
ಬೀದರ್ :ಜೂ.1ಃ ಜಿಲ್ಲೆಯಲ್ಲಿರುವ ಪ್ರತಿಭಾವಂತ ಕಲಾವಿದರನ್ನು ಒಂದೇ ವೇದಿಕೆಯಲ್ಲಿ ನೋಡುವುದು ಸಂತಸದ ವಿಷಯವಾಗಿದೆ. ಜಿಲ್ಲೆಯ ಕಲಾವಿದರಲ್ಲಿ ಅಪಾರ ಪ್ರತಿಭೆ ಅಡಗಿದ್ದು, ಅವರಿಗೆ ರಾಜ್ಯ ಹಾಗೂ ರಾಷ್ಟ್ರಮಟ್ಟದ ವೇದಿಕೆಗಳು ಇನ್ನಷ್ಟು ದೊರೆಯಬೇಕಾದ ಅಗತ್ಯವಿದೆ ಎಂದು ಕರ್ನಾಟಕ ಜಾನಪದ ಆಕಾಡೆಮಿ ಸದಸ್ಯ ವಿಜಯಕುಮಾರ ಸೋನಾರೆ ಹೇಳಿದರು.
ರವಿವಾರ ಬೆಳಿಗ್ಗೆ ನಗರದ ಪೂಜ್ಯ ಚನ್ನಬಸವ ಪಟ್ಟದೇವರು ಜಿಲ್ಲಾ ರಂಗಮಂದಿರದಲ್ಲಿ ಪ್ರಗತಿ ಸಂಗೀತ ಕಲಾ ಸಂಸ್ಥೆ (ರಿ), ಬೀದರ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಬೀದರ ಇವರ ಸಹಯೋಗದಲ್ಲಿ 2025-26ನೇ ಸಾಲಿನ ವಿಶೇಷ ಘಟಕ ಯೋಜನೆಯಡಿ ಸಂಘ-ಸಂಸ್ಥೆಗಳಿಗೆ ನೀಡಲಾಗುವ ಧನಸಹಾಯ ಯೋಜನೆಚಿiÀುಡಿಯಲ್ಲಿ “ಸಂಗೀತ ಸೌರಭ ಸಾಂಸ್ಕೃತಿಕ ಕಾರ್ಯಕ್ರಮವು” ನಡೆದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಗ್ರಾಮೀಣ ಭಾಗಗಳಲ್ಲಿಯೂ ಅನೇಕ ಕಲಾವಿದರು ತಮ್ಮ ವಿಶಿಷ್ಟ ಪ್ರತಿಭೆಯ ಮೂಲಕ ಜನಮನ ಗೆಲ್ಲುತ್ತಿದ್ದಾರೆ. ಆದರೆ ಅವರಿಗೆ ಸೂಕ್ತ ಅವಕಾಶಗಳು ಮತ್ತು ಪೆÇ್ರೀತ್ಸಾಹದ ಕೊರತೆಯಿಂದಾಗಿ ಅವರ ಪ್ರತಿಭೆ ವ್ಯಾಪಕವಾಗಿ ಹೊರಹೊಮ್ಮಲು ಸಾಧ್ಯವಾಗುತ್ತಿಲ್ಲ. ಸರ್ಕಾರ ಹಾಗೂ ಸಾಂಸ್ಕೃತಿಕ ಸಂಸ್ಥೆಗಳು ಇಂತಹ ಕಲಾವಿದರಿಗೆ ಹೆಚ್ಚಿನ ಅವಕಾಶಗಳನ್ನು ಕಲ್ಪಿಸಬೇಕು ಎಂದು ಆಗ್ರಹಿಸಿದರು.
ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದ ರಾಜಶೇಖರ ಶಿವಾಚಾರ್ಯ ಸ್ವಾಮಿ ಅವರು ಮಾತನಾಡಿ, ಬೀದರ ಜಿಲ್ಲೆಯಲ್ಲಿ ಈಗಾಗಲೇ ವಿಶ್ವವಿದ್ಯಾನಿಲಯ ಸ್ಥಾಪನೆಯಾಗಿರುವುದು ಸಂತಸದ ಸಂಗತಿಯಾಗಿದೆ. ಆದರೆ ಆ ವಿಶ್ವವಿದ್ಯಾನಿಲಯದಲ್ಲಿ ಪ್ರತ್ಯೇಕ ಸಂಗೀತ ವಿಭಾಗ ಆರಂಭವಾದರೆ ಜಿಲ್ಲೆಯ ಕಲಾವಿದರ ಬಹುಕಾಲದ ಕನಸು ನನಸಾಗಲಿದೆ ಎಂದು ಹೇಳಿದರು.
ಸಂಗೀತ ಶಿಕ್ಷಣಕ್ಕೆ ಹೆಚ್ಚಿನ ಉತ್ತೇಜನ ನೀಡಬೇಕಾದ ಅಗತ್ಯವಿದ್ದು, ಈ ನಿಟ್ಟಿನಲ್ಲಿ ಜಿಲ್ಲೆಯ ಜನಪ್ರತಿನಿಧಿಗಳು ಹಾಗೂ ರಾಜಕೀಯ ನಾಯಕರ ಇಚ್ಛಾಶಕ್ತಿ ಮತ್ತು ಬದ್ಧತೆ ಅತ್ಯಂತ ಪ್ರಮುಖವಾಗಿದೆ ಎಂದು ಅಭಿಪ್ರಾಯಪಟ್ಟರು. ಸಂಗೀತವು ಕೇವಲ ಕಲೆಯಲ್ಲ, ಅದು ವ್ಯಕ್ತಿಯ ಮನಸ್ಸಿಗೆ ನೆಮ್ಮದಿ, ಶಾಂತಿ ಮತ್ತು ಸಂಸ್ಕಾರವನ್ನು ನೀಡುವ ಶಕ್ತಿಯಾಗಿದೆ. ಸಂಗೀತದ ಮೂಲಕ ಸಮಾಜದಲ್ಲಿ ಸೌಹಾರ್ದತೆ, ಮಾನವೀಯ ಮೌಲ್ಯಗಳು ಹಾಗೂ ಆಧ್ಯಾತ್ಮಿಕ ಚಿಂತನೆಗಳು ಬೆಳೆಯುತ್ತವೆ ಎಂದು ತಿಳಿಸಿದರು.
ಪಂಚಾಯತ್ ಕ್ಷೇಮಾಭಿವೃದ್ಧಿ ಸಂಘದ ರಾಜ್ಯ ಖಜಾಂಚಿಯಾದ ಶರತಕುಮಾರ ಅಭಿಮಾನ್ ಅವರು ಮಾತನಾಡಿ, ಇಂದಿನ ಮಕ್ಕಳಿಗೆ ಕೇವಲ ಪಠ್ಯಾಧಾರಿತ ಶಿಕ್ಷಣ ನೀಡುವುದಷ್ಟೇ ಸಾಕಾಗುವುದಿಲ್ಲ. ಅವರಲ್ಲಿರುವ ಪ್ರತಿಭೆ, ಆಸಕ್ತಿ ಹಾಗೂ ಸಾಮಥ್ರ್ಯವನ್ನು ಗುರುತಿಸಿ ಕೌಶಲ್ಯ ಆಧಾರಿತ ಶಿಕ್ಷಣ ನೀಡುವುದು ಇಂದಿನ ಅಗತ್ಯವಾಗಿದೆ ಎಂದು ಹೇಳಿದರು.
ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕದ ಜ್ಞಾನದ ಜೊತೆಗೆ ಸಂಗೀತ, ನೃತ್ಯ, ಕಲೆ, ಕ್ರೀಡೆ ಹಾಗೂ ಇತರ ಸಹಪಠ್ಯ ಚಟುವಟಿಕೆಗಳಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಿದರೆ ಅವರ ವ್ಯಕ್ತಿತ್ವ ವಿಕಸನಕ್ಕೆ ಸಹಕಾರಿಯಾಗುತ್ತದೆ. ಇಂತಹ ಚಟುವಟಿಕೆಗಳು ಮಕ್ಕಳಲ್ಲಿ ಆತ್ಮವಿಶ್ವಾಸ, ನಾಯಕತ್ವ ಗುಣ ಹಾಗೂ ಸೃಜನಶೀಲತೆಯನ್ನು ಬೆಳೆಸುತ್ತವೆ ಎಂದು ಅಭಿಪ್ರಾಯಪಟ್ಟರು.
ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರ ಸದಸ್ಯ ಡಾ. ಸಂಜೀವಕುಮಾರ ಅತಿವಾಳೆ ಮಾತನಾಡಿದರು. ಪ್ರಗತಿ ಸಂಗೀತ ಕಲಾ ಸಂಸ್ಥೆಯ ಅಧ್ಯಕ್ಷರಾದ ರಮೇಶ ಕೋಳಾರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸಿದ್ರಾಮ ಸಿಂಧೆ, ಹಿರಿಯ ಕಲಾವಿದರಾದ, ವೈಕುಂಠ ದತ್ತ ಮಹಾರಾಜ, ರಾಜೇಂದ್ರಸಿಂಗ್ ಪವಾರ, ಶಂಭುಲಿಂಗ್ ವಾಲ್ದೊಡ್ಡಿ, ಖ್ಯಾತ ವೈದ್ಯ ಡಾ.ಲೋಕೇಶ ಹೊಸಮನಿ, ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಪ್ರಾಂಶುಪಾಲರಾದ ಡಾ.ರಂಜನಾ ಪಾಟೀಲ್, ಡಾ. ಲೋಕೇಶ ಹೊಸಮನಿ, ಶ್ರೀಮತಿ ರೇಖಾ ಅಪ್ಪಾರಾವ್ ಸೌದಿ, ಇತರರು ವೇದಿಕೆ ಮೇಲಿದ್ದರು.
ಅದೇ ಸಂದರ್ಭದಲ್ಲಿ ಖ್ಯಾತ ಸಂಗೀತ, ಹಾಗೂ ತಬಲಾ ವಾದನದಲ್ಲಿ ಹೆಸರು ಗಳಿಸಿರುವ ಕಲಾವಿದರಾದ ಪಾಂಡು ಮಹಾರಾಜ, ವಾಮಾನರಾವ್ ಕುಲಕುರ್ಣಿ, ಮಾಣಿಕ ರೆಡ್ಡಿ, ಅಜಯ ಸಾಗಾಂವಕರ್, ಇವರುಗಳನ್ನು ಸನ್ಮಾನಿಸಿ ಗೌರವಿಸಲಾಯಿತು.
ಪ್ರಾರಂಭದಲ್ಲಿ ಶ್ರೀಮತಿ ತ್ರಿವೇಣಿ ರಮೇಶ ಕೋಳಾರ್ ಪ್ರಾಸ್ತಾವಿಕ ಮಾತನಾಡಿದರು. ಡಾ. ಸುಜಾತಾ ಹೊಸಮನಿ ಸ್ವಾಗತಿಸಿದರು, ದೇವಿದಾಸ ಜೋಶಿ ನಿರೂಪಿಸಿ, ಶ್ರೀಮತಿ ಶೇಶಿಕಲಾ ಎಖೇಳ್ಳಿ ವಂದಿಸಿದರು.
