
ಹುಳಿಯಾರು, ಆ. ೧೫- ಸರ್ಕಾರ ಹಾಗೂ ಕೃಷಿ ಇಲಾಖೆಯಿಂದ ಸಿಗುವ ಸೌಲಭ್ಯಗಳು, ರಸಗೊಬ್ಬರ ಮತ್ತು ಇತರ ಸಹಾಯ ಧನಗಳನ್ನು ಪಡೆಯಲು ಪ್ರತಿಯೊಬ್ಬ ರೈತರು ತಮ್ಮ ಜಮೀನಿನ ಸರ್ವೆ ನಂಬರ್‌ಗಳನ್ನು ’ಫ್ರೂಟ್ಸ್’ ತಂತ್ರಾಂಶದೊಂದಿಗೆ ಲಿಂಕ್ ಮಾಡಿ, ಕಡ್ಡಾಯವಾಗಿ ಇ-ಕೆವೈಸಿ ಪೂರ್ಣಗೊಳಿಸಬೇಕು ಎಂದು ಕೊನೆಹಳ್ಳಿ ಕೃಷಿ ವಿಜ್ಞಾನ ಕೇಂದ್ರದ ಬೇಸಾಯ ಶಾಸ್ತ್ರ ತಜ್ಞರಾದ ಡಾ.ತಸ್ಮಿಯಾ ಕೌಸಿರ್ ರೈತರಲ್ಲಿ ಮನವಿ ಮಾಡಿದರು.
ಪಟ್ಟಣದ ಎಪಿಎಂಸಿ ಆವರಣದಲ್ಲಿರುವ ಕಲ್ಪಮಿತ್ರ ರೈತ ಉತ್ಪಾದಕ ಕಂಪನಿ ಕಚೇರಿಯಲ್ಲಿ ಏರ್ಪಡಿಸಿದ್ದ ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಪ್ರಸ್ತುತ ಕೃಷಿ ಕ್ಷೇತ್ರದಲ್ಲಿ ತಂತ್ರಜ್ಞಾನದ ಬಳಕೆ ಹೆಚ್ಚಾಗುತ್ತಿದ್ದು, ನೂತನವಾಗಿ ’ಫರ್ಟಿಲೈಸರ್ ಫ್ರೇಮ್‌ವರ್ಕ್ ಆಪ್ ಜಾರಿಗೆ ಬರಲಿದೆ. ರೈತರು ತಮ್ಮ ಆಧಾರ್ ಸಂಖ್ಯೆ ನಮೂದಿಸಿದ ತಕ್ಷಣ, ಅವರು ಆಧಾರ್‌ಗೆ ಲಿಂಕ್ ಮಾಡಿರುವ ಜಮೀನಿನ ವಿಸ್ತೀರ್ಣ (ಉದಾಹರಣೆಗೆ ೨ ಎಕರೆ ಅಥವಾ ೫ ಎಕರೆ) ಹಾಗೂ ಅಲ್ಲಿ ಬೆಳೆದಿರುವ ಬೆಳೆಗಳ ವಿವರ ಪ್ರದರ್ಶನಗೊಳ್ಳುತ್ತದೆ. ಇದರ ಆಧಾರದ ಮೇಲೆ ರೈತರಿಗೆ ಆಯಾ ಬೆಳೆಗೆ ಅಗತ್ಯವಿರುವಷ್ಟು ಪ್ರಮಾಣದಲ್ಲಿ ರಸಗೊಬ್ಬರವನ್ನು ಮಾತ್ರ ನಿಗದಿಪಡಿಸಿ ನೀಡಲಾಗುತ್ತದೆ. ಅತಿಯಾದ ರಾಸಾಯನಿಕ ಗೊಬ್ಬರ ಬಳಕೆಯನ್ನು ತಡೆಯಲು ಹಾಗೂ ಅಗತ್ಯವಿರುವಷ್ಟೇ ಗೊಬ್ಬರ ಸಿಗುವಂತೆ ಮಾಡಲು ಈ ವ್ಯವಸ್ಥೆ ಸಹಕಾರಿಯಾಗಲಿದೆ ಎಂದರು.
