Home ಜಿಲ್ಲೆ ಕಲಬುರಗಿ 58 ಕೋಟಿ ರೂ. ವೆಚ್ಚದಲ್ಲಿ ಕಲಬುರಗಿಯಲ್ಲಿಹೊಸ ಕೇಂದ್ರ ಬಸ್ ನಿಲ್ದಾಣ ನಿರ್ಮಾಣ: ಅರುಣಕುಮಾರ ಪಾಟೀಲ

58 ಕೋಟಿ ರೂ. ವೆಚ್ಚದಲ್ಲಿ ಕಲಬುರಗಿಯಲ್ಲಿಹೊಸ ಕೇಂದ್ರ ಬಸ್ ನಿಲ್ದಾಣ ನಿರ್ಮಾಣ: ಅರುಣಕುಮಾರ ಪಾಟೀಲ

ಕಲಬುರಗಿ,ನ.12-ಸುಮಾರು 58 ಕೋಟಿ ರೂಪಾಯಿ ವೆಚ್ಚದಲ್ಲಿ ಕಲಬುರಗಿಯಲ್ಲಿ ಹೊಸ ಕೇಂದ್ರ ಬಸ್ ನಿಲ್ದಾಣ ನಿರ್ಮಾಣ ಮಾಡಲಾಗುವುದು ಎಂದು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಅಧ್ಯಕ್ಷ ಅರುಣಕುಮಾರ ಎಂ.ವೈ.ಪಾಟೀಲ ತಿಳಿಸಿದರು.
ನಿಗಮದ ಕಚೇರಿಯಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಿರುವ ಕೇಂದ್ರ ಬಸ್ ನಿಲ್ದಾಣ ಸುಮಾರು 50 ವರ್ಷಗಳಷ್ಟು ಹಳೆಯದಾಗಿದ್ದು, ಈ ಬಸ್ ನಿಲ್ದಾಣವನ್ನು ಕೆಡವಿ ಅದೇ ಜಾಗದಲ್ಲಿ ಹೊಸ ಬಸ್ ನಿಲ್ದಾಣ ನಿರ್ಮಾಣ ಮಾಡಲಾಗುವುದು ಎಂದು ತಿಳಿಸಿದರು.
ಕಲಬುರಗಿಯಲ್ಲಿ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಆಡಳಿತ ಕಚೇರಿಯನ್ನು 20 ಕೋಟಿ ವೆಚ್ಚದಲ್ಲಿ ನಿರ್ಮಿಸುವ ಕಾಮಗಾರಿಯ ಟೆಂಡರ್ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದು ತಿಳಿಸಿದರು.
4 ಕಡೆ ಹೊಸ ಬಸ್ ನಿಲ್ದಾಣ :
ವಾಡಿಯಲ್ಲಿ ಹೊಸ ಬಸ್ ನಿಲ್ದಾಣ ನಿರ್ಮಣಕ್ಕೆ 4 ಎಕರೆ ಜಮೀನು ಗುರುತಿಸಲಾಗಿದೆ. ಅಫಜಲಪುರದಲ್ಲಿ 3 ಎಕರೆಯಲ್ಲಿ ಹೊಸ ಬಸ್ ನಿಲ್ದಾಣ ನಿರ್ಮಿಸಲಾಗುವುದು, ಅಲ್ಲಿರುವ ಹಳೆಯ ಬಸ್ ನಿಲ್ದಾಣದಲ್ಲಿ ಶಾಪಿಂಗ್ ಕಾಂಪ್ಲೆಕ್ಸ್ ನಿರ್ಮಿಸಲಾಗುವುದು, ವಿಶ್ವವಿದ್ಯಾಲಯ, ಜೇವರ್ಗಿ ರಸ್ತೆ, ಅಳಂದ ರಸ್ತೆಯ ಕೃಷಿ ಮಹಾವಿದ್ಯಾಲಯ, ಗಂಜ್ ಪ್ರದೇಶದ ಗ್ರಾಮೀಣ ಪೊಲೀಸ್ ಠಾಣೆ ಎದರು ಸೇರಿದಂತೆ 4 ಕಡೆ ಹೊಸ ಬಸ್ ನಿಲ್ದಾಣಗಳನ್ನು ನಿರ್ಮಾಣ ಮಾಡಲಾಗುವುದು ಎಂದು ತಿಳಿಸಿದರು.
400 ಹೊಸ ಬಸ್ :
ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮಕ್ಕೆ ಹೊಸ ಬಸ್‍ಗಳ ಅಗತ್ಯವಿದ್ದು, ಇನ್ನೂ 2-3 ತಿಂಗಳಲ್ಲಿ 400 ಹೊಸ ಬಸ್‍ಗಳು ಬರಲಿವೆ. ಟೆಂಡರ್ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದು ಅರುಣಕುಮಾರ ಪಾಟೀಲ ತಿಳಿಸಿದರು.
