Home ಜಿಲ್ಲೆ ತುಮಕೂರು ಪರಿಸರ ರಕ್ಷಣೆ ನಮ್ಮೆಲ್ಲರ ಹೊಣೆ: ಮೀನಾಕ್ಷಿ

ಪರಿಸರ ರಕ್ಷಣೆ ನಮ್ಮೆಲ್ಲರ ಹೊಣೆ: ಮೀನಾಕ್ಷಿ

ಹುಳಿಯಾರು, ಜೂ. ೧೩- ಮನುಷ್ಯ ತನ್ನ ಅತಿಯಾದ ಆಸೆಯಿಂದ ಪರಿಸರವನ್ನು ನಾಶ ಮಾಡುತ್ತಿದ್ದು, ಇದರ ಪರಿಣಾಮವಾಗಿ ಜಾಗತಿಕ ತಾಪಮಾನ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ ಎಂದು ಸ್ಥಳೀಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಮೀನಾಕ್ಷಿ ಜೆ. ಕಳವಳ ವ್ಯಕ್ತಪಡಿಸಿದರು.


ಚಿಕ್ಕಬಿದರೆ ವಲಯದ ಚಿಕ್ಕಬಿದರೆ ಕಾರ್ಯ ಕ್ಷೇತ್ರದಲ್ಲಿ ಧರ್ಮಸ್ಥಳ ಗ್ರಾಮಾಭಿದ್ಧಿ ಯೋಜನೆ ವತಿಯಿಂದ ಏರ್ಪಡಿಸಿದ್ದ ’ಪರಿಸರ ಜಾಗೃತಿ ಕಾರ್ಯಕ್ರಮ’ದಲ್ಲಿ ಭಾಗವಹಿಸಿ ಅವರು ಮಾತನಾಡಿದರು.


ಪರಿಸರಕ್ಕೂ ಮನುಷ್ಯನಿಗೂ ಅವಿನಾಭಾವ ಸಂಬಂಧವಿದೆ. ಆದರೆ ಪ್ರಸ್ತುತ ಮಾನವನು ಪ್ರಕೃತಿಯನ್ನು ಹಾಳುಗೆಡವಿ, ವಾಯು ಮಾಲಿನ್ಯ ಉಂಟು ಮಾಡುತ್ತಿದ್ದಾನೆ. ಇದರಿಂದಾಗಿ ಹತ್ತು ಹಲವು ಕಾಯಿಲೆಗಳು ಮನುಷ್ಯನನ್ನು ಕಾಡುತ್ತಿವೆ. ಪ್ಲಾಸ್ಟಿಕ್ ಬಳಕೆಯಿಂದ ಪರಿಸರದ ಮೇಲೆ ದುಷ್ಪರಿಣಾಮ ಬೀರುತ್ತಿದ್ದು, ಇದೇ ರೀತಿ ಪರಿಸರ ನಾಶ ಮುಂದುವರಿದರೆ ಮಾನವನ ಅಳಿವು ದೂರವಿಲ್ಲ ಎಂದು ಅವರು ಎಚ್ಚರಿಸಿದರು.


ಶಾಲೆಯ ಸಹ ಶಿಕ್ಷಕ ನರಸಪ್ಪ ಮಾತನಾಡಿ, ಪರಿಸರ ಸಂರಕ್ಷಣೆ ನಮ್ಮೆಲ್ಲರ ಜವಾಬ್ದಾರಿಯಾಗಿದೆ. ’ಮನೆಗೊಂದು ಮರ, ಊರಿಗೊಂದು ವನ’ ಎಂಬ ನಾಣ್ಣುಡಿಯಂತೆ ಪ್ರತಿಯೊಬ್ಬರೂ ಗಿಡಗಳನ್ನು ನೆಡಬೇಕು.

ಮುಂದಿನ ಪೀಳಿಗೆಗೆ ಶುದ್ಧವಾದ ಗಾಳಿ, ಬೆಳಕು ಮತ್ತು ನೀರು ಸಿಗಬೇಕಾದರೆ ಇಂದೇ ನಾವು ಎಚ್ಚೆತ್ತುಕೊಳ್ಳಬೇಕು. ತೀರಾ ಅಗತ್ಯವಿರುವಷ್ಟೇ ನೀರನ್ನು ಬಳಸಿ, ಜಲ ಮೂಲಗಳನ್ನು ರಕ್ಷಿಸಬೇಕು ಎಂದು ಕರೆ ನೀಡಿದರು.


ಈ ಸಂದರ್ಭದಲ್ಲಿ ಶಾಲೆಯ ಸಹ ಶಿಕ್ಷಕಿಯರಾದ ಗೀತಾ, ಲತಾ, ಮೇಲ್ವಿಚಾರಕಿ ಉಮಾದೇವಿ, ಸೇವಾಪ್ರತಿನಿಧಿ ರತ್ನಮ್ಮ ಮತ್ತಿತರರು ಉಪಸ್ಥಿತರಿದ್ದರು.