒಂದು ಎಕರೆ ಬಿತ್ತನೆಗೆ ೨ ಕೆಜಿ ಬೀಜ ಬೇಕಿದ್ದು ಎಕರೆಗೆ ೫ ರಿಂದ ೬ ಕ್ವಿಂಟಾಲ್ ಇಳುವರಿ ಪಡೆಯಬಹುದು. ಈ ತಳಿ ಯಾವುದೇ ಪ್ರಾಣಿ ಪಕ್ಷಿಗಳ ಕಾಟವಿಲ್ಲದೆ ಬೆಳೆಯಬಹುದಾಗಿದೆ ಎಂದು ಮಾಹಿತಿ ನೀಡಿದರು.
ಬಿತ್ತನೆಗೂ ಮುನ್ನ ಹರಳು ಬೀಜಗಳನ್ನು ರಾತ್ರಿ ೫ ರಿಂದ ೬ ಗಂಟೆಗಳ ಕಾಲ ನೀರಿನಲ್ಲಿ ನೆನೆಸಿಡಬೇಕು. ನೆನೆಸಿದ ಬೀಜಗಳನ್ನು ನೇರವಾಗಿ ಮಣ್ಣಿಗೆ ಹಾಕಬಾರದು. ಇದರಿಂದ ಶೀಲಿಂಧ್ರ (ಫಂಗಸ್) ಬಾಧೆ ಆವರಿಸುವ ಸಾಧ್ಯತೆ ಇರುತ್ತದೆ. ಆದ್ದರಿಂದ ಬೀಜಗಳನ್ನು ಕಾಟನ್ ಬಟ್ಟೆ ಅಥವಾ ನ್ಯೂಸ್ ಪೇಪರ್ ಮೇಲೆ ಹರಡಿ ೧ ರಿಂದ ೨ ಗಂಟೆಗಳ ಕಾಲ ಒಣಗಿಸಿ, ನಂತರ ಬಿತ್ತನೆ ಮಾಡಬೇಕು. ಸಾಮಾನ್ಯ ಬೀಜಗಳಲ್ಲಿ ನೂರಕ್ಕೆ ೭೦ ಬೀಜಗಳು ಮಾತ್ರ ಮೊಳಕೆಯೊಡೆದು ಉಳಿದದ್ದು ವ್ಯರ್ಥವಾಗುವ ಸಾಧ್ಯತೆ ಇರುತ್ತದೆ. ಹಾಗಾಗಿ ಒಂದು ಗುಣಿಗೆ ೨ ಬೀಜ ನೆಡಬೇಕು ಎಂದರು.
ಈ ಹರಳು ಬೀಜವನ್ನು ತೆಂಗಿನ ತೋಟ, ಅಡಿಕೆ ತೋಟಗಳ ಮಧ್ಯೆ ಹಾಗೂ ವಾಣಿಜ್ಯ ಬೆಳೆಗಳ ನಡುವಿನ ಬದುಗಳಲ್ಲಿಯೂ ಸುಲಭವಾಗಿ ಬೆಳೆಯಬಹುದು. ಸಾಲಿನಿಂದ ಸಾಲಿಗೆ ೩ ಅಡಿ ಹಾಗೂ ಗಿಡದಿಂದ ಗಿಡಕ್ಕೆ ೧.೫ ರಿಂದ ೨ ಅಡಿ ಅಂತರವಿರುವುದು ಸೂಕ್ತ. ಈ ತಳಿಗೆ ಅತಿಯಾದ ಗೊಬ್ಬರದ ಅಗತ್ಯವಿರುವುದಿಲ್ಲ. ಎಕರೆಗೆ ೨೫ ಕೆಜಿ ಡಿಎಪಿ ಹಾಗೂ ೧೫ ಕೆಜಿ ಪೊಟ್ಯಾಶ್ ರಸಗೊಬ್ಬರ ನೀಡಿದರೆ ಸಾಕಾಗುತ್ತದೆ. ಈ ತಳಿಯ ಗಿಡಗಳು ಸುಮಾರು ೨.೫ ರಿಂದ ೩ ಅಡಿ ಎತ್ತರ ಮಾತ್ರ ಬೆಳೆಯುತ್ತವೆ. ಬಿತ್ತನೆ ಮಾಡಿದ ೫ ತಿಂಗಳಿಗೆ ಕೊಯ್ಲಿಗೆ ಬರುತ್ತದೆ. ನಿಯಮಿತವಾಗಿ ಕಟಾವು ಮಾಡುತ್ತಿದ್ದರೆ ಗಿಡ ಹರಡಿಕೊಂಡು ಉತ್ತಮ ಇಳುವರಿ ನೀಡುತ್ತದೆ. ಒಂದೊಂದು ಗೊಂಚಲು ಸುಮಾರು ೨ ರಿಂದ ೨.೫ ಕೆಜಿ ತೂಕ ತೂಗುತ್ತದೆ. ಪ್ರಸ್ತುತ ಮಾರುಕಟ್ಟೆಯಲ್ಲಿ ಹರಳಿಗೆ ಉತ್ತಮ ಧಾರಣೆ ಇದ್ದು, ರೈತರು ಕಡಿಮೆ ವೆಚ್ಚದಲ್ಲಿ ಹೆಚ್ಚಿನ ಲಾಭಗಳಿಸಲು ಐಸಿಎಚ್-೫ ತಳಿ ಅತ್ಯಂತ ಸೂಕ್ತವಾಗಿದೆ ಎಂದು ಡಾ.ತಸ್ಮಿಯಾ ಕೌಸೀರ್ ತಿಳಿಸಿದ್ದಾರೆ.
ಕಾರ್ಯಕ್ರಮದಲ್ಲಿ ಕಲ್ಪಮಿತ್ರ ಎಫ್‌ಪಿಓದ ಅಧ್ಯಕ್ಷ ಎಂ.ರಾಮಯ್ಯ, ನಿರ್ದೇಶಕರುಗಳಾದ ಬಿ.ಶಿವಣ್ಣ, ಕೆ.ಭೀಮಯ್ಯ, ಶಿವಣ್ಣ, ಬಿ.ಟಿ.ಕರಿಯಪ್ಪ, ಸಿಇಓ ಬಿ.ಎನ್.ಗಿರೀಶ್ ಮತ್ತು ರೈತರಾದ ಕಲ್ಲಹಳ್ಳಿಪಾಳ್ಯ ಶೇಖರ್, ಯೋಗೀಶ್, ಶಂಕರ್, ಜಿ.ಬ್ರಹ್ಮಾನಂದ, ಎಸ್.ಜಿ.ರಂಗಸ್ವಾಮಿ, ಜಯರಾಮನಾಯ್ಕ, ಕೆ.ಸಿ.ಪಾಳ್ಯ ಮಂಜುನಾಥ್ ಭಾಗವಹಿಸಿದ್ದರು.


































