Home ಜಿಲ್ಲೆ ಬರ ಪರಿಸ್ಥಿತಿ ಅವಲೋಕನ ಸಭೆ

ಬರ ಪರಿಸ್ಥಿತಿ ಅವಲೋಕನ ಸಭೆ


ನರಗುಂದ,ಆ.೧೦: ಗದಗ ಜಿಲ್ಲೆ ಸಂಪೂರ್ಣವಾಗಿ ಬರ ಪರಿಸ್ಥಿತಿಯನ್ನು ಎದುರಿಸುತ್ತಿದ್ದು, ವಾಡಿಕೆ ಮಳೆಗಿಂತ ಜಿಲ್ಲೆಯಲ್ಲಿ ಶೇ. ೩೨ರಷ್ಟು ಮಳೆ ಕೊರತೆಯಾಗಿದೆ. ಬೆಳೆ ಹಾನಿಯ ನಿಖರ ಸಮೀಕ್ಷೆ ನಡೆಸಿ, ಅರ್ಹ ಪ್ರತಿಯೊಬ್ಬ ರೈತನಿಗೂ ಸರ್ಕಾರದ ಪರಿಹಾರ ತಲುಪುವಂತೆ ಅಧಿಕಾರಿಗಳು ಸಮಗ್ರ ಹಾಗೂ ವಾಸ್ತವಿಕ ವರದಿ ಸಲ್ಲಿಸಬೇಕು ಎಂದು ಸಂಪುಟ ದರ್ಜೆ ಸಚಿವ ಬಸವರಾಜ ರಾಯರಡ್ಡಿ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.


ನರಗುಂದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ರವಿವಾರ ಜರುಗಿದ ನರಗುಂದ ತಾಲ್ಲೂಕಿನ ಬರ ಪರಿಸ್ಥಿತಿ ಅವಲೋಕನ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ತಾಲ್ಲೂಕಿನಲ್ಲಿ ಒಟ್ಟು ೧೫ ಸ್ಥಳಗಳಲ್ಲಿ ಮಳೆ ಮಾಪನ ಕೇಂದ್ರಗಳಿದ್ದು, ಅವುಗಳ ವರದಿಯ ಆಧಾರದ ಮೇಲೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಆದರೆ, ತಾವು ಸ್ಥಳಕ್ಕೆ ಭೇಟಿ ನೀಡಿ ಬರ ಪರಿಸ್ಥಿತಿಯನ್ನು ಅವಲೋಕಿಸುವ ಸಂದರ್ಭದಲ್ಲಿ ಹಲವು ಸೂಕ್ಷ÷್ಮ ಅಂಶಗಳನ್ನು ಗಮನಿಸಿದ್ದೇನೆ. ರೈತರ ಹೊಲಗಳಲ್ಲಿನ ನೀರಿನ ಗುಂಡಿಗಳಲ್ಲಿಯೇ ನೀರಿಲ್ಲದ ಸ್ಥಿತಿ ನಿರ್ಮಾಣವಾಗಿದ್ದು, ಬೆಳೆಗಳು ವಣಗುವ ಹಂತಕ್ಕೆ ತಲುಪಿವೆ ಎಂದು ಆತಂಕ ವ್ಯಕ್ತಪಡಿಸಿದರು.


