
ಕಲಬುರಗಿ :ಜೂ.26: ಮಾದಕ ವಸ್ತುಗಳ ಸೇವನೆಯಿಂದ ವ್ಯಕ್ತಿಯ ದೈಹಿಕ ಮತ್ತು ಮಾನಸಿಕ ಆರೋಗ್ಯ ಹಾಳುಮಾಡುವುದಲ್ಲದೆ, ವೈಯಕ್ತಿಕ ಜೀವನ ಮತ್ತು ಸಮಾಜದ ಸ್ವಾಸ್ಥ್ಯವನ್ನು ಸಂಪೂರ್ಣವಾಗಿ ನಾಶಪಡಿಸುತ್ತದೆ.ಆದ್ದರಿಂದ ಇದರಿಂದ ದೂರವಿರಬೇಕು ಎಂದು ಕುಟುಂಬ ವೈದ್ಯ ಡಾ.ರಾಜಶೇಖರ ಪಾಟೀಲ ತಿಳಿಸಿದರು. ನಗರದ ಆಳಂದ ರಸ್ತೆಯ ಸಂತೋಷ ಕಾಲನಿ ಕ್ರಾಸ್ ಸಮೀಪದ ‘ರಿಪಬ್ಲಿಕ್ ಸ್ಪೋಕನ್ ಇಂಗ್ಲೀಷ್ ಅಕಾಡೆಮಿ’ಯಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಶುಕ್ರವಾರ ಜರುಗಿದ “ಅಂತಾರಾಷ್ಟ್ರೀಯ ಮಾದಕ ವಿರೋಧಿ ದಿನಾಚರಣೆ”ಯ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು. ಮಾದಕ ವಸ್ತುಗಳು ಮೆದುಳಿನ ಕಾರ್ಯನಿರ್ವಹಣೆಯ ಮೇಲೆ ತೀವ್ರ ಪರಿಣಾಮ ಬೀರುತ್ತದೆ. ಏಕಾಗ್ರತೆ ಮತ್ತು ಜ್ಞಾಪಕ ಶಕ್ತಿ ಕುಂದುವುದು. ಲಿವರ್, ಮೂತ್ರಪಿಂಡ ಮತ್ತು ಹೃದಯದ ಸಮಸ್ಯೆಗಳು ಉಂಟಾಗಬಹುದು. ಖಿನ್ನತೆ, ಆತಂಕ, ಭ್ರಮೆ ಮತ್ತು ತೀವ್ರ ಮಾನಸಿಕ ಅಸ್ವಸ್ಥತೆಗೆ ಒಳಗಾಗುವುದು. ರೋಗ ನಿರೋಧಕ ಶಕ್ತಿ ಕುಂದುವಿಕೆ ಸೇರಿದಂತೆ ಅನೇಕ ದುಷ್ಪರಿಣಾಮಗಳು ಉಂಟಾಗುತ್ತವೆ ಎಂದರು.
ಉಪನ್ಯಾಸಕ ಎಚ್.ಬಿ.ಪಾಟೀಲ ಮಾತನಾಡಿ, ಮಾದಕ ದ್ರವ್ಯಗಳ ಸೇವೆನೆಯಿಂದ ಅಪರಾಧ ಕೃತ್ಯಗಳು, ಹಿಂಸಾಚಾರ ಮತ್ತು ಕಳ್ಳತನದಂತಹ ಚಟುವಟಿಕೆಗಳಿಗೆ ದಾರಿಯಾಗುವುದು.ಕುಟುಂಬದಲ್ಲಿ ಕಲಹ, ವಿಚ್ಛೇದನ ಮತ್ತು ಆರ್ಥಿಕ ದಿವಾಳಿತನ, ಸಮಾಜದಲ್ಲಿ ಗೌರವ ಕಳೆದುಕೊಳ್ಳುವುದು ಮತ್ತು ಅಪರಾಧಿ ಸ್ಥಾನದಲ್ಲಿ ಕಂಡುಬರುತ್ತಾರೆ. ಮಾದಕ ಸೇವನೆ ತಡೆಗಟ್ಟುವ ನಿಟ್ಟಿನಲ್ಲಿ ಶಾಲಾ-ಕಾಲೇಜು ಹಂತದಿಂದಲೇ ಮಾದಕ ವ್ಯಸನದ ದುಷ್ಪರಿಣಾಮಗಳ ಬಗ್ಗೆ ವಿದ್ಯಾರ್ಥಿಗಳಿಗೆ ಅರಿವು ಮೂಡಿಸುವುದು, ಪೆÇೀಷಕರು ಮಕ್ಕಳ ದೈನಂದಿನ ಚಟುವಟಿಕೆಗಳು ಮತ್ತು ಅವರ ಸ್ನೇಹಿತರ ಬಗ್ಗೆ ನಿಗಾ ವಹಿಸುವುದು, ಒತ್ತಡ, ಖಿನ್ನತೆ ಅಥವಾ ಮಾನಸಿಕ ಸಮಸ್ಯೆಗಳಿರುವ ಯುವಕರಿಗೆ ಸೂಕ್ತ ಕೌನ್ಸೆಲಿಂಗ್ ಮತ್ತು ಚಿಕಿತ್ಸೆ ಒದಗಿಸುವುದಂತಹ ಕ್ರಮಗಳನ್ನು ಕೈಗೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷ ದತ್ತು ಹಡಪದ, ಸಮಾಜ ಸೇವಕರಾದ ದಿನೇಶ್ ಮಿಶ್ರಾ, ಮಲ್ಲಿಕಾರ್ಜುನ ಹೊಸ ಮನಿ, ನಾಗೇಶ್ ಪೂಜಾರಿ ಸೇರಿದಂತೆ ಇನ್ನಿತರರಿದ್ದರು.




