ಈ ಆಪ್ ಮೂಲಕ ರೈತರು ಗ್ಯಾಸ್ ಸಿಲಿಂಡರ್ ಕಾಯ್ದಿರಿಸುವ ರೀತಿಯಲ್ಲೇ ತಮಗೆ ಬೇಕಾದ ಗೊಬ್ಬರವನ್ನು ಮುಂಗಡವಾಗಿ ಬುಕ್ ಮಾಡಬಹುದು. ಆಪ್‌ನಲ್ಲಿ ಹತ್ತಿರದ ಗೊಬ್ಬರದ ಸಾಲು, ಮಳಿಗೆಯನ್ನು ಆಯ್ಕೆ ಮಾಡಿಕೊಂಡಾಗ, ಆ ಮಳಿಗೆಯಲ್ಲಿ ರೈತನ ಹೆಸರಿಗೆ ೩ ದಿನಗಳ ಕಾಲ ಗೊಬ್ಬರ ಮೀಸಲಿಡಲಾಗುತ್ತದೆ. ರೈತರು ಅಲ್ಲಿಗೆ ತೆರಳಿ ಹಣ ಪಾವತಿಸಿ ಗೊಬ್ಬರವನ್ನು ಪಡೆದುಕೊಳ್ಳಬಹುದು ಎಂದು ವಿವರಿಸಿದರು.
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸಾವಯವ ಹಾಗೂ ನೈಸರ್ಗಿಕ ಕೃಷಿಗೆ ಹೆಚ್ಚು ಆದ್ಯತೆ ನೀಡುತ್ತಿದ್ದು, ಮಣ್ಣಿನ ಫಲವತ್ತತೆ ಮತ್ತು ಆರೋಗ್ಯ ರಕ್ಷಣೆಗೆ ರೈತರು ರಾಸಾಯನಿಕ ಗೊಬ್ಬರಗಳ ಮೇಲಿನ ಅವಲಂಬನೆ ಕಡಿಮೆ ಮಾಡಬೇಕು. ನೈಸರ್ಗಿಕ ಹಾಗೂ ಸಾವಯವ ಕೃಷಿ ಪದ್ಧತಿಗಳನ್ನು ಅಳವಡಿಸಿಕೊಳ್ಳುವುದು ಇಂದಿನ ಅಗತ್ಯವಾಗಿದೆ ಎಂದು ಅವರು ತಿಳಿಸಿದರು.
ಕಾರ್ಯಕ್ರಮದಲ್ಲಿ ಕಲ್ಪಮಿತ್ರ ಎಫ್‌ಪಿಓ ಅಧ್ಯಕ್ಷ ಎಂ.ರಾಮಯ್ಯ, ನಿರ್ದೇಶಕರುಗಳಾದ ಬಿ.ಶಿವಣ್ಣ, ಕೆ.ಭೀಮಯ್ಯ್ಪ, ಶಿವಣ್ಣ, ಬಿ.ಟಿ.ಕರಿಯಪ್ಪ, ಸಿಇಓ ಬಿ.ಎನ್.ಗಿರೀಶ್ ಮತ್ತು ರೈತರಾದ ಕಲ್ಲಹಳ್ಳಿಪಾಳ್ಯ ಶೇಖರ್, ಯೋಗೀಶ್, ಶಂಕರ್, ಜಿ.ಬ್ರಹ್ಮಾನಂದ, ಎಸ್.ಜಿ.ರಂಗಸ್ವಾಮಿ, ಜಯರಾಮನಾಯ್ಕ, ಕೆ.ಸಿ.ಪಾಳ್ಯ ಮಂಜುನಾಥ್ ಭಾಗವಹಿಸಿದ್ದರು.


