ಕೇಂದ್ರ ಸರ್ಕಾರವು ೧೬ನೇ ಹಣಕಾಸು ಯೋಜನೆಯಡಿ ಎನ್‌ಡಿಆರ್‌ಎಫ್ ಮಾರ್ಗಸೂಚಿಗಳ ಪ್ರಕಾರ ಪ್ರತಿ ಹೆಕ್ಟೇರ್‌ಗೆ ರೂ. ೮,೫೦೦ರವರೆಗೆ ಪರಿಹಾರ ನೀಡಲು ಅವಕಾಶ ಕಲ್ಪಿಸಿದೆ. ಈ ಕುರಿತು ಜಿಲ್ಲಾಧಿಕಾರಿ ಹಾಗೂ ಕೃಷಿ ಇಲಾಖೆಯ ಅಧಿಕಾರಿಗಳಿಗೆ ಈಗಾಗಲೇ ಸೂಚನೆ ನೀಡಲಾಗಿದೆ. ಬೆಳೆ ಹಾನಿ ಕುರಿತು ನಿಖರವಾದ ಮತ್ತು ವಾಸ್ತವಿಕ ವರದಿ ಸಲ್ಲಿಸಬೇಕು. ಯಾವುದೇ ಅರ್ಹ ರೈತ ಪರಿಹಾರದಿಂದ ವಂಚಿತರಾಗದAತೆ ಎಚ್ಚರಿಕೆ ವಹಿಸಬೇಕು ಎಂದು ಸಚಿವ ರಾಯರಡ್ಡಿ ನಿರ್ದೇಶನ ನೀಡಿದರು.
ಬರದಿಂದ ಹಾನಿಗೊಳಗಾದ ರೈತರಿಗೆ ಸರ್ಕಾರದ ವಿವಿಧ ಯೋಜನೆಗಳ ಮೂಲಕ ನೆರವು ದೊರಕಿಸಲು ಕ್ರಮ ಕೈಗೊಳ್ಳಲಾಗುವುದು. ಖಾತ್ರಿ ಯೋಜನೆ ಹೊಸದಾಗಿ ಜಾರಿಯಲ್ಲಿದ್ದು, ಗ್ರಾಮೀಣ ಪ್ರದೇಶದ ಕೂಲಿ ಕಾರ್ಮಿಕರಿಗೆ ಉದ್ಯೋಗ ದೊರಕಿಸಲು ಈ ಯೋಜನೆಯಡಿ ಹೆಚ್ಚಿನ ಮಾನವ ದಿನಗಳನ್ನು ಸೃಷ್ಟಿಸಬೇಕು. ಯೋಜನೆಗೆ ಕೇಂದ್ರ ಸರ್ಕಾರ ಶೇ. ೬೦ ಹಾಗೂ ರಾಜ್ಯ ಸರ್ಕಾರ ಶೇ. ೪೦ರಷ್ಟು ಅನುದಾನ ನೀಡಲಿದೆ ಎಂದು ತಿಳಿಸಿದರು.


ಅದೇ ರೀತಿ ಫಸಲ್ ಬೀಮಾ ಯೋಜನೆಯಡಿ ಸಹ ಅರ್ಹ ರೈತರಿಗೆ ಪರಿಹಾರ ದೊರಕಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಬೇಕು. ಒಟ್ಟಾರೆ ಬೆಳೆ ಹಾನಿಗೊಳಗಾದ ಎಲ್ಲ ರೈತರಿಗೆ ಸರ್ಕಾರದ ನೆರವು ತಲುಪುವಂತೆ ಅಧಿಕಾರಿಗಳು ಸಮಗ್ರ ವರದಿ ಸಿದ್ಧಪಡಿಸಬೇಕು. ನೀರಾವರಿ ಪ್ರದೇಶ ಹಾಗೂ ವಾಣಿಜ್ಯ/ಇತರೆ ಪ್ರದೇಶಗಳಲ್ಲಿ ಬೆಳೆದ ಬೆಳೆಗಳಿಗೂ ಪರಿಹಾರ ದೊರಕಿಸುವ ಕುರಿತು ಸರ್ಕಾರದ ಹಂತದಲ್ಲಿ ಅಗತ್ಯ ಪ್ರಯತ್ನ ನಡೆಸಲಾಗುವುದು ಎಂದು ಸಚಿವರು ಹೇಳಿದರು.
ನಗರ ನೀರು ಸರಬರಾಜಿಗೆ ಅಗತ್ಯ ಪ್ರಸ್ತಾವನೆ ಸಲ್ಲಿಸಲು ಸೂಚನೆ :
ನರಗುಂದ ಪಟ್ಟಣದ ಕುಡಿಯುವ ನೀರು ಸರಬರಾಜು ವ್ಯವಸ್ಥೆಯನ್ನು ಮತ್ತಷ್ಟು ಸಮರ್ಪಕಗೊಳಿಸಲು ಅಗತ್ಯವಿರುವ ಕಾಮಗಾರಿಗಳ ಕುರಿತು ಕೂಡಲೇ ಪ್ರಸ್ತಾವನೆ ಸಲ್ಲಿಸುವಂತೆ ಸಂಬAಧಿಸಿದ ಅಧಿಕಾರಿಗಳಿಗೆ ಸಚಿವ ರಾಯರಡ್ಡಿ ಸೂಚಿಸಿದರು. ಸಭೆಯಲ್ಲಿ ಪಟ್ಟಣದ ನೀರು ಸರಬರಾಜು ಕುರಿತಂತೆ ಮುಖ್ಯಾಧಿಕಾರಿ ಸಮರ್ಪಕ ಮಾಹಿತಿ ನೀಡದಿದ್ದಕ್ಕೆ ಸಚಿವರು ಅಸಮಾಧಾನ ವ್ಯಕ್ತಪಡಿಸಿ ತರಾಟೆಗೆ ತೆಗೆದುಕೊಂಡರು.
ಶಾಸಕ ಸಿ.ಸಿ. ಪಾಟೀಲ ಮಾತನಾಡಿ, ರೈತರ ಸಂಕಷ್ಟದ ಬಗ್ಗೆ ಸಚಿವ ಬಸವರಾಜ ರಾಯರಡ್ಡಿ ಅವರು ವಿಶೇಷ ಕಾಳಜಿ ವಹಿಸಿ ನರಗುಂದ ತಾಲ್ಲೂಕನ್ನೂ ಬರಪೀಡಿತ ಪ್ರದೇಶವೆಂದು ಘೋಷಿಸುವ ನಿಟ್ಟಿನಲ್ಲಿ ಮುಂದಾಗಿರುವುದು ರೈತರಿಗೆ ನೆಮ್ಮದಿ ತಂದಿದೆ ಎಂದು ಹೇಳಿದರು.


