
ಬೆಂಗಳೂರು, ನ. ೧೨- ನಾನು ಯಾವತ್ತೂ ಯಾರಿಗೂ ಕೆಟ್ಟದ್ದನ್ನು ಬಯಸಲ್ಲ ಎಂಬ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿಕೆಗೆ ತಿರುಗೇಟು ನೀಡಿರುವ ಕೇಂದ್ರ ಸಚಿವ ಹಾಗೂ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು, ಅಯ್ಯೋ ಪಾಪ, ಡಿ.ಕೆ. ಶಿವಕುಮಾರ್ ಯಾರಿಗೂ ಕೆಟ್ಟದ್ದನ್ನು ಬಯಸಿಯೇ ಇಲ್ಲ ಎಂದು ಲೇವಡಿ ಮಾಡಿದ್ದಾರೆ.
ಬೆಂಗಳೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಏನೇನು ಮಾತನಾಡಿದ್ದಾರೆ ಎಂದು ನಾನು ನೋಡಿದ್ದೇನೆ. ಅವರ ಮಾತು, ಕೃತಿಯ ಬಗ್ಗೆ ಚರ್ಚೆ ಬೇಡ. ಎಲ್ಲದ್ದಕ್ಕೂ ನಾನು ಉತ್ತರ ಕೊಡುವುದಕ್ಕೆ ಹೋಗಲ್ಲ ಎಂದರು.
ಹಿಂದೆ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರವಿದ್ದಾಗ ಕುಮಾರಸ್ವಾಮಿ ಅವರಿಗೆ ಕೇಡು ಬಯಸಿಲ್ಲ ಎಂಬ ಡಿಕೆಶಿ ಹೇಳಿಕೆಗೆ, ಅಯ್ಯೋ ಪಾಪ, ಅವರು ಯಾರಿಗೂ ಕೇಡು ಬಯಸಲ್ಲ ಎಂದು ವ್ಯಂಗ್ಯವಾಡಿದರು.
ನಾನು ಮುಖ್ಯಮಂತ್ರಿಯಾಗಿದ್ದಾಗ ಡಿ.ಕೆ. ಶಿವಕುಮಾರ್ ಅವರಿಗೆ ಏನು ಸಹಾಯವಾಗಿದೆ, ಅವರಿಂದ ನನಗೆ ಏನು ಸಹಾಯವಾಗಿದೆ ಎಲ್ಲವೂ ಇತಿಹಾಸ. ಜೆಡಿಎಸ್ ಪಕ್ಷವನ್ನು ಮುಗಿಸಲು ಹೊರಟವರು ಡಿ.ಕೆ. ಶಿವಕುಮಾರ್ ಎಂದು ಕಿಡಿಕಾರಿದರು.
ಜೆಡಿಎಸ್ ಪಕ್ಷದ ೧೨ ಶಾಸಕರನ್ನು ಕೊಂಡುಕೊಂಡಿದ್ದೇನೆ ಎಂದು ಹೇಳಿದ್ದರು. ಅವರು ನನಗೆ ಒಳ್ಳೆಯದನ್ನು ಬಯಸುತ್ತಾರಾ, ಅವರು ಅಯ್ಯೋ ಕೆಟ್ಟದ್ದನ್ನು ಬಯಸಿಯೇ ಇಲ್ಲ ಎಂದು ಕುಮಾರಸ್ವಾಮಿ ಲೇವಡಿ ಮಾಡಿ, ಅವರು ಏನೇನು ಮಾಡಿದರು ಎಲ್ಲವೂ ಗೊತ್ತಿದೆ. ಮುಂದೆ ಜನ ತೀರ್ಮಾನ ಮಾಡುತ್ತಾರೆ ಎಂದರು.
ಕಾಂಗ್ರೆಸ್ನಲ್ಲಿ ಅಸಮಾಧಾನಗೊಂಡಿರುವ ೨೫-೩೦ ಕ್ಕೂ ಹೆಚ್ಚು ಶಾಸಕರು ಜೆಡಿಎಸ್ಗೆ ಬರಲು ಸಿದ್ಧರಿದ್ದಾರೆ ಎಂಬ ಸುದ್ದಿಗಳಿವೆಯಲ್ಲ ಎಂಬ ಪ್ರಶ್ನೆಗೆ ಉತ್ತರ ನೀಡಿದ ಕುಮಾರಸ್ವಾಮಿ, ನಾನು ಅವರು ಬರುತ್ತಾರೆ, ಇವರು ಬರುತ್ತಾರೆ ಎಂದು ತಲೆ ಕೆಡಿಸಿಕೊಳ್ಳಲ್ಲ. ನನ್ನ ಪಕ್ಷದ ಸಂಘಟನೆಯಾಗಬೇಕು. ರಾಜಕೀಯವಾಗಿ ಒಳ್ಳೆಯದು ಮಾಡಲು ಪ್ರಯತ್ನ ಪಡುತ್ತಿದ್ದೇನೆ ಎಂದರು.
