
ಮಧುಗಿರಿ, ಜು. ೧೦- ಯಾವುದೇ ಅರ್ಹ ಮತದಾರರು ಮತದಾರರ ಪಟ್ಟಿಯಿಂದ ಹೊರಗುಳಿಯದಂತೆ ನೋಡಿಕೊಳ್ಳಬೇಕು ಎಂದು ಮಾಜಿ ಸಚಿವ ಹಾಗೂ ಶಾಸಕ ಕೆ.ಎನ್. ರಾಜಣ್ಣ ಹೇಳಿದರು.
ತಾಲ್ಲೂಕಿನ ಐ.ಡಿ.ಹಳ್ಳಿ ಹೋಬಳಿಯ ದೊಡ್ಡದಾಳವಟ್ಟ ಶ್ರೀ ಲಕ್ಷ್ಮೀನರಸಿಂಹ ಸ್ವಾಮಿ ದೇವಸ್ಥಾನದಲ್ಲಿ ದೇವಸ್ಥಾನ ಸಮಿತಿ ವತಿಯಿಂದ ಏರ್ಪಡಿಸಿದ್ದ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಮತದಾರರ ಪಟ್ಟಿಯು ಅತ್ಯಮೂಲ್ಯವಾಗಿದ್ದು, ಮತದಾರರ ಪಟ್ಟಿಯಿಂದ ಹೊರಗುಳಿದರೆ ಯಾವುದೇ ಚುನಾವಣೆಯಲ್ಲಿ ಮತದಾನ ಮಾಡಲು ಸಾಧ್ಯವಾಗುವುದಿಲ್ಲ. ನೀವು ಯಾರಿಗಾದರೂ ಮತ ಹಾಕಿಕೊಳ್ಳಿ, ಆದರೆ ಕಡ್ಡಾಯವಾಗಿ ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸಿ. ಮತದಾರರ ಪಟ್ಟಿಯಲ್ಲಿ ಹೆಸರಿಲ್ಲದಿದ್ದರೆ ಸರ್ಕಾರದ ಯಾವುದೇ ಸವಲತ್ತುಗಳು ನಿಮಗೆ ಸಿಗುವುದಿಲ್ಲ. ಈಗಾಗಲೇ ಪಕ್ಷದ ಹಲವು ಮುಖಂಡರುಗಳಿಗೆ ಸೂಚನೆ ನೀಡಿದ್ದು, ಜು. ೨೦ ರೊಳಗೆ ಮತದಾರರ ಪಟ್ಟಿಗೆ ಸೇರಿಸುವಂತೆ ನೋಡಿಕೊಳ್ಳಿ ಎಂದರು.
ರಾಜ್ಯದ ವಿವಿಧ ಕಡೆ ಮಳೆಯಾಗುತ್ತಿದ್ದು, ನಮ್ಮ ಜಿಲ್ಲೆಯಲ್ಲೂ ಮಳೆಯಾಗುವ ಸಂಭವವಿದೆ. ಈ ಹಿಂದೆ ಬರಗಾಲ ಬಂದರೆ ಊಟಕ್ಕೆ ಹೆದರಬೇಕಾದ ಪರಿಸ್ಥಿತಿ ಇತ್ತು. ಆದರೆ ಈಗ ಅಂತಹ ಪರಿಸ್ಥಿತಿ ಇಲ್ಲ. ಸಿದ್ದರಾಮಯ್ಯ ನವರ ಅನ್ನಭಾಗ್ಯ ಇರುವುದರಿಂದ ಯಾರೂ ಸಹ ಊಟಕ್ಕೆ ಪರದಾಡುವ ಪರಿಸ್ಥಿತಿ ಇಲ್ಲ. ಆದರೆ ಬರಗಾಲ ಬಂದರೆ ದನ ಕರುಗಳಿಗೆ ಮೇವಿಗೆ ತೊಂದರೆಯಾಗುತ್ತದೆ. ಹಿಂದೆ ಬರಗಾಲದ ಸಂದರ್ಭದಲ್ಲಿ ಡಿಸಿಸಿ ಬ್ಯಾಂಕ್ ವತಿಯಿಂದ ಗೋಶಾಲೆ ಪ್ರಾರಂಭಿಸಿ ಗೋ ಶಾಲೆಗೆ ಬರುವ ರೈತರಿಗೆ ಉಚಿತವಾಗಿ ಊಟ ನೀಡಲಾಗಿತ್ತು ಎಂದು ಸ್ಮರಿಸಿದ ಅವರು, ಪ್ರಸ್ತುತ ಯಾವುದೇ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇಲ್ಲ. ಜಯಮಂಗಲಿ ನದಿಯಲ್ಲಿ ಈ ಬಾರಿ ಅಂತರ್ಜಲ ಹೆಚ್ಚಾಗಿ ರೈತರಿಗೆ ಅನುಕೂಲವಾಗುತ್ತದೆ ಎಂದು ತಿಳಿಸಿದರು.
ದೊಡ್ಡದಾಳವಟ್ಟ ಶ್ರೀ ಲಕ್ಷ್ಮೀನರಸಿಂಹ ಸ್ವಾಮಿ ಜಾತ್ರಾ ಮಹೋತ್ಸವದಲ್ಲಿ ಯಾವುದೇ ಸಮಸ್ಯೆಯಾಗದಂತೆ ನೋಡಿಕೊಳ್ಳಬೇಕು. ಜಾತ್ರೆಗೆ ಆಂಧ್ರಪ್ರದೇಶ ಸೇರಿದಂತೆ ಹೊರ ರಾಜ್ಯಗಳಿಂದ ಹೆಚ್ಚಿನ ಭಕ್ತಾಧಿಗಳು ಆಗಮಿಸಲಿದ್ದು, ಪೊಲೀಸರು ಮತ್ತು ಅಧಿಕಾರಿಗಳು, ಭಕ್ತಾಧಿಗಳಿಗೆ ಯಾವುದೇ ಸಮಸ್ಯೆ ಆಗದಂತೆ ನೋಡಿಕೊಳ್ಳಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಉಪ ವಿಭಾಗಾಧಿಕಾರಿ ಗೋಟೂರು ಶಿವಪ್ಪ, ತಹಶೀಲ್ದಾರ್ ನಂದಿನಿ ಸೇರಿದಂತೆ ತಾಲ್ಲೂಕು ಮಟ್ಟದ ಅಧಿಕಾರಿಗಳು ಹಾಗೂ ದೇವಸ್ಥಾನ ಸಮಿತಿಯವರು ಉಪಸ್ಥಿತರಿದ್ದರು.

