ಸಚಿವರ ಸೂಚನೆಗಳನ್ನು ಅಧಿಕಾರಿಗಳು ಸಮರ್ಪಕವಾಗಿ ಪಾಲಿಸಿ, ತಾಲ್ಲೂಕಿನ ರೈತರಿಗೆ ಗರಿಷ್ಠ ಪ್ರಮಾಣದಲ್ಲಿ ಸರ್ಕಾರದ ನೆರವು ದೊರಕುವಂತೆ ಕಾರ್ಯನಿರ್ವಹಿಸಬೇಕು ಎಂದರು.
ಫಸಲ್ ಬೀಮಾ ಯೋಜನೆಯ ಪರಿಹಾರ ಮೊತ್ತವು ನಿಜವಾದ ಅರ್ಹ ರೈತರಿಗೆ ತಲುಪುವ ಬದಲು ಕೆಲವೆಡೆ ಏಜೆಂಟರ ಜಾಲದ ಮೂಲಕ ದುರ್ಬಳಕೆಯಾಗುತ್ತಿರುವ ಆರೋಪಗಳಿದ್ದು, ಈ ಬಗ್ಗೆ ಸೂಕ್ತ ಪರಿಶೀಲನೆ ನಡೆಸಬೇಕು. ಇದೊಂದು ದೊಡ್ಡ ಜಾಲವಾಗಿ ಬೆಳೆಯದಂತೆ ಎಚ್ಚರಿಕೆ ವಹಿಸಿ, ಅರ್ಹ ರೈತರಿಗೆ ಮಾತ್ರ ವಿಮಾ ಮೊತ್ತ ತಲುಪುವಂತೆ ಕ್ರಮ ಕೈಗೊಳ್ಳಬೇಕು ಎಂದು ಸಿಸಿ ಪಾಟೀಲ ತಿಳಿಸಿದರು.
ಸಭೆಯಲ್ಲಿ ನರಗುಂದ ತಾಲ್ಲೂಕಿಗೆ ಸಂಬAಧಿಸಿದAತೆ ವಿವಿಧ ಇಲಾಖೆಗಳ ಅಧಿಕಾರಿಗಳು ಬರ ಪರಿಸ್ಥಿತಿ, ಬೆಳೆ ಹಾನಿ, ಕುಡಿಯುವ ನೀರು ಹಾಗೂ ಉದ್ಯೋಗ ಖಾತ್ರಿ ಯೋಜನೆಯ ಕುರಿತು ವಿವರವಾದ ಮಾಹಿತಿ ನೀಡಿದರು.


ಸಭೆಯಲ್ಲಿ ಶಾಸಕ ಸಿ.ಸಿ. ಪಾಟೀಲ, ಗ್ಯಾರಂಟಿ ಸಮಿತಿ ಅಧ್ಯಕ್ಷ ವಿವೇಕ ಯಾವಗಲ್, ಸ್ಥಳೀಯ ಜನಪ್ರತಿನಿಧಿಗಳು, ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್, ಅಪರ ಜಿಲ್ಲಾಧಿಕಾರಿ ಡಾ. ದುರಗೇಶ್ ಕೆ.ಆರ್., ಸಹಾಯಕ ಆಯುಕ್ತ ಗಂಗಪ್ಪ ಎಂ., ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಸಿ.ಆರ್. ಮುಂಡರಗಿ, ಜಂಟಿ ಕೃಷಿ ನಿರ್ದೇಶಕಿ ಚೇತನಾ ಪಾಟೀಲ, ತೋಟಗಾರಿಕೆ ಜಂಟಿ ನಿರ್ದೇಶಕ ಚಿದಾನಂದ, ತಹಶೀಲ್ದಾರ ಶ್ರೀಶೈಲ ತಳವಾರ, ಇಒ ಶ್ರೀಧರ್ ಚಿನಗುಡಿ ಸೇರಿದಂತೆ ತಾಲ್ಲೂಕು ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.