Home ಜಿಲ್ಲೆ ತುಮಕೂರು ಮಾದಕ ವಸ್ತುಗಳ ದುಶ್ಚಟದಿಂದ ದೂರವಿರಲು ಸಲಹೆ

ಮಾದಕ ವಸ್ತುಗಳ ದುಶ್ಚಟದಿಂದ ದೂರವಿರಲು ಸಲಹೆ

ಹುಳಿಯಾರು, ಆ. ೧೫- ಯುವ ಜನತೆ ದೇಶದ ಶಕ್ತಿಯಾಗಿದ್ದು, ಮಾದಕ ವಸ್ತುಗಳ ದುಶ್ಚಟದಿಂದ ದೂರವಿರವಿದ್ದಾಗ ಸದೃಢ ಸಮಾಜ ನಿರ್ಮಾಣ ಸಾಧ್ಯ ಎಂದು ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಮುಖ್ಯಸ್ಥೆ ಗೀತಕ್ಕ ಹೇಳಿದರು.


ಹೋಬಳಿಯ ಕೆಂಕೆರೆ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ವತಿಯಿಂದ ಏರ್ಪಡಿಸಿದ್ದ ‘ನಶಾಮುಕ್ತರಾಗುವ ಮಹಾ ಅಭಿಯಾನ’ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.


ವಿವಿಧ ಇಲಾಖೆಗಳ ಸಹಯೋಗದಲ್ಲಿ ಮಾದಕ ವಸ್ತುಗಳ ದುಷ್ಪರಿಣಾಮಗಳ ಕುರಿತು ಜಾಗೃತಿ ಮೂಡಿಸಲಾಗುತ್ತಿದ್ದರೂ ಪ್ರಸ್ತುತ ಯುವಜನತೆ ಮಾದಕ ವಸ್ತುಗಳ ದಾಸರಾಗುತ್ತಿರುವುದು ಬಹಳ ವಿಪಯಾರ್ಸದ ಸಂಗತಿಯಾಗಿದೆ. ಈ ನಿಟ್ಟಿನಲ್ಲಿ ಮಕ್ಕಳಿರುವಾಗಲೇ ಅರಿವು ಮೂಡಿಸಿದರೆ ಒಳಿತು ಎಂದು ಈಶ್ವರೀಯ ವಿಶ್ವವಿದ್ಯಾಲಯದಿಂದ ಈ ಆಚರಣೆ ಮಾಡಲಾಗುತ್ತಿದೆ ಎಂದು ಹೇಳಿದರು.


ಮಾದಕ ವಸ್ತುಗಳ ಸೇವನೆ ಅತ್ಯಂತ ಅಪಾಯಕಾರಿಯಾಗಿದೆ. ಕ್ಷಣಿಕ ಸಂತೋಷಕ್ಕೆ ಮಾದಕ ವಸ್ತುಗಳ ವ್ಯಸನಕ್ಕೆ ಒಳಗಾಗುತ್ತಿರುವುದು ಹೆಚ್ಚಾಗಿದೆ. ವಿದ್ಯಾರ್ಥಿಗಳು ಮಾದಕ ವಸ್ತುಗಗಳಿಂದ ದೂರ ಉಳಿದು, ಉತ್ತಮ ಪುಸ್ತಕಗಳ ಓದು ಹಾಗೂ ಕ್ರೀಡೆಗಳಲ್ಲಿ ತೊಡಗುವ ಮೂಲಕ ಉತ್ತಮ ಹವ್ಯಾಸವನ್ನು ರೂಢಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.


ಕಾರ್ಯಕ್ರಮದಲ್ಲಿ ಆಶ್ರಮದ ಪರಿವಾರದವರಾದಂತಹ ಚಂದನಕ್ಕ, ಪಾರ್ವತಕ್ಕ, ಆರತಿ ಅಕ್ಕ, ರತ್ನಕ್ಕ, ಲಕ್ಷ್ಮಿ ಅಕ್ಕ, ಸುಜಾತಕ್ಕ, ರಾಮಚಂದ್ರಣ್ಣ, ಶಂಕರ ಲಿಂಗಪ್ಪ, ಅಜಯ್, ನಿಜಲಿಂಗಪ್ಪಣ್ಣ, ನಾಗರಾಜಣ್ಣ ಮತ್ತಿತರರು ಭಾಗವಹಿಸಿದ್ದರು.