Home ಜಿಲ್ಲೆ ಲಿಂಗತ್ವ ಅಲ್ಪಸಂಖ್ಯಾತರ ಹಕ್ಕುಗಳ ಸಂರಕ್ಷಣೆಗೆ ಒತ್ತು: ಪ್ರತ್ಯೇಕ ವೈದ್ಯಕೀಯ ಪರೀಕ್ಷೆ ಕಾನೂನಿಗೆ ವಿರೋಧ

ಲಿಂಗತ್ವ ಅಲ್ಪಸಂಖ್ಯಾತರ ಹಕ್ಕುಗಳ ಸಂರಕ್ಷಣೆಗೆ ಒತ್ತು: ಪ್ರತ್ಯೇಕ ವೈದ್ಯಕೀಯ ಪರೀಕ್ಷೆ ಕಾನೂನಿಗೆ ವಿರೋಧ

ಯಾದಗಿರಿ:ಜು.೧೧: ಲಿಂಗತ್ವ ಅಲ್ಪಸಂಖ್ಯಾತರಿಗೆ ಮಾತ್ರ ವೈದ್ಯಕೀಯ ಪರೀಕ್ಷೆಯ ಮೂಲಕ ಲಿಂಗತ್ವವನ್ನು ದೃಢೀಕರಿಸುವ ಕಾನೂನು ಜಾರಿಗೊಳಿಸುವ ಪ್ರಸ್ತಾವನೆಗೆ ಲಿಂಗತ್ವ ಅಲ್ಪಸಂಖ್ಯಾತರ ಹಕ್ಕುಗಳ ಹೋರಾಟಗಾರ್ತಿ ಹಾಗೂ ಸುಪ್ರೀಂ ಕೋರ್ಟ್ ಸಲಹಾ ಸಮಿತಿಯ ಸದಸ್ಯೆ ಅಕ್ಷೆ ಪದ್ಮಶಾಲಿ ತೀವ್ರ ವಿರೋಧ ವ್ಯಕ್ತಪಡಿಸಿದರು. “ಉಳಿದವರಿಗೆ ಇಲ್ಲದ ಕಾನೂನು ನಮಗೇಕೆ?” ಎಂದು ಅವರು ಪ್ರಶ್ನಿಸಿದರು.

ಶುಕ್ರವಾರ ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ಭಯವಲ್ಲ, ಪ್ರೀತಿ ಮಾಡಿ” ಅಭಿಯಾನದಡಿ ಆಯೋಜಿಸಲಾಗಿರುವ ಲಿಂಗತ್ವ ಅಲ್ಪಸಂಖ್ಯಾತರ ಸಂವಾದ ಕಾರ್ಯಕ್ರಮದ ಕುರಿತು ಮಾಹಿತಿ ನೀಡಿದರು.

ಸಮಾಜದಲ್ಲಿ ಲಿಂಗತ್ವ ಅಲ್ಪಸಂಖ್ಯಾತರು ಅಪಮಾನ, ಶೋಷಣೆ, ನಿರುದ್ಯೋಗ, ಬಡತನ ಹಾಗೂ ಕುಟುಂಬದ ನಿರ್ಲಕ್ಷ್ಯದಂತಹ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಅವರಿಗೆ ಸರ್ಕಾರ ಅಗತ್ಯ ಮೂಲಭೂತ ಸೌಲಭ್ಯಗಳನ್ನು ಒದಗಿಸಿ, ಸಮಾಜದ ಮುಖ್ಯವಾಹಿನಿಗೆ ತರುವ ನಿಟ್ಟಿನಲ್ಲಿ ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಕಳೆದ ಮೂರು ದಶಕಗಳಿಂದ ತಮ್ಮ ಹಕ್ಕುಗಳಿಗಾಗಿ ಸಾವಿರಾರು ಲಿಂಗತ್ವ ಅಲ್ಪಸಂಖ್ಯಾತರು ನಿರಂತರ ಹೋರಾಟ ನಡೆಸುತ್ತಿದ್ದರೂ, ಇನ್ನೂ ಸಮಾನ ಅವಕಾಶಗಳು ಮತ್ತು ಗೌರವಯುತ ಬದುಕು ಸಂಪೂರ್ಣವಾಗಿ ದೊರೆಯುತ್ತಿಲ್ಲ ಎಂದು ಅವರು ಬೇಸರ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಆಶಾಕಿರಣ ಸಾಮಾಜಿಕ ಸೇವಾ ಸಂಸ್ಥೆಯ ಅಧ್ಯಕ್ಷೆ ಮಾಯಾ ಎಸ್.ಆರ್. ನಾಯಕ ಹಾಗೂ ರಾಯಚೂರಿನ ಮಾಳವಿಕಾ ಮಾತನಾಡಿ, ಲಿಂಗತ್ವ ಅಲ್ಪಸಂಖ್ಯಾತರು ಸಮಾಜದಲ್ಲಿ ಎದುರಿಸುತ್ತಿರುವ ತಾರತಮ್ಯ, ಅವರ ಬದುಕಿನ ಸವಾಲುಗಳು, ಆಶಯಗಳು ಹಾಗೂ ಮಾನವೀಯ ಗೌರವದೊಂದಿಗೆ ಬದುಕುವ ಹಕ್ಕಿನ ಕುರಿತು ವಿವರಿಸಿದರು.

ಸಂವಾದದಲ್ಲಿ ಭಾಗವಹಿಸಿದ್ದ ವಿವಿಧ ಪೊಲೀಸ್ ಠಾಣೆಗಳ ಅಧಿಕಾರಿಗಳು, ಕೆಲ ಲಿಂಗತ್ವ ಅಲ್ಪಸಂಖ್ಯಾತರು ಸಾರ್ವಜನಿಕರಿಗೆ ಕಿರುಕುಳ ನೀಡುವುದು, ಬಿಕ್ಷಾಟನೆ ನಡೆಸುವುದು ಹಾಗೂ ರಾಷ್ಟ್ರೀಯ ಹೆದ್ದಾರಿಗಳಲ್ಲಿ ವಾಹನ ಸವಾರರಿಂದ ಹಣಕ್ಕಾಗಿ ಒತ್ತಡ ಹೇರುವ ಘಟನೆಗಳ ಬಗ್ಗೆ ಪ್ರಸ್ತಾಪಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಅಕ್ಷೆ ಪದ್ಮಶಾಲಿ, ಮಾಯಾ ಎಸ್.ಆರ್. ನಾಯಕ ಹಾಗೂ ಮಾಳವಿಕಾ, ಇಂತಹ ಕಾನೂನುಬಾಹಿರ ಚಟುವಟಿಕೆಗಳಲ್ಲಿ ತೊಡಗುವವರ ವಿರುದ್ಧ ಕಾನೂನು ಪ್ರಕಾರ ಕ್ರಮ ಕೈಗೊಳ್ಳಬೇಕು ಎಂದು ಸ್ಪಷ್ಟಪಡಿಸಿದರು.