ಮುಂದೆನೂ ನಾನು ರಾಜಕೀಯದಲ್ಲಿ ಸಾಧ್ಯವಾದಷ್ಟು ಒಳ್ಳೆಯದನ್ನು ಮಾಡುತ್ತೇನೆ. ಇವತ್ತೂ ಅದನ್ನೇ ಮಾಡುತ್ತೇನೆ ಎಂದು ಹೇಳಿದರು.
ಹಿರಿಯೂರು ಉಪ ಚುನಾವಣೆ ಅಭ್ಯರ್ಥಿ ಆಯ್ಕೆ ೨-೩ ದಿನಗಳಲ್ಲಿ ಅಂತಿಮಗೊಳಿಸಲಾಗುವುದು ಎಂದು ಹೇಳಿದರು.
ಕೇಂದ್ರದಿಂದ ಬರ ಪರಿಹಾರ ಕಾರ್ಯಗಳಿಗೆ ಎನ್ಡಿಆರ್ಎಫ್ ಅಡಿ ಹಣ ಬರುತ್ತಿಲ್ಲ ಎಂಬ ರಾಜ್ಯ ಸರ್ಕಾರದ ಟೀಕೆಗಳಿಗೆ ಪ್ರತಿಕ್ರಿಯಿಸಿದ ಅವರು,ನಾನು ಹಿಂದೆ ಒಂದು ಬಾರಿ ಮುಖ್ಯಮಂತ್ರಿಯಾಗಿದ್ದಾಗ ಕೇಂದ್ರದಲ್ಲಿ ಯುಪಿಎ ಸರ್ಕಾರ ಇತ್ತು. ೨ನೇ ಬಾರಿ ಮುಖ್ಯಮಂತ್ರಿಯಾಗಿದ್ದಾಗ ಕೇಂದ್ರದಲ್ಲಿ ಬಿಜೆಪಿ ಸರ್ಕಾರವಿತ್ತು ಆಗ ನಾನು ಎಂದೂ ಕೇಂದ್ರದ ಕಡೆ ಬೊಟ್ಟು ಮಾಡದೆ ರಾಜ್ಯದಲ್ಲಿ ಜನ ಕಲ್ಯಾಣ ಕಾರ್ಯಗಳಿಗೆ ಹಣ ಒದಗಿಸಿದ್ದೆ. ಈಗಲೂ ಸಹ ದುಂದು ವೆಚ್ಚಗಳಿಗೆ ಕಡಿವಾಣ ಹಾಕಿ ರಾಜ್ಯ ಸರ್ಕಾರ ಕೇಂದ್ರವನ್ನು ದೂಷಿಸುವುದನ್ನು ಬಿಟ್ಟು ಬರಪರಿಹಾರ ಕಾರ್ಯಗಳಿಗೆ ಹಣ ಒದಗಿಸಲಿ. ಕೇಂದ್ರ ಸರ್ಕಾರವನ್ನು ಟೀಕೆ ಮಾಡುತ್ತಾ ಕೂರುವುದರಲ್ಲಿ ಅರ್ಥವಿಲ್ಲ ಎಂದರು.
ಬರ ಪರಿಹಾರವಾಗಿ ರೈತರಿಗೆ ೧೦೦೦, ೧೫೦೦ ರೂ.ಗಳನ್ನು ಬಿಡುಗಡೆ ಮಾಡಿರುವುದಕ್ಕೆ ಅಸಮಾಧಾನ ಹೊರಹಾಕಿದ ಕುಮಾರಸ್ವಾಮಿ ಅವರು, ರೈತರೆನು ಭಿಕ್ಷುಕರಾ.ಈ ರೀತಿ ಹಣ ಕೊಟ್ಟಿದ್ದಾರಲ್ಲಾ. ಇದು ಸರಿಯೇ ಎಂದು ಪ್ರಶ್ನಿಸಿ, ಏನೋ ತಪ್ಪಾಗಿದೆ ಸರಿಪಡಿಸುತ್ತೇವೆ ಎಂದು ಸರ್ಕಾರ ಹೇಳಿದೆ. ನೋಡೋಣ ಏನು ಸರಿಪಡಿಸುತ್ತಾರೆ ಎಂದರು.