ರಾಜ್ಯದ 4 ಸಾರಿಗೆ ನಿಗಮಗಳಲ್ಲಿ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ಉತ್ತಮವಾಗಿ ಕೆಲಸ ಮಾಡುತ್ತಿದೆ. ಬೇರೆ ನಿಗಮಗಳಿಗೆ ಹೋಲಿಸಿದರೆ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ಸಬಲೀಕರಣವಾಗಿದೆ ಎಂದರು.
ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮಕ್ಕೆ ಸರ್ಕಾರದಿಂದ 1185 ಕೋಟಿ ಬಾಕಿ ಬರಬೇಕಿದೆ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ದೇವಲಗಾಣಗಾಪುರ ಅಭಿವೃದ್ಧಿಗೆ 50 ಕೋಟಿ:
ಜಿಲ್ಲೆಯ ಅಫಜಲಪುರ ತಾಲ್ಲೂಕಿನ ಸುಕ್ಷೇತ್ರ ದೇವಲಗಾಣಗಾಪುರ ಅಭಿವೃದ್ಧಿಗೆ ಸರ್ಕಾರ 50 ಕೋಟಿ ರೂಪಾಯಿ ಬಿಡುಗಡೆ ಮಾಡಿದೆ. ಸಂಗಮದಲ್ಲಿ 1 ಕೋಟಿ ರೂಪಾಯಿ ವೆಚ್ಚದಲ್ಲಿ ಶಾಪಿಂಗ್ ಕಾಂಪ್ಲೆಕ್ಸ್ ನಿರ್ಮಾಣ ಮಾಡಿ ಅಲ್ಲಿನ ವ್ಯಾಪಾರಸ್ತರಿಗೆ ಅನುಕೂಲ ಮಾಡಿಕೊಡಲಾಗುವುದು ಎಂದು ಅವರು ತಿಳಿಸಿದರು.
ವಿವಿಧ ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಪ್ರಾರಂಭ:
ಸ್ಥಳೀಯ ವೃಂದದ 16 ಅಧಿಕಾರಿ (ದರ್ಜೆ-2),3 ಮೇಲ್ವಿಚಾರಕ ಹುದ್ದೆ ದರ್ಜೆ-3 ಮತ್ತು 144 ಮೇಲ್ವಿಚಾರಕೇತರ ದಜೆ-3 ಹುದ್ದೆಗಳು ಸೇರಿ ಒಟ್ಟು 163 ಹುದ್ದೆಗಳ ನೇಮಕಾತಿ ಪ್ರಕ್ರಿಯೆಯನ್ನು ಪ್ರಾರಂಭಿಸಲಾಗಿದೆ.
ನಿಗಮದಲ್ಲಿ ಖಾಲಿ ಇರುವ ಸ್ಥಳೀಯ ವೃಂದದ 32 ಅಧಿಕಾರಿ (ದರ್ಜೆ-2) ಮತ್ತು 104 ಮೇಲ್ವಿಚಾರಕ (ದರ್ಜೆ-3) ಮತ್ತು 2453 ಮೇಲ್ವಿಚಾರಕೇತರ (ದರ್ಜೆ-3) ವೃಂದದ ವಿವಿಧ ಹುದ್ದೆಗಳು ಸೇರಿದಂತೆ ಒಟ್ಟು 2589 ಹುದ್ದೆಗಳ ಹಾಗೂ ನಿಗಮದಲ್ಲಿ ಖಾಲಿ ಇರುವ ಉಳಿಗೆ ಮೂಲ ವೃಂದದ 14 ಅಧಿಕಾರಿ (ದಜೆ-2) ಮತ್ತು 15 ಮೇಲ್ವಿಚಾರಕ (ದರ್ಜೆ-3) ಮತ್ತು 452 ಮೇಲ್ವಿಚಾರಕೇತರ (ದರ್ಜೆ-3) ವೃಂದದ ವಿವಿಧ ಹುದ್ದೆಗಳು ಸೇರಿದಂತೆ ಒಟ್ಟು 481 ಹುದ್ದೆಗಳ ನೇಮಕಾತಿಗೆ ಅನುಮತಿ ಕೋರಲಾಗಿದೆ ಎಂದು ತಿಳಿಸಿದರು.
ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಅಧ್ಯಕ್ಷರಾಗಿ ಅವರು ಅಧಿಕಾರ ವಹಿಸಿಕೊಂಡ ಮೇಲೆ ಒಂದು ವರ್ಷದ ಅವಧಿಯಲ್ಲಿ ನಿಗಮದ ವತಿಯಿಂದ ಕೈಗೊಂಡಿರುವ ಅಭಿವೃದ್ಧಿ ಕಾರ್ಯಗಳು, ಸಾಧನೆ ಮತ್ತು ಸಾರ್ವಜನಿಕರಿಗೆ ಕಲ್ಪಿಸಿರುವ ಸಾರಿಗೆ ಸೌಲಭ್ಯಗಳ ಬಗ್ಗೆ ಅವರು ಇದೇ ವೇಳೆ ಸವಿಸ್ತಾರವಾಗಿ ಅವರು ವಿವರಿಸಿದರು.