ನೃತ್ಯ-ಸಂಗೀತ ಪ್ರದರ್ಶನಗಳು ಮನಸೂರೆಗೊಂಡವು ಃ
ಕಾರ್ಯಕ್ರಮದ ಅಂಗವಾಗಿ ನಡೆದ ನೃತ್ಯೋತ್ಸವ ಮತ್ತು ಸಂಗೀತ ಪ್ರದರ್ಶನಗಳು ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾದವು. ಕು. ಶೃದ್ಧಾ ರವೀಂದ್ರ ಹಾಗೂ ತಂಡ ಅವರಿಂದ ಪ್ರಸ್ತುತಗೊಂಡ ಭರತನಾಟ್ಯವು ಭಾರತೀಯ ಶಾಸ್ತ್ರೀಯ ನೃತ್ಯದ ಸೊಗಡನ್ನು ಅನಾವರಣಗೊಳಿಸಿ ನೋಡುಗರ ಗಮನ ಸೆಳೆಯಿತು. ಅದೇ ರೀತಿ ಕು. ಶ್ರೇಯಾ ಕೊಳಾರಕರ್ ಹಾಗೂ ತಂಡ ಅವರ ಕಥಕ್ ನೃತ್ಯ ಪ್ರದರ್ಶನವು ತನ್ನ ಲಯಬದ್ಧ ಹೆಜ್ಜೆಗಳು ಮತ್ತು ಮನಮೋಹಕ ಅಭಿನಯದ ಮೂಲಕ ಸಭಿಕರಿಂದ ಭಾರೀ ಚಪ್ಪಾಳೆ ಗಿಟ್ಟಿಸಿತು.
ಇದೇ ಸಂದರ್ಭದಲ್ಲಿ ಹಿರಿಯ ಜಾನಪದ ಕಲಾವಿದ ಶಂಭುಲಿಂಗ ವಾಲದೊಡ್ಡಿ ಅವರು ಪ್ರಸ್ತುತಪಡಿಸಿದ ಜಾನಪದ ಗೀತೆಗಳು ಗ್ರಾಮೀಣ ಸಂಸ್ಕೃತಿ ಮತ್ತು ಜನಪದ ಪರಂಪರೆಯ ಸೊಗಡನ್ನು ಪರಿಚಯಿಸಿದವು. ಅವರ ಗಾಯನವು ಪ್ರೇಕ್ಷಕರನ್ನು ಮಂತ್ರಮುಗ್ಧರನ್ನಾಗಿಸಿತು.
ಇದಲ್ಲದೆ ಐನೋದ್ದಿನ್ ವಾರ್ಸಿ, ಕು.ರೋಶನ್ ಕೋಳಾರಕರ್, ರಾಕೇಶ, ದರ್ಶನ, ಪ್ರದೀಪ, ವಿಜಯ, ಸೋಮನಾಥ, ನರೇಶ, ಸುರೇಶ, ನರಸಪ್ಪ ಹಾಗೂ ಸ್ವಾಮಿದಾಸ ಅವರು ನೀಡಿದ ಸಂಗೀತ ಮತ್ತು ಜಾನಪದ ಕಲಾ ಪ್ರದರ್ಶನಗಳು ಕಾರ್ಯಕ್ರಮಕ್ಕೆ ಮತ್ತಷ್ಟು ಮೆರುಗು ತಂದವು. ಕಲಾವಿದರ ಮನಮೋಹಕ ಪ್ರದರ್ಶನಗಳು ನೆರೆದಿದ್ದ ಕಲಾಭಿಮಾನಿಗಳ ಮನಗೆದ್ದು, ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿ ಮೂಡಿಬಂದವು.
ಸಂಗೀತ, ನೃತ್ಯ ಹಾಗೂ ಜಾನಪದ ಕಲೆಯ ಸಮನ್ವಯದಿಂದ ಕೂಡಿದ ಈ ಸಾಂಸ್ಕೃತಿಕ ಕಾರ್ಯಕ್ರಮವು ನೋಡುಗರ ಕಣ್ಮನ ಸೆಳೆದು, ಕಲೆಯ ವೈಭವವನ್ನು ಅನಾವರಣಗೊಳಿಸಿತು.
ಕಾರ್ಯಕ್ರಮದಲ್ಲಿ ಕಲಾವಿದರು, ಸಾಹಿತಿಗಳು, ಮಹಿಳೆಯರು, ಮಕ್ಕಳು ಅನೇಕರು ಉಪಸ್ಥಿತರಿದ್ದರು.